ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ನಟ ರಣವೀರ್ ಸಿಂಗ್ ಅಭಿನಯದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಎಫ್‌ಬಿಸಿ) ಯು/ಎ (U/A) ಪ್ರಮಾಣ ಪತ್ರ ನೀಡಿದೆ. ಆದರೆ ಚಿತ್ರದಲ್ಲಿ ಕೆಲವು ಪದಗಳು, ಸಂಭಾಷಣೆಗಳು ಮತ್ತು ಉಲ್ಲೇಖಗಳನ್ನು ತೆಗೆದುಹಾಕುವಂತೆ ಮಂಡಳಿ ಸೂಚಿಸಿದೆ.
ಚಿತ್ರದಲ್ಲಿನ ನಿಂದನೀಯ ಪದಗಳು, ಲೋಕಸಭೆಯ ಉಲ್ಲೇಖ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಉಲ್ಲೇಖವನ್ನು ತೆಗೆದುಹಾಕುವಂತೆ ಚಿತ್ರತಂಡಕ್ಕೆ ಮಂಡಳಿ ತಿಳಿಸಿದೆ.
ಸಿನಿಮಾದ ಡೈಲಾಗ್‌ನಲ್ಲಿ(ಸಂವಾದ) ಬಳಸಿರುವ ಲೋಕಸಭೆಯ ಉಲ್ಲೇಖವನ್ನು ತೆಗೆದು ಹಾಕಬೇಕು ಮತ್ತು ಅದನ್ನು ಬೇರೆ ಯಾವುದೇ ಪದದೊಂದಿಗೆ ಬದಲಾಯಿಸಬಾರದು ಎಂದು ಸಿಎಫ್‌ಬಿಸಿ ನಿರ್ದೇಶಿಸಿದೆ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ.
ಓಲ್ಡ್ ಮಾಂಕ್, ರಮ್ ಬ್ರಾಂಡ್‌ಗಳನ್ನು ಚಿತ್ರದಲ್ಲಿ ಬೋಲ್ಡ್ ಮಾಂಕ್ ಎಂದು ಬದಲಾಯಿಸಲಾಗಿದೆ. ಅಲ್ಲದೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಉಲ್ಲೇಖಿಸಿರುವ ಒಳಉಡುಪು ಅಂಗಡಿಯಲ್ಲಿನ ಸಂಭಾಷಣೆ ದೃಶ್ಯವನ್ನು ಸಿನಿಮಾದಿಂದ ತೆಗೆದುಹಾಕಲಾಗಿದೆ.
ಧರ್ಮೇಂದ್ರ, ಶಬಾನಾ ಅಜ್ಮಿ ನಟಿಸಿರುವ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯೂ’ 2 ಗಂಟೆ 48 ನಿಮಿಷಗಳ ಸಿನಿಮಾವಾಗಿದ್ದು, ಜುಲೈ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕರಣ್ ಜೋಹರ್ ನಿರ್ದೇಶಿಸಿರುವ ಈ ಚಿತ್ರವು ಒಬ್ಬ ಆಡಂಬರದ ಪಂಜಾಬಿ ವ್ಯಕ್ತಿ ಮತ್ತು ಬಂಗಾಳಿ ಪತ್ರಕರ್ತೆಯ ನಡುವಿನ ಪ್ರೇಮಕಥೆಯನ್ನು ಒಳಗೊಂಡಿದ್ದು, ಅವರ ಪ್ರೇಮಕ್ಕೆ ಕುಟುಂಬಗಳು ವಿರೋಧಿಸಿದಾಗ, ಇಬ್ಬರೂ ಪ್ರೇಮಿಗಳು ಪರಸ್ಪರರ ಕುಟುಂಬಗಳೊಂದಿಗೆ ಮೂರು ತಿಂಗಳ ಕಾಲ ವಾಸಿಸುವ ಕಥೆಯನ್ನು ಒಳಗೊಂಡಿದೆ.
ಸಿನಿಮಾದಲ್ಲಿ ಟೋಟ ರಾಯ್ ಚೌಧರಿ, ಚುರ್ನಿ ಗಂಗೂಲಿ ಮತ್ತು ಕ್ಷಿತಿ ಜೋಗ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.