ADVERTISEMENT

ನೆಲದ ಮೇಲೆ ಕೂರಿಸಿದ್ದರು: ದೆಹಲಿ ವಿಮಾನ ನಿಲ್ದಾಣದ ಸೇವೆ ಬಗ್ಗೆ ರಾಜಮೌಳಿ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜುಲೈ 2021, 10:11 IST
Last Updated 3 ಜುಲೈ 2021, 10:11 IST
ನಿರ್ದೇಶಕ ಎಸ್ಎಸ್ ರಾಜಮೌಳಿ
ನಿರ್ದೇಶಕ ಎಸ್ಎಸ್ ರಾಜಮೌಳಿ   

ನವದೆಹಲಿ: ದಿಲ್ಲಿ ವಿಮಾನ ನಿಲ್ಧಾಣದ ಅಸೌಕರ್ಯದ ವಿರುದ್ಧ ತೆಲುಗು ನಿರ್ದೇಶಕ ಎಸ್ಎಸ್‌ ರಾಜಮೌಳಿ ಭಾರಿ ಬೇಸರ ವ್ಯಕ್ತ ಪಡಿಸಿದ್ದಾರೆ. 'ಭಾರತಕ್ಕೆ ಬಂದಿಳಿಯುವ ವಿದೇಶಿಗರಿಗೆ ಇದು ಉತ್ತಮವಾದ ಅನುಭವ ಆಗುವುದಿಲ್ಲ. ದಯವಿಟ್ಟು ಪರಿಶೀಲಿಸಿ' ಎಂದು ವಿನಂತಿಸಿದ್ದಾರೆ.

ಬಹುಭಾಷಾ ಚಿತ್ರ 'ಆರ್‌ಆರ್‌ಆರ್‌' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ರಾಜಮೌಳಿ ದಿಲ್ಲಿ ವಿಮಾನ ನಿಲ್ದಾಣದಲ್ಲಾದ ಕೆಟ್ಟ ಅನುಭವದ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಪ್ರಯಾಣಿಕರಿಗೆ ಕೋವಿಡ್‌-19 ಪರೀಕ್ಷೆಯ ದಾಖಲೆಗಳನ್ನು ಭರ್ತಿ ಮಾಡಲು ಸರಿಯಾದ ಸೌಕರ್ಯವಿರಲಿಲ್ಲ. ಹಸಿದ ಬೀದಿ ನಾಯಿಗಳು ಆಸುಪಾಸಲ್ಲಿದ್ದವು ಎಂದು ಅಸಮಾಧಾನದಿಂದ ಪೋಸ್ಟ್‌ ಮಾಡಿದ್ದಾರೆ.

'ಆತ್ಮೀಯ ದಿಲ್ಲಿ ವಿಮಾನ ನಿಲ್ದಾಣ, ಮಧ್ಯರಾತ್ರಿ 1 ಗಂಟೆಗೆ ಲುಫ್ತಾನ್ಸಾ ವಿಮಾನದಿಂದ ಬಂದಿಳಿದೆ. ಆರ್‌ಟಿಪಿಸಿಆರ್‌ ಪರೀಕ್ಷೆಯ ದಾಖಲೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕೊಟ್ಟರು. ಎಲ್ಲ ಪ್ರಯಾಣಿಕರು ನೆಲದ ಮೇಲೆಯೇ ಕುಳಿತು, ಗೋಡೆಗೆ ಒರಗಿಕೊಂಡು ಅರ್ಜಿ ಭರ್ತಿ ಮಾಡುತ್ತಿದ್ದರು. ಇದು ಉತ್ತಮವಾದ ಸೇವೆಯಲ್ಲ. ಅರ್ಜಿಗಳನ್ನು ಭರ್ತಿ ಮಾಡಲು ಅಗತ್ಯ ಟೇಬಲ್‌ ಒದಗಿಸುವುದು ಸರಳ ಸೇವೆಯಾಗಿದೆ' ಎಂದು ಟ್ವೀಟ್‌ ಮಾಡಿರುವ ರಾಜಮೌಳಿ ದಿಲ್ಲಿ ವಿಮಾನ ನಿಲ್ದಾಣದ ಆಡಳಿತ ವ್ಯವಸ್ಥೆಯ ಕಿವಿ ಹಿಂಡಿದ್ದಾರೆ.

ADVERTISEMENT

'ವಿಮಾನ ನಿಲ್ಧಾಣದ ನಿರ್ಗಮನ ಗೇಟಿನ ಬಳಿ ಹಲವು ಹಸಿದ ಬೀದಿ ನಾಯಿಗಳು ಇದ್ದವು. ವಿದೇಶಿಗರಿಗೆ ಭಾರತದಲ್ಲಿ ಸಿಗುವ ಉತ್ತಮವಾದ ಅನುಭವ ಇದಾಗಿರುವುದಿಲ್ಲ. ದಯವಿಟ್ಟು ಇದರ ಬಗ್ಗೆ ಪರಿಶೀಲಿಸಿ' ಎಂದು ರಾಜಮೌಳಿ ವಿನಂತಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ದಿಲ್ಲಿ ಏರ್‌ಪೋರ್ಟ್‌, 'ಆರ್‌ಟಿ-ಪಿಸಿಆರ್‌ ಪರೀಕ್ಷೆಯ ಅರ್ಜಿ ಭರ್ತಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ನಡೆಸಲು ಡೆಸ್ಕ್‌ಗಳನ್ನು ಅಳವಡಿಸಲಾಗಿದೆ. ಈ ಸಂಖ್ಯೆಯನ್ನು ಹೆಚ್ಚಿಸುತ್ತೇವೆ. ವ್ಯವಸ್ಥೆಯನ್ನು ಸುಧಾರಿಸುವತ್ತ ಗಮನ ಹರಿಸುತ್ತೇವೆ' ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.