ಈಗ ನಿರ್ದೇಶಕ, ನಟ ರಿಷಬ್ ಶೆಟ್ಟಿ ‘ರುದ್ರಪ್ರಯಾಗ’ ಸಿನಿಮಾಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ನೋಡಿದರೆ, ರುದ್ರಪ್ರಯಾಗದ ನರಭಕ್ಷಕ ಚಿರತೆಯ ರೋಚಕ ಕಥೆಯನ್ನು ಅವರು ತೆರೆಯ ಮೇಲೆ ತರುವ ನಿರೀಕ್ಷೆ ಮೂಡಿಸಿದ್ದಾರೆ.
ಸದಾ ಒಂದಿಲ್ಲೊಂದು ವಿಶೇಷತೆ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ರಿಷಬ್ ಶೆಟ್ಟಿ, ಈ ಬಾರಿಯೂ ಟೈಟಲ್‌ನಿಂದಲೇಕುತೂಹಲ ಮೂಡಿಸಿದ್ದಾರೆ. ಜತೆಗೆ ತಮ್ಮ ಈ ಹೊಸ ಸಿನಿಮಾಕ್ಕಾಗಿ ಹೊಸ ಕಲಾವಿದರ ‘ಬೇಟೆ’ ಆರಂಭಿಸಿದ್ದಾರೆ.ಅಂದಹಾಗೆ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ನಟಿಸುತ್ತಿದ್ದು, ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ.
ಹೊಸ ಚಿತ್ರದಲ್ಲಿ ಉತ್ತರ ಕರ್ನಾಟಕದ ಕಲಾವಿದರಿಗೆ ಆದ್ಯತೆ ನೀಡಲು ನಿರ್ಧರಿಸಿರುವ ರಿಷಬ್,‘ರುದ್ರಪ್ರಯಾಗ’ದಲ್ಲಿ ನಟಿಸಲು ಪುರುಷ ಹಾಗೂ ಮಹಿಳಾ ಕಲಾವಿದರಿಗೆ ಅವಕಾಶವಿದೆ. ಪುರುಷರಿಗೆ 35ರಿಂದ 55 ವಯಸ್ಸು, ಮಹಿಳಾ ಕಲಾವಿದರಿಗೆ 30ರಿಂದ 35 ವಯಸ್ಸು ನಿಗದಿಪಡಿಸಲಾಗಿದೆ. ಆಯ್ಕೆಯಾಗುವ ಕಲಾವಿದರು ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಜಿಲ್ಲೆಯವರಾಗಿರಬೇಕು ಎಂದು ಟ್ವಿಟರ್‌ನಲ್ಲಿ ಆಹ್ವಾನ ನೀಡಿದ್ದಾರೆ.
ಅವರ ಈ ಪೋಸ್ಟ್‌ಗೆ ನೆಟ್ಟಿಗರಿಂದಲೂ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಟಿ ಪಾರೂಲ್ ಯಾದವ್ ‘ನಾನೊಬ್ಬಳು ಜವಾಬ್ದಾರಿಯುತ ನಟಿ, ಆಡಿಷನ್‌ನಲ್ಲಿ ಭಾಗವಹಿಸಬಹುದೇ’ ಎಂದು ಟ್ವೀಟ್ ಮಾಡಿದ್ದಾರೆ.
ಚಿತ್ರದಲ್ಲಿ ನಟಿಸಲು ಆಸಕ್ತಿ ಹೊಂದಿರುವವರು ತಮ್ಮ ನಾಲ್ಕು ಫೋಟೊ (ಮುಖದ ಮುಂಭಾಗ, ಎಡ, ಬಲ, ಮತ್ತು ಫುಲ್‍ಲೆಂಥ್ ಫೋಟೊ) ಕಳುಹಿಸಬೇಕು. ಆಡಿಷನ್ ವಿಷಯವಾಗಿಒಂದು ತಿಂಗಳು ರಜೆ ನೀಡುವಂತೆ ಮೇಲಧಿಕಾರಿಯಿಂದ ಅನುಮತಿ ಕೇಳುವ ಸರ್ಕಾರಿ ನೌಕರರಾಗಿ ಅಭಿನಯಿಸಿದ ದೃಶ್ಯವನ್ನು 60 ಸೆಕೆಂಡ್ ಮೀರದಂತೆ ಚಿತ್ರೀಕರಿಸಿ,80888 08302 ಸಂಖ್ಯೆಗೆ ಅ.15ರೊಳಗೆವಾಟ್ಸ್ ಆ್ಯಪ್ ಮಾಡಬೇಕು. ಇದರ ಜತೆಗೆ ವೈಯಕ್ತಿಕ ವಿವರಗಳಾದ – ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ವಿಳಾಸ, ನಟನಾ ಅನುಭವ (ಇದ್ದಲ್ಲಿ) ಕುರಿತು ಮಾಹಿತಿ ಕಳುಹಿಸುವಂತೆಯೂಅವರುಕೋರಿದ್ದಾರೆ.
ಬದರೀನಾಥದಲ್ಲಿ ಉಗಮವಾಗುವ ಅಲಕನಂದ ಹಾಗೂ ಕೇದಾರನಾಥದಲ್ಲಿ ಹುಟ್ಟುವ ಮಂದಾಕಿನಿ ನದಿಗಳ ಸಂಗಮ ಸ್ಥಳವೇ ರುದ್ರಪ್ರಯಾಗ. ಈ ಸ್ಥಳದಲ್ಲಿಸುಮಾರು 425ಕ್ಕೂ ಹೆಚ್ಚು ಜನರನ್ನು ಕೊಂದಿತ್ತೆನ್ನಲಾದ ಚಿರತೆಯೊಂದು ‘ರುದ್ರಪ್ರಯಾಗದ ನರಭಕ್ಷಕ’ ಎಂದೇ ಕುಖ್ಯಾತಿ ಪಡೆದಿತ್ತು. ಅಂದಿನ ಬ್ರಿಟಿಷ್ ಸರ್ಕಾರದ ಕೋರಿಕೆಯಂತೆ ಪ್ರಖ್ಯಾತ ಹುಲಿ ಬೇಟೆಗಾರ ಜಿಮ್ ಕಾರ್ಬೆಟ್ ಆ ಚಿರತೆ ಬೇಟೆಯಾಡಿದ್ದರು. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ‘ರುದ್ರಪ್ರಯಾಗದ ಭಯಾನಕ ನರಭಕ್ಷಕ’ ಪುಸ್ತಕದಲ್ಲಿ ಆ ಚಿರತೆಯ ರೋಚಕ ಕಥೆಗಳನ್ನು ಪರಿಚಯಿಸಿದ್ದಾರೆ. ಇಂಗ್ಲಿಷಿನಲ್ಲಿ ಬಂದ ‘ಲೆಪರ್ಡ್ ಆಫ್ ರುದ್ರಪ್ರಯಾಗ್’ ಚಲನಚಿತ್ರವೂ ಅಷ್ಟೇಜನಪ್ರಿಯವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.