ಬೆಂಗಳೂರು: ನಟ ರಿಷಬ್ ಶೆಟ್ಟಿ ಅವರು ‘ಕಾಂತಾರ–ಅಧ್ಯಾಯ 1’ ಚಿತ್ರೀಕರಣಕ್ಕಾಗಿ ಕಳರಿಪಯಟ್ಟು ತರಬೇತಿ ಪಡೆಯುತ್ತಿದ್ದಾರೆ. ಚಿತ್ರದಲ್ಲಿ ಅವರು ನಟನಾ ಸಾಮರ್ಥ್ಯದ ಜತೆಗೆ ಕಳರಿಪಯಟ್ಟು ಕಲೆಯನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆ ಒದಗಿಸಲು ಮುಂದಾಗಿದ್ದಾರೆ.
ಕಳರಿಪಯಟ್ಟು ತರಬೇತಿ ಪಡೆಯುತ್ತಿರುವ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ರಿಷಬ್ ಶೆಟ್ಟಿ ಹಂಚಿಕೊಂಡಿದ್ದಾರೆ.
ತಮ್ಮ ಸಿನಿಮಾಗಳಲ್ಲಿ ವಿವಿಧ ಪ್ರಕಾರದ ಕಲೆಗಳನ್ನು ಪ್ರದರ್ಶಿಸುವ ರಿಷಬ್, ಅದಕ್ಕಾಗಿ ತಯಾರಿಯನ್ನು ಶ್ರದ್ಧೆಯಿಂದ ನಡೆಸುತ್ತಾರೆ. ‘ಕಾಂತಾರ– ಅಧ್ಯಾಯ 2 ಚಿತ್ರದಲ್ಲಿ ದೈವದ ಪಾತ್ರ ನಿರ್ವಹಿಸಲು ಶ್ರದ್ಧೆ ಹಾಗೂ ಭಕ್ತಿಯಿಂದ ನಿಯಮಗಳ ಅನುಸಾರ ನಡೆದುಕೊಂಡಿದ್ದರು‘ ಎಂದು ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಎಸ್.ಕಶ್ಯಪ್ ಅವರ ಛಾಯಾಗ್ರಹಣ ಸೇರಿದಂತೆ ಮೊದಲ ಭಾಗದಲ್ಲಿ ಕಾರ್ಯನಿರ್ವಹಿಸಿದ್ದ ತಾಂತ್ರಿಕ ತಂಡವೇ ಪ್ರೀಕ್ವೆಲ್‌ನಲ್ಲೂ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ.
ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ ನಿರ್ಮಿಸುತ್ತಿದ್ದು, ಕನ್ನಡ, ಇಂಗ್ಲಿಷ್ ಸೇರಿದಂತೆ ಏಳು ಭಾಷೆಗಳಲ್ಲಿ ಏಕಕಾಲದಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಇತ್ತೀಚೆಗೆಷ್ಟೇ 2024ನೇ ಸಾಲಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.