ADVERTISEMENT

ನಟಿಯರಾದ ರಕುಲ್‌, ಸಾರಾ ಅಲಿ ಖಾನ್‌ ಕೊರಳಿಗೆ ಸುತ್ತಿಕೊಂಡ ಡ್ರಗ್ಸ್‌ ನಂಟು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 7:33 IST
Last Updated 12 ಸೆಪ್ಟೆಂಬರ್ 2020, 7:33 IST
ರಕುಲ್ ‍ಪ್ರೀತ್ ಸಿಂಗ್‌
ರಕುಲ್ ‍ಪ್ರೀತ್ ಸಿಂಗ್‌   
""
""
""

‌ಡ್ರಗ್ಸ್‌ ಜಾಲದಲ್ಲಿ ಭಾಗಿಯಾದ ಆರೋಪದಡಿ ಕನ್ನಡದ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ‍್ರಾನಿ ಈಗಾಗಲೇ ಸಿಸಿಬಿಯ ಬಂಧನಕ್ಕೆ ಒಳಗಾಗಿದ್ದಾರೆ. ಇಬ್ಬರ ವಿರುದ್ಧ ತನಿಖೆ ಮುಂದುವರಿದಿದೆ. ಈ ಮಧ್ಯೆ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣದ ಸುತ್ತ ಡ್ರಗ್ಸ್‌ ಜಾಲದ ನಂಟಿರುವ ಕುರಿತು ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ)ಯು ತನಿಖೆಯನ್ನು ಚುರುಕುಗೊಳಿಸಿದೆ.

ಬಂಧನಕ್ಕೆ ಒಳಗಾಗಿರುವ ಸುಶಾಂತ್‌ ಪ್ರೇಯಸಿ, ನಟಿ ರಿಯಾ ಚಕ್ರವರ್ತಿ ಡ್ರಗ್ಸ್‌ ಸೇವನೆ ಸಂಬಂಧ ಬಾಲಿವುಡ್‌ನ 25 ಸೆಲೆಬ್ರಿಟಿಗಳ ಹೆಸರನ್ನು ಬಾಯ್ಬಿಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪೈಕಿ ನಟಿಯರಾದ ರಕುಲ್‌ ಪ್ರೀತ್‌ ಸಿಂಗ್‌, ಸಾರಾ ಅಲಿ ಖಾನ್‌ ಮತ್ತು ಫ್ಯಾಷನ್ ಡಿಸೈನರ್ ಸಿಮನ್ ಖಾಂಭಟ್ಟ ಅವರ ಕೊರಳಿಗೂ ಈಗ ಡ್ರಗ್ಸ್‌ ಜಾಲದ ನಂಟು ಸುತ್ತಿಕೊಂಡಿದೆ. ಸುಶಾಂತ್‌ ಮತ್ತು ನನ್ನ ಜೊತೆಗೆ ಈ ಮೂವರು ನಟಿಯರು ಡ್ರಗ್ಸ್‌ ಸೇವನೆ ಮಾಡಿರುವುದು ಸತ್ಯ ಎಂದು ರಿಯಾ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರಂತೆ.

ಸುಶಾಂತ್‌ ಜೊತೆಗೆ ತಾನೂ ಮಾದಕ ವಸ್ತುಗಳ ಸೇವನೆ ಮಾಡುತ್ತಿದ್ದೆ ಎಂದು ತನಿಖಾಧಿಕಾರಿಗಳ ಮುಂದೆ ರಿಯಾ ತಪ್ಪೊಪ್ಪಿಕೊಂಡಿದ್ದಾರೆ. ಈ ನಡುವೆಯೇ ಕೆಲವು ಪ್ರಸಿದ್ಧ ಸೆಲೆಬ್ರಿಟಿಗಳ ಹೆಸರನ್ನು ಅವರು ಅಧಿಕಾರಿಗಳ ಮುಂದೆ ಹೇಳಿದ್ದಾರೆ.

ಸುಶಾಂತ್‌ ಡ್ರಗ್ಸ್‌ ವ್ಯಸನಿಯಾಗಿದ್ದ ಪರಿಣಾಮ ತನ್ನ ಸಹೋದರ ಶೋಯಿಕ್‌ ನೆರವಿನಿಂದ ಕೆಲಕಾಲ ಡ್ರಗ್ಸ್‌ ಸಂಗ್ರಹಿಸಿದ್ದೆ ಎನ್ನುವುದನ್ನೂ ರಿಯಾ ತನಿಖಾಧಿಕಾರಿಗಳ ಎದುರು ಹೇಳಿದ್ದಾರಂತೆ. ಪ್ರಸ್ತುತ ಶೋಯಿಕ್‌ ಕೂಡ ಬಂಧನದಲ್ಲಿದ್ದಾರೆ. ಮುಂಬೈನಲ್ಲಿ ದೈಹಿಕ ಕಸರತ್ತು ನಡೆಸಲು ಜಿಮ್‌ಗೆ ಹೋಗುತ್ತಿದ್ದ ವೇಳೆ ರಿಯಾ ಜೊತೆಗೆ ಹಲವು ಭಾರಿ ರಕುಲ್‌ ಕ್ಯಾಮೆರಾಕ್ಕೆ ಪೋಸು ನೀಡಿದ್ದು ಕಳೆದ ವರ್ಷ ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.