ಜಾಮ್‌ನಗರ(ಗುಜರಾತ್): ‘ಶೈನ್ ಲೈಕ್ ಅ ಡೈಮಂಡ್‘, ‘ವರ್ಕ್ ವರ್ಕ್ ವರ್ಕ್‘ ಮುಂತಾದ ಜನಪ್ರಿಯ ಹಾಡುಗಳನ್ನು ಹಾಡಿದ ಪಾಪ್ ಗಾಯಕಿ, ಜನಪ್ರಿಯ ಮೇಕಪ್ ಬ್ರ್ಯಾಂಡ್ ‘ಫೆಂಟಿ ಬ್ಯೂಟಿ’ ಕಂಪೆನಿಯ ಒಡತಿ ರಿಹಾನ ಇಂದು ಗುಜರಾತ್‌ನ ಜಾಮ್‌ನಗರಕ್ಕೆ ಬಂದಿಳಿದಿದ್ದಾರೆ.
ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ ಅಂಬಾನಿ ಅವರ ಮದುವೆ ಜುಲೈನಲ್ಲಿ ನಡೆಯಲಿದ್ದು, ಮದುವೆಪೂರ್ವ ಕಾರ್ಯಕ್ರಮಗಳು ನಾಳೆಯಿಂದ(ಮಾ.1) ಮೂರು ದಿನಗಳ ಕಾಲ ನಡೆಯಲಿವೆ. ಈ ಕಾರ್ಯಕ್ರಮಕ್ಕೆ ರಿಹಾನ ಅವರಿಗೆ ಆಹ್ವಾನ ನೀಡಲಾಗಿದ್ದು, ಕಾರ್ಯಕ್ರಮದಲ್ಲಿ ಜನರನ್ನು ರಂಜಿಸಲಿದ್ದಾರೆ ಎನ್ನಲಾಗಿದೆ.
ಆ ಒಂದು ಟ್ವೀಟ್...
ಇದೇ ಫೆ.13ರಿಂದ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ಅನೇಕ ಬೇಡಿಕೆಗಳನ್ನು ಮುಂದಿಟ್ಟು ರೈತರು ಹೋರಾಟ ಆರಂಭಿಸಿದ್ದಾರೆ. ಯುವರೈತ ಶುಭಕರಣ್ ಸಿಂಗ್ ಅವರ ಸಾವಿನ ನಂತರ ಹೋರಾಟವನ್ನು 2 ದಿನಗಳ ಕಾಲ ಮುಂದೂಡಲಾಗಿತ್ತು. ನಂತರ ಅದು ಫೆ. 29ರವರೆಗೂ ಖನೌರಿ ಮತ್ತು ಶಂಭು ಗಡಿಯಲ್ಲಿ ಸ್ಥಾಪಿಸಲಾಗಿರುವ ಟೆಂಟ್‌ಗಳಲ್ಲಿ ಮುಂದುವರಿಯಲಿದೆ ಎಂದು ರೈತ ಮುಖಂಡರು ತಿಳಿಸಿದ್ದರು.
2021ರಲ್ಲೂ ಇದೇ ರೀತಿ ವಿವಿಧ ಬೇಡಿಕೆಗೆ ಒತ್ತಾಯಿಸಿ ರೈತರು ‘ದೆಹಲಿ ಚಲೋ’ ಹೋರಾಟ ನಡೆಸಿದ್ದು, ಇದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದಕ್ಕೆ ಕಾರಣ ರಿಹಾನ ಮಾಡಿದ ಒಂದು ಟ್ವೀಟ್. ಈ ಒಂದು ಟ್ವೀಟ್ ರೈತರ ಹೋರಾಟಕ್ಕೆ ಇನ್ನಷ್ಟು ಬಲ ನೀಡಿತ್ತು ಎಂದರೆ ತಪ್ಪಾಗಲಾರದು.
‘ನಾವು ಇದರ ಬಗ್ಗೆ ಯಾಕೆ ಮಾತನಾಡಬಾರದು #farmersprotest‘ ಎಂದು ಒಂದೇ ಸಾಲಿನಲ್ಲಿ ರಿಹಾನ ಟ್ವೀಟ್ ಮಾಡಿದ್ದರು. ರಿಹಾನ ಟ್ವೀಟ್‌ಗೆ ಆಗ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಇದಾದ ಬಳಿಕ ಬಿಬಿಸಿ ಸೇರಿದಂತೆ ಅನೇಕ ಆಂಗ್ಲ ಭಾಷೆಯ ಸುದ್ದಿಸಂಸ್ಥೆಗಳು ರೈತರ ಹೋರಾಟದ ಸುದ್ದಿಗಳನ್ನು ಬಿತ್ತರಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.