ADVERTISEMENT

‘ರುಸ್ತುಂ’ ಮಹಿಮೆ: ಕನ್ನಡ ಕಲಿತ ವಿವೇಕ್‌ ಒಬೆರಾಯ್

​ಪ್ರಜಾವಾಣಿ ವಾರ್ತೆ
Published 14 ಜನವರಿ 2019, 9:50 IST
Last Updated 14 ಜನವರಿ 2019, 9:50 IST
ವಿವೇಕ್‌ ಒಬೆರಾಯ್‌
ವಿವೇಕ್‌ ಒಬೆರಾಯ್‌   

‘ಹ್ಯಾಟ್ರಿಕ್‌ ಹೀರೊ' ಶಿವರಾಜ್‌ಕುಮಾರ್‌ ನಟನೆಯ ‘ರುಸ್ತುಂ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟ ವಿವೇಕ್ ಒಬೆರಾಯ್‌ ತಮ್ಮ ಪಾತ್ರಕ್ಕೆ ಕನ್ನಡದಲ್ಲೇ ಡಬ್ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು ಕನ್ನಡ ಕಲಿಯುತ್ತಿದ್ದಾರಂತೆ.

ಸಾಹಸ ನಿರ್ದೇಶಕ ರವಿವರ್ಮ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್‌ ಧರಿಸುತ್ತಿದ್ದಾರೆ. ಈಗಾಗಲೇ, ‘ರುಸ್ತುಂ’ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದೆ. ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ವಿವೇಕ್ ಒಬೆರಾಯ್ ಅವರ ಪಾತ್ರಕ್ಕೆ ಧ್ವನಿ ನೀಡಲು ನಿರ್ದೇಶಕರು ಡಬ್ಬಿಂಗ್ ಕಲಾವಿದರ ಆಯ್ಕೆಗಾಗಿ ಕಸರತ್ತು ನಡೆಸಿದ್ದರು. ಆದರೆ, ವಿವೇಕ್‌ ಒಬೆರಾಯ್‌ ತಾವೇ ಧ್ವನಿ ನೀಡುವುದಾಗಿ ಹೇಳಿರುವುದು ಚಿತ್ರತಂಡ ಖುಷಿಯಾಗಿದೆಯಂತೆ.

ಚಂದನವನಕ್ಕೆ ಬಂದ ಪರಭಾಷಾ ನಟಿಯರಾದ ಪಾರ್ವತಿ ಮೆನನ್ ಮತ್ತು ಮಾನ್ಯಾ ಸೇರಿದಂತೆ ಹಲವರು ಕನ್ನಡ ಕಲಿತು ತಾವೇ ಡಬ್ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಈ ಸಾಲಿಗೆ ವಿವೇಕ್‌ ಒಬೆರಾಯ್‌ ