ADVERTISEMENT

ಅರಣ್ಯವಾಸಿಗಳ ಬದುಕಿನಲ್ಲಿ ಕಾಂತಾರದಿಂದ ಬದಲಾವಣೆ: ರಿಷಭ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 21:33 IST
Last Updated 11 ಫೆಬ್ರುವರಿ 2023, 21:33 IST
ಸಂವಾದದಲ್ಲಿ ನಿರ್ದೇಶಕ ರಿಷಬ್‌ ಶೆಟ್ಟಿ ಮಾತನಾಡಿದರು, ಮುರಳೀಧರ ಖಜಾನೆ,ಬಿ.ಎನ್. ಸುಬ್ರಹ್ಮಣ್ಯ ಇದ್ದಾರೆ
ಸಂವಾದದಲ್ಲಿ ನಿರ್ದೇಶಕ ರಿಷಬ್‌ ಶೆಟ್ಟಿ ಮಾತನಾಡಿದರು, ಮುರಳೀಧರ ಖಜಾನೆ,ಬಿ.ಎನ್. ಸುಬ್ರಹ್ಮಣ್ಯ ಇದ್ದಾರೆ   

ಬೆಂಗಳೂರು: ‘ಬಂಡಿಪುರ ಹಾಗೂ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಅಲ್ಲಿನ ಮೂಲನಿವಾಸಿಗಳ ಅನೇಕ ಸಮಸ್ಯೆಗಳಿಗೆ ಆಡಳಿತ ವ್ಯವಸ್ಥೆಸ್ಪಂದಿಸುತ್ತಿರುವುದನ್ನು ನಾನುಖುದ್ದು ಗಮನಿಸಿದ್ದೇನೆ. ಐವತ್ತು ವರ್ಷ ದಾಟಿದ ದೈವಾರಾಧಕರಿಗೆ ಸರ್ಕಾರ ಮಾಸಾಶನ ಮಂಜೂರು ಮಾಡಿತು. ಇವೆಲ್ಲ ಕಾಂತಾರ ಸಿನಿಮಾ ಬಂದ ಮೇಲೆ ಆಗಿರುವ ಪರಿಣಾಮ’ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಅವರು ತಿಳಿಸಿದರು.

ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಶನಿವಾರ ಶೇಷಾದ್ರಿಪುರಂನ ಗಾಂಧಿಭವನದ ಕಸ್ತೂರಬಾ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ಶಿವರಾಮ ಕಾರಂತರು ಚೋಮನದುಡಿ ಸಿನಿಮಾದಲ್ಲಿಯೇ ಪಂಜುರ್ಲಿಯ ಬಗೆಗೆ ಹೇಳಿದ್ದರು. ಹಿಂದೆ ಕೂಡ ಅದರ ಪ್ರಸ್ತಾಪ ಹಲವು ಮಾಧ್ಯಮಗಳಲ್ಲಿ ಆಗಿದೆ. ನಮ್ಮ ಸಿನಿಮಾದಲ್ಲಿ ಅದನ್ನೇ ನಾವು ಬೇರೆ ರೀತಿ ತೋರಿದೆವು ಅಷ್ಟೆ. ಸಹಬಾಳ್ವೆಯೇ ಸಮಸ್ಯೆಗಳಿಗೆಲ್ಲ ಪರಿಹಾರ. ದೈವ ಎನ್ನುವುದು ನಂಬಿಕೆ. ಅದು ಹೊಂದಾಣಿಕೆ
ಯಿಂದ ಬದುಕಲು ಪೂರಕ ಎಂದು ತೋರಿಸುವುದು ನನ್ನಉದ್ದೇಶವಾಗಿತ್ತು’ ಎಂದು ಅವರು ‘ಕಾಂತಾರ’ ಸಿನಿಮಾದ ಒಟ್ಟಾರೆ ಆಶಯದ ಕುರಿತು ಅವರು ಹೇಳಿಕೊಂಡರು.

