ADVERTISEMENT

ಶಿವಣ್ಣ ಅಭಿನಯದ ‘ರುಸ್ತುಂ’ ಚಿತ್ರ ಶುಕ್ರವಾರ ತೆರೆಗೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 15:43 IST
Last Updated 23 ಜೂನ್ 2019, 15:43 IST
ಶಿವರಾಜ್‌ ಕುಮಾರ್
ಶಿವರಾಜ್‌ ಕುಮಾರ್   

ಶಿವರಾಜ್‌ ಕುಮಾರ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ರುಸ್ತುಂ’ ತೆರೆಗೆ ಬರಲು ಸಜ್ಜಾಗಿ ನಿಂತಿದೆ. ಜಯಣ್ಣ ಮತ್ತು ಭೋಗೇಂದ್ರ ಅವರು ನಿರ್ಮಾಣ ಮಾಡಿರುವ ಈ ಚಿತ್ರದ ನಿರ್ದೇಶನ ಕೆ. ರವಿವರ್ಮ ಅವರದ್ದು. ಚಿತ್ರ ಶುಕ್ರವಾರ ತೆರೆಗೆ ಬರುತ್ತಿದೆ.

ಚಿತ್ರದ ಬಗ್ಗೆ ಮಾಹಿತಿ ನೀಡಲು ರವಿವರ್ಮ ಅವರು ಶಿವಣ್ಣ ಜೊತೆ ಸುದ್ದಿಗೋಷ್ಠಿ ಕರೆದಿದ್ದರು. ‘ನನ್ನ ನಿರ್ದೇಶನದ ಮೊದಲ ಸಿನಿಮಾ ಇದು. ಸಿನಿಮಾ ನಿರ್ದೇಶನ ಮಾಡಬೇಕು ಎಂಬುದು ಎಂಟು ವರ್ಷಗಳಿಂದ ನಾನು ಕಂಡಿದ್ದ ಕನಸು ಕೂಡ ಹೌದು’ ಎನ್ನುತ್ತ ಮಾತು ಆರಂಭಿಸಿದ ರವಿವರ್ಮ, ‘ಈ ಕಥೆ ಕೇಳಿದ ತಕ್ಷಣ ಶಿವಣ್ಣ ಸಿನಿಮಾ ಮಾಡಲು ಒಪ್ಪಿಕೊಂಡರು’ ಎಂದು ತಿಳಿಸಿದರು. ‘ಸಿನಿಮಾ ಮಾಡಲು ಶಿವಣ್ಣ ಒಪ್ಪಿದ್ದಾರೆ ಎಂದರೆ ಆಯಿತು. ಸಿನಿಮಾ ನಿರ್ಮಾಣ ಮಾಡೋಣ’ ಎಂದು ಜಯಣ್ಣ ಅವರೂ ಒಪ್ಪಿಕೊಂಡರು.

‘ಇದು ಕಳ್ಳ–ಪೊಲೀಸ್ ಕಥೆ. ಕಳ್ಳ ಇದ್ದಲ್ಲಿ ಪೊಲೀಸರು ಇರುತ್ತಾರೆ. ಆದರೆ, ಸಂಪೂರ್ಣ ಕಥೆ ಏನು ಎಂಬುದನ್ನು ಸಿನಿಮಾ ನೋಡಿ ತಿಳಿಯಿರಿ’ ಎಂದರು ರವಿವರ್ಮ. ‘ರುಸ್ತುಂ’ ಚಿತ್ರೀಕರಣದ ಹೆಚ್ಚಿನ ಭಾಗ ನಡೆದಿರುವುದು ಬಿಹಾರದಲ್ಲಿ. ಐಎಎಸ್‌ ಅಧಿಕಾರಿಗಳ ಕುಟುಂಬದಲ್ಲಿ ನಡೆಯುವ ಘಟನೆಯನ್ನು ಇಟ್ಟುಕೊಂಡು ಕಥೆ ಹೊಸೆಯಲಾಗಿದೆ. ‘ಬಿಹಾರದಲ್ಲಿ ಈಗ ನಡೆಯುತ್ತಿರುವ ನೈಜ ಘಟನೆಗಳನ್ನು ಇಟ್ಟುಕೊಂಡೇ ಕಥೆ ರೂಪಿಸಲಾಗಿದೆ’ ಎಂದಿದೆ ಚಿತ್ರತಂಡ.

ADVERTISEMENT

ಚಿತ್ರದಲ್ಲಿ ನಾಲ್ಕು ದೊಡ್ಡ ಫೈಟ್‌ಗಳು ಇದ್ದು, ಮೈಸೂರು, ಬೆಂಗಳೂರು, ಪುಣೆ, ಗೋವಾ, ಬಿಹಾರ, ಹೈದರಾಬಾದ್‌ನಲ್ಲಿ ಒಟ್ಟು 80 ದಿನಗಳ ಚಿತ್ರೀಕರಣ ನಡೆದಿದೆ.

‘ಮಹೇಂದರ್, ಹರೀಶ್, ರೋಹಿತ್, ನನ್ನದು... ಇವೆಲ್ಲ ಈ ಸಿನಿಮಾದಲ್ಲಿನ ಮುಖ್ಯ ಪಾತ್ರಗಳು. ವ್ಯವಸ್ಥೆ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅತ್ಯುತ್ತಮ ಸಿನಿಮಾ ನೀಡಲು ಯತ್ನಿಸಿದ್ದೇವೆ’ ಎಂದರು ಶಿವಣ್ಣ. ರುಸ್ತುಂ ಚಿತ್ರದಲ್ಲಿ ಶಿವಣ್ಣ ನಿಭಾಯಿಸಿರುವ ಪಾತ್ರದ ಆ್ಯಟಿಟ್ಯೂಡ್‌, ಟಗರು ಸಿನಿಮಾದ ಪಾತ್ರದಕ್ಕಿಂತ ಹೆಚ್ಚಿದೆಯಂತೆ. ‘ಚಿತ್ರಕಥೆಯನ್ನು ಶಿಸ್ತಾಗಿ ಮಾಡಲಾಗಿದೆ. ಜನರನ್ನು ಗೊಂದಲಕ್ಕೆ ಕೆಡಹುವುದಿಲ್ಲ’ ಎಂದು ಶಿವಣ್ಣ ತಿಳಿಸಿದರು.

ಶಿವಮಣಿ ಅವರು ಇದರಲ್ಲಿ ಬಿಹಾರ ಮೂಲದ ಮಾಫಿಯಾ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ನಟನಾಗಿ ನನಗೆ ಇದು ದೊಡ್ಡ ಅವಕಾಶ. ನನ್ನ ಪಾತ್ರ ಬಹಳ ಅಥೆಂಟಿಕ್ ಆಗಿ ಮೂಡಿಬಂದಿದೆ’ ಎಂದರು ಶಿವಮಣಿ.

ತಮಿಳು ನಟ ಹರೀಶ್ ಉತ್ತಮನ್ ಅವರು ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ಹೆಚ್ಚೇನೂ ಹೇಳದ ಹರೀಶ್, ‘ಶಿವಣ್ಣ ಅವರ ಸಿನಿಮಾ ಮೂಲಕ ಕನ್ನಡ ಸಿನಿಲೋಕ ಪ್ರವೇಶಿಸಿದ್ದು ಖುಷಿಯ ವಿಚಾರ’ ಎಂದರು. ‘ಶಿವಣ್ಣ ಹಿಂದೆ ಮಾಡಿದರಂತಹ ದೃಶ್ಯವೊಂದು ಈ ಸಿನಿಮಾದಲ್ಲಿ ಇದೆ’ ಎನ್ನುವ ಮೂಲಕ ಸಿನಿಮಾ ಬಗ್ಗೆ ದೊಡ್ಡ ಕುತೂಹಲವೊಂದನ್ನು ಹುಟ್ಟಿಸಿದರು ಛಾಯಾಗ್ರಾಹಕ ಮಹೇಂದ್ರ ಸಿಂಹ.

ಬಿ.ಆರ್. ಲಕ್ಷ್ಮಣ ರಾವ್ ಬರೆದಿರುವ, ‘ತೋಳಕೆಂದು ಕುರಿಯ ಕೊಟ್ಟೆ, ಸಿಂಹಕೆಂದು ಜಿಂಕೆ ಇಟ್ಟೆ, ನರನಿಗೆ ನರನನ್ನೇ ಬಿಟ್ಟೆ ಬೇಟೆಯಾಡಲು’ ಸಾಲುಗಳು ಈ ಸಿನಿಮಾದ ಕಥೆಯನ್ನು ಹೇಳುತ್ತವೆ ಎಂದರು ಸಂಗೀತ ನಿರ್ದೇಶಕ ಅನೂಪ್ ಸೀಳಿನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.