‘ಭೀಮ’ ಹಾಗೂ ‘ಕೃಷ್ಣಂ ಪ್ರಯಣ ಸಖಿ’ ಸಿನಿಮಾಗಳು ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಈ ಹಿನ್ನೆಲೆಯಲ್ಲಿ ‘ರಾನಿ’ ಸಿನಿಮಾವನ್ನು ಮುಂದೂಡಲು ಚಿತ್ರತಂಡ ನಿರ್ಧರಿಸಿದೆ.
ಕಿರಣ್ ರಾಜ್ ನಟನೆಯ ‘ರಾನಿ’ ಸಿನಿಮಾ ಆಗಸ್ಟ್ 30ರ ಬದಲಾಗಿ ಸೆಪ್ಟೆಂಬರ್ 12ರಂದು ತೆರೆಗೆ ಬರಲಿದೆ. ‘ಪ್ರಸ್ತುತ ಬಿಡುಗಡೆಯಾಗಿರುವ ಕನ್ನಡ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಹೀಗಾಗಿ ಚಿತ್ರಮಂದಿರಗಳ ಸಮಸ್ಯೆ ಎದುರಾಗಬಾರದೆಂದು ಈ ನಿರ್ಧಾರ ತೆಗದುಕೊಂಡಿದ್ದೇವೆ’ ಎಂದು ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ತಿಳಿಸಿದೆ.
‘ಎರಡು ಸಿನಿಮಾಗಳು ಯಶಸ್ವಿ ಪ್ರದರ್ಶನ ಕಾಣುತ್ತಿರುವುದರಿಂದ, ನಮಗೆ ಚಿತ್ರಮಂದಿರಗಳ ಸಮಸ್ಯೆ ಆಗಬಹುದು ಎಂದು ವಿತರಕರು ಹೇಳಿದರು. ನಾವು ಬಿಡುಗಡೆ ಮಾಡುವ ಹೊತ್ತಿಗೆ ಎಷ್ಟು ಚಿತ್ರಮಂದಿರಗಳು ಸಿಗುತ್ತವೆ ಎಂದು ಗೊತ್ತಿಲ್ಲ. ಚೆನ್ನಾಗಿ ಶೇರ್ ಸಿಕ್ಕರೆ, ಚಿತ್ರಮಂದಿರದಿಂದ ಸಿನಿಮಾ ತೆಗೆಯುವುದು ಸರಿಯಲ್ಲ. ಹಾಗಾಗಿ ಮುಂದೆ ಹೋಗುತ್ತಿದ್ದೇವೆ. ಮುಂದೆ ಹೋಗುತ್ತಿರುವುದಕ್ಕೆ ಬೇಸರವಿಲ್ಲ, ಖುಷಿಯದೆ. ಏಕೆಂದರೆ, ಜನ ಈಗ ಚಿತ್ರಮಂದಿರದತ್ತ ಬರುತ್ತಿದ್ದಾರೆ. ನಮ್ಮದು ದೊಡ್ಡ ಬಜೆಟ್‍ನ ಸಿನಿಮಾ. ಹಾಗಾಗಿ ದೊಡ್ಡಮಟ್ಟದಲ್ಲೇ ರಿಲೀಸ್ ಮಾಡಬೇಕು ಎಂಬ ಯೋಚನೆ ಇದೆ. ಹೀಗಾಗಿ ಬಿಡುಗಡೆ ದಿನಾಂಕ ಮುಂದೆ ಹೋಗಿದೆ’ ಎಂದರು ನಿರ್ದೇಶಕ ಗುರುತೇಜ್ ಶೆಟ್ಟಿ.
‘ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದೇನೆ. ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಎಂಟು ವರ್ಷಗಳ ಅಂತರದಲ್ಲಿ ಕಥೆ ನಡೆಯುತ್ತದೆ. ಎರಡು ಗೆಟಪ್‍ಗಳಲ್ಲಿ ಕಾಣಿಸಿಕೊಂಡಿದ್ದೇನೆ’ ಎನ್ನುವ ನಾಯಕ ಕಿರಣ್ ರಾಜ್, ‘ಈ ಚಿತ್ರ ನನ್ನ ಪಾಲಿಗೆ ಬಹಳ ಮಹತ್ವದ್ದು. ಗುರುತೇಜ್ ಶೆಟ್ಟಿ ಅವರು ಈ ಚಿತ್ರಕ್ಕೆ ಸುಮ್ಮನೆ ಚಿತ್ರಕಥೆ ಬರೆದಿಲ್ಲ. ಒಂದಿಷ್ಟು ಊರುಗಳಲ್ಲಿ ಸರ್ವೆ ಮಾಡಿ ಅಲ್ಲಿನ ಜನ ನನ್ನನ್ನು ಯಾವ ರೀತಿ ಪಾತ್ರದಲ್ಲಿ ನೋಡಲು ಬಯಸುತ್ತಾರೆ ಎಂದು ತಿಳಿದುಕೊಂಡಿದ್ದಾರೆ’ ಎಂದರು.
‘ರಾನಿ’ ಚಿತ್ರದಲ್ಲಿ ಕಿರಣ್ ರಾಜ್ ಜೊತೆಗೆ ಸಮೀಕ್ಷಾ, ಅಪೂರ್ವ, ರಾಧ್ಯ, ರವಿಶಂಕರ್, ಮೈಕೋ ನಾಗರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಘವೇಂದ್ರ ಬಿ. ಕೋಲಾರ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ಚಿತ್ರವನ್ನು ಸ್ಟಾರ್ ಕ್ರಿಯೇಷನ್ಸ್ ಲಾಂಛನದಲ್ಲಿ ಚಂದ್ರಕಾಂತ್ ಪೂಜಾರಿ ಮತ್ತು ಉಮೇಶ್ ಹೆಗಡೆ ನಿರ್ಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.