ADVERTISEMENT

‘ದೈವಾರಾಧನೆ ಆಯಾ ವರ್ಗಕ್ಕೆ ತಕ್ಕಂತೆ ಇರುತ್ತದೆ. ನನ್ನ ಸಿನಿಮಾದಲ್ಲಿನ ಆ ಅಂಶ ಒಂದೊಂದು ಕಡೆಯಲ್ಲಿ ಒಂದೊಂದು ರೀತಿ ಹೊಂದಾಣಿಕೆ ಕಂಡಿತಷ್ಟೆ. ಏಳು ಭಾಷೆಗಳಿಗೆ ಈ ಸಿನಿಮಾ ಡಬ್‌ ಆಯಿತು. ತೆಲುಗಿನಲ್ಲಿ ನಾಲ್ಕೇ ದಿನಗಳಲ್ಲಿ 20 ಕೋಟಿ ರೂಪಾಯಿ ಸಂಗ್ರಹಿಸಿತು’ ಎಂದು ಸಿನಿಮಾ ಯಶಸ್ಸಿನ ಮಾಹಿತಿ ನೀಡಿದರು.

ಕುಂದಾಪುರ ಬಳಿಯ ಸಮಾನಮನಸ್ಕರು ಸಾವಯವ ಕೃಷಿ ಮಾಡುವ ವಿಷಯದ ಚರ್ಚೆ ನಡೆಸುತ್ತಿದ್ದಾಗ ನಿಜ ಪ್ರಸಂಗವೊಂದು ಚರ್ಚೆಯಾಗಿತ್ತು. ಪರವಾನಗಿ ಇಲ್ಲದ ನಾಡಪಿಸ್ತೂಲ್ ವಶಪಡಿಸಿಕೊಂಡ ಅರಣ್ಯ ಇಲಾಖೆ
ಅಧಿಕಾರಿಯೊಬ್ಬರು ಗುಂಡುಗಳನ್ನು ಖಾಲಿ ಮಾಡುವ ಪ್ರಕ್ರಿಯೆಯಲ್ಲಿ ಹಾರಿಸಿದ ಗುಂಡು ಅವರ ಕಣ್ಣಿಗೇ ತಗಲಿತ್ತು. ಆ ಪ್ರಸಂಗ ಕೇಳಿದ ಮೇಲೆ ಕಾಂತಾರಾ ಸಿನಿಮಾದ ಬರವಣಿಗೆ ಹರಳುಗಟ್ಟಿತು ಎಂದು ‌ರಿಷಬ್ ಹೇಳಿದರು. ಮುಂದುವರೆದು ಮಾತನಾಡಿ, ಆ ದೃಶ್ಯವನ್ನು ಕೂಡ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದನ್ನು ನೆನಪಿಸಿಕೊಂಡರು.

ಪೆದ್ರೊ, ಶಿವಮ್ಮ ತರಹದ ಸಿನಿಮಾಗಳನ್ನು ನಿರ್ಮಿಸಿರುವ ಅವರು ಮುಂದೆ ಕೆಲವು ಪರದೆಗಳಲ್ಲಿ ಆ ಸಿನಿಮಾಗಳನ್ನೂ ಬಿಡುಗಡೆ ಮಾಡುವುದಾಗಿ ಭರವಸೆ ಕೊಟ್ಟರು. ‘ಕಾಂತಾರ’ ಸಿನಿಮಾದ ಎರಡನೇ ಭಾಗವು ಚಿತ್ರಕಥೆ ದೃಷ್ಟಿ
ಯಿಂದ ಮೊದಲ ಭಾಗ ಆಗಿರಲಿದೆ ಎಂದೂ ರಿಷಬ್ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಮುರಳೀಧರ ಖಜಾನೆ ಅವರು ಸಂವಾದ ಮಾಡಿದರು.

ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ಎನ್. ಸುಬ್ರಹ್ಮಣ್ಯ ಅವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.