ಸಿನಿಮಾ ಲೋಕದ ಜೊತೆ ನಂಟೇ ಬೇಡ, ರಂಗಭೂಮಿ ಜೊತೆಗಿನ ಒಡನಾಟವೇ ಸಾಕು ಎಂದು ಒಂದು ಕಾಲದಲ್ಲಿ ತೀರ್ಮಾನಿಸಿದ್ದವರು ಈಗ ಒಂದಾದ ನಂತರ ಒಂದರಂತೆ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಸ್ನೇಹಿತನ ಬೈಗುಳ ಕೇಳಲಾರದೆ ಸಿನಿಮಾದಲ್ಲಿ ಅಭಿನಯಿಸಲು ಆರಂಭಿಸಿ, ಈಗ ಅಲ್ಲಿ ಖುಷಿ ಕಂಡುಕೊಂಡಿದ್ದಾರೆ. ಇದು ನಟ ಪ್ರಮೋದ್ ಶೆಟ್ಟಿ ಅವರ ಕಥೆ.
ಪ್ರಮೋದ್ ಅವರು ಅಭಿನಯಿಸಿರುವ ‘ನನ್ನ ಪ್ರಕಾರ’ ಚಿತ್ರ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಈ ನೆಪದಲ್ಲಿ ಅವರ ಜೊತೆ ಮಾತಿಗೆ ಕುಳಿತಾಗ ಸಿಕ್ಕಿದ್ದು, ಅವರ ಸಿನಿಮಾ ಯಾನದ ಝಲಕುಗಳು. ‘ಬಂಟ ಸಮುದಾಯದಲ್ಲಿ ಬಣ್ಣ ಹಚ್ಚಿದವರು ಯಾರೂ ಇಲ್ಲ. ನಿನಗೇಕೆ ನಾಟಕದ ಹುಚ್ಚು. ನಾಟಕದ ಜೊತೆ ನಂಟು ಮುಂದುವರಿಸುವುದೇ ಆದರೆ ಮನೆಯಿಂದ ಹೊರಹಾಕುವೆ’ ಎಂದು ಹೇಳಿದ್ದ ಅಪ್ಪನಿಗೆ ಎದುರಾಗಿ, ‘ನನಗೆ ನಿಮ್ಮ ಬ್ಯುಸಿನೆಸ್ ಬೇಡ. ಮನೆಯಿಂದ ಹೊರಹೋಗಲು ಸಿದ್ಧ’ ಎಂದು ಹೇಳಿದ್ದ ಪ್ರಮೋದ್ ಈಗ ತಲುಪಿರುವ ಹಂತ ಕಂಡು ಅವರ ತಂದೆಗೂ ಖುಷಿಯಾಗಿದೆ!
‘ಜುಗಾರಿ’ ಪ್ರಮೋದ್ ಅಭಿನಯದ ಮೊದಲ ಸಿನಿಮಾ. ಅದರಲ್ಲಿ ನಟಿಸಿದ ನಂತರ ಪ್ರಮೋದ್ ಸಿನಿಮಾ ತಮಗೆ ಆಗಿಬರುವುದಿಲ್ಲ ಎಂದು ರಂಗಭೂಮಿಯಲ್ಲೇ ತೃಪ್ತರಾಗಿ ಇದ್ದರು. ಕ್ಯಾಮೆರಾ ಎದುರು ನಿಲ್ಲುವುದು, ಚಿತ್ರೀಕರಣದ ಸ್ಥಳಕ್ಕೆ ಬೆಳಿಗ್ಗೆ ಹೋಗಿ, ಸಂಜೆಯವರೆಗೆ ಕಾದು, ಸಂಜೆಯ ಹೊತ್ತಿನಲ್ಲಿ ಒಂದೆರಡು ದೃಶ್ಯಗಳನ್ನು ಅಭಿನಯಿಸಿ ಬರುವುದು ಅವರಿಗೆ ಆಗಿಬರುತ್ತಿರಲಿಲ್ಲ. ಅದಾದ ನಂತರ, ‘ಉಳಿದವರು ಕಂಡಂತೆ’ ಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಪ್ರಮೋದ್ ಪುನಃ ಪ್ರವೇಶ ಪಡೆದಿದ್ದು ತೀರಾ ಆಕಸ್ಮಿಕ.
‘ನನ್ನ ಒಂದು ನಾಟಕದ ಪ್ರದರ್ಶನ ಬೆಂಗಳೂರಿನ ರಂಗಶಂಕರದಲ್ಲಿ ಏರ್ಪಾಟಾಗಿತ್ತು. ನಿರ್ದೇಶಕ, ನಟ ರಿಷಬ್ ಶೆಟ್ಟಿ ಮತ್ತು ನಾನು ಪದವಿಯಲ್ಲಿ ಸಹಪಾಠಿಗಳು. ನನ್ನ ನಾಟಕ ಇರುವ ಬಗ್ಗೆ ಅವರಿಗೆ ಒಂದು ಸಂದೇಶ ರವಾನಿಸಿ, ನೋಡಲು ಬನ್ನಿ ಎಂದಿದ್ದೆ. ನಾಟಕ ನೋಡಲು ಬಂದ ರಿಷಬ್ ಜೊತೆ ರಕ್ಷಿತ್ ಶೆಟ್ಟಿ ಕೂಡ ಇದ್ದರು. ನಾಟಕ ಮುಗಿದ ನಂತರ ರಂಗಶಂಕರದ ಹೊರಗೆ ಚಹಾ ಕುಡಿಯುತ್ತ ನಿಂತಿದ್ದ ರಿಷಬ್ ಬಳಿ ನಾನು ಹೋದೆ. ನಮ್ಮದೊಂದು ಸಿನಿಮಾ ಆಗುತ್ತಿದೆ. ಅದರಲ್ಲಿ ನಟಿಸಬಹುದೇ ಶೆಟ್ರೆ ಎಂದು ರಕ್ಷಿತ್ ನನ್ನಲ್ಲಿ ಕೇಳಿದರು. ಹೂಂ ಎನ್ನಲೋ, ಇಲ್ಲ ಎನ್ನಲೋ ಎಂಬ ಗೊಂದಲದಲ್ಲಿ ತಲೆ ಅಲ್ಲಾಡಿಸುತ್ತ ನಿಂತಿದ್ದೆ. ಅದನ್ನು ಕಂಡ ರಿಷಬ್, ಕುಂದಾಪ್ರ ಕನ್ನಡ ಶೈಲಿಯಲ್ಲಿ ಬಯ್ಯಲು ಆರಂಭಿಸಿದರು’ ಎಂದು ಹಳೆಯ ದಿನವೊಂದನ್ನು ನೆನಪಿಸಿಕೊಂಡರು ಪ್ರಮೋದ್.
‘ರಿಷಬ್ ನನಗೆ ಸುಮಾರು ಅರ್ಧ ಗಂಟೆ ಬಯ್ದರು. ಇಷ್ಟೊಂದು ಪ್ರತಿಭೆ ಇದ್ದರೂ ಕ್ಯಾಮೆರಾ ಎದುರು ನಿಲ್ಲಲು ಏನು ಸಮಸ್ಯೆ ಎಂದು ಕೇಳಿದರು. ಆ ಸಂದರ್ಭದಲ್ಲಿ ನಾನು ರಂಗಭೂಮಿಯಲ್ಲಿ ತಿಂಗಳಿಗೆ ₹ 10 ಸಾವಿರದಿಂದ
₹ 12 ಸಾವಿರ ಸಂಪಾದಿಸುತ್ತಿದ್ದೆ. ಆ ಮೊತ್ತವನ್ನು ಕೂಡ ಪ್ರಸ್ತಾಪಿಸಿದ ರಿಷಬ್ ಇನ್ನಷ್ಟು ಬಯ್ದರು. ಜೀವನಪೂರ್ತಿ ಇಷ್ಟರಲ್ಲೇ ಇರುತ್ತೀಯಾ ಎಂದು ಕೇಳಿದರು. ರಂಗಭೂಮಿ ಮೇಲಿನ ಪ್ರೀತಿಗಾಗಿ ಕುಟುಂಬದವರನ್ನೇ ಎದುರು ಹಾಕಿಕೊಂಡಿದ್ದ ನಾನು, ಅವರ ಬೈಗುಳ ಕೇಳಿ ಉಳಿದವರು ಕಂಡಂತೆ ಸಿನಿಮಾದಲ್ಲಿ ನಟಿಸಿದೆ’ ಎಂದು ನಕ್ಕರು. ಆ ಚಿತ್ರದಲ್ಲಿನ ದಿನೇಶ ಎಂಬ ಪಾತ್ರ ಪ್ರಮೋದ್‌ಗೆ ಒಳ್ಳೆಯ ಹೆಸರು ತಂದುಕೊಟ್ಟಿತು.
ಪ್ರಮೋದ್ ಅವರು ನಾಟಕಗಳಿಗಾಗಿ ಎಷ್ಟು ಶ್ರಮಪಡುತ್ತಿದ್ದರೂ, ಅದೇ ರೀತಿ ರಿಷಬ್ ಮತ್ತು ರಕ್ಷಿತ್ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದರು. ತಮ್ಮ ಪಾಲಿನ ದೃಶ್ಯಗಳ ಚಿತ್ರೀಕರಣ ಮುಗಿಸಿ ಬರುವ ಆಲೋಚನೆಯೊಂದಿಗೆ ಉಳಿದವರು ಕಂಡಂತೆ ತಂಡದ ಜೊತೆ ಹೋದ ಪ್ರಮೋದ್, ಈ ಇಬ್ಬರಲ್ಲಿನ ಬದ್ಧತೆ ಕಂಡು ಚಿತ್ರೀಕರಣ ಪೂರ್ತಿಯಾಗುವವರೆಗೂ ಅವರ ಜೊತೆಯಲ್ಲೇ ಇರುವ ತೀರ್ಮಾನಕ್ಕೆ ಬಂದರು. ಆ ಸಿನಿಮಾ ಪ್ರಮೋದ್ ಅವರಿಗೆ ಸಿನಿಲೋಕದ ಒಂದಿಷ್ಟು ಕೆಲಸ ಕಲಿಸಿತು.
‘ಆ ಸಿನಿಮಾ ಮೂಲಕ ನನಗೆ ಸಿಕ್ಕ ಒಳ್ಳೆಯ ಹೆಸರು ನನ್ನನ್ನು ಈಗ ಇಲ್ಲಿಯವರೆಗೆ ತಂದು ನಿಲ್ಲಿಸಿದೆ’ ಎಂದು ದೊಡ್ಡ ಕನಸೊಂದನ್ನು ನೆನಪಿಸಿಕೊಂಡಂತೆ ಹೇಳುತ್ತಾರೆ ಪ್ರಮೋದ್. ‘ದಿನೇಶನದ್ದು ರಫ್ ವ್ಯಕ್ತಿತ್ವ. ಆ ಸಿನಿಮಾ ನಂತರ, ರಫ್ ಆಗಿರುವ ಹಲವು ಪಾತ್ರಗಳನ್ನು ನಿಭಾಯಿಸಿದ್ದೇನೆ. ನನ್ನ ದೇಹಾಕೃತಿ ಕಂಡು ಇವನೊಬ್ಬ ರಾಕ್ಷಸ ಎಂದು ಹಲವರು ಹೇಳುತ್ತಾರೆ. ರಫ್ ಅಲ್ಲದ ಪಾತ್ರಗಳಲ್ಲಿ ಕಾಣಿಸಿಕೊಂಡಾಗ ನನಗೆ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿಲ್ಲ’ ಎಂದು ತಮ್ಮ ಪಾತ್ರಗಳ ಬಗ್ಗೆ ಹೇಳುತ್ತಾರೆ.
‘ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್’ ಚಿತ್ರದಲ್ಲಿ ಇವರು ಆಪ್ತಸಹಾಯಕನ ಪಾತ್ರ ನಿಭಾಯಿಸಿದರು. ಆದರೆ ಆ ಚಿತ್ರ ವೀಕ್ಷಿಸಿದ ಹಲವರಿಗೆ ‘ಈ ಪಾತ್ರ ಪ್ರಮೋದ್‌ಗೆ ಸರಿಬರುವುದಿಲ್ಲ’ ಎಂದು ಅನಿಸಿದ್ದಿದೆ. ‘ನನಗೂ ಹಾಗೇ ಅನಿಸಿದೆ’ ಎಂದು ಪ್ರಮೋದ್ ಕೂಡ ಹೇಳುತ್ತಾರೆ.
‘ರಿಕ್ಕಿ’ ಚಿತ್ರದಲ್ಲಿನ ನಕ್ಸಲ್ ಮುಖಂಡನ ಪಾತ್ರ ಪ್ರಮೋದ್‌ಗೆ ಬಹಳ ಖುಷಿಕೊಟ್ಟಿದೆ. ಆ ಪಾತ್ರ ನಿಭಾಯಿಸುವುದಕ್ಕಾಗಿ ಚೆ ಗುವಾರ ಕುರಿತ ಹಲವು ಸಿನಿಮಾಗಳನ್ನು ನೋಡಿದ್ದರು, ನಕ್ಸಲಿಸಂಗೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಓದಿಕೊಂಡಿದ್ದರು. ಒಬ್ಬ ನಕ್ಸಲ್ ಹೇಗೆ ಇರುತ್ತಾನೆ ಎಂಬುದನ್ನು ಅರ್ಥ ಮಾಡಿಕೊಳ್ಳಲು. ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ರಕ್ಷಿತ್ ಸ್ನೇಹಿತನ ಪಾತ್ರಕ್ಕಾಗಿ, ಪ್ರಕೃತಿ ಚಿಕಿತ್ಸಾ ಕೇಂದ್ರ ಸೇರಿ ಎಂಟು ಕೆ.ಜಿ. ತೂಕ ಇಳಿಸಿಕೊಂಡಿದ್ದರು.
‘ಈಗ ನಾನು ತಲುಪಿರುವ ಸ್ಥಿತಿ ಕಂಡು ಖುಷಿ ಆಗುತ್ತದೆ. ಈ ಸ್ಥಿತಿಗಾಗಿ ನಾನು ರಿಷಬ್ ಅವರಿಗೆ ಯಾವಾಗಲೂ ಧನ್ಯವಾದ ಸಮರ್ಪಿಸುತ್ತ ಇರುತ್ತೇನೆ. ಒಬ್ಬ ಗೆಳೆಯನಾಗಿ ರಿಷಬ್ ತಮ್ಮ ಜವಾಬ್ದಾರಿ ನಿಭಾಯಿಸಿದರು. ನಮ್ಮ ಸಾಮರ್ಥ್ಯ ಏನು ಎಂಬುದು ನಮಗೇ ಗೊತ್ತಿಲ್ಲದಿದ್ದರೆ, ಅದನ್ನು ಹೇಳಲು ಒಬ್ಬ ಗೆಳೆಯ ಬೇಕು. ಆ ಕೆಲಸವನ್ನು ರಿಷಬ್ ಮಾಡಿದರು’ ಎಂದು ಪ್ರಮೋದ್ ತಮ್ಮ ಗೆಳೆಯನಿಗೊಂದು ಆಭಾರ ಮನ್ನಣೆ ಸಮರ್ಪಿಸಿದರು.
ಸಿನಿಮಾಕ್ಕೆ ಸಂಬಂಧಿಸಿದ ಹತ್ತು ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪ್ರಮೋದ್ ಅವರಿಗೆ ಈಗ ಸಿನಿಮಾ ಲೋಕ ಬೋರಿಂಗ್ ಆಗಿ ಕಾಣುತ್ತಿಲ್ಲ. ‘ಅವನೇ ಶ್ರೀಮನ್ನಾರಾಯಣ, ಕಥಾಸಂಗಮ, ಒಂದು ಶಿಕಾರಿಯ ಕಥೆ, ತೂತು ಮಡಿಕೆ, ಕೃಷ್ಣ ಟಾಕೀಸ್, ಪ್ರೊಡಕ್ಷನ್ ನಂ.7 ಸೇರಿದಂತೆ ಹಲವು ಸಿನಿಮಾಗಳು ಕೈಯಲ್ಲಿವೆ. ಮಂಸೋರೆ ಅವರ ಹೊಸ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಮಾತಿಗೊಂದು ಪೂರ್ಣ ವಿರಾಮ ಹಾಕಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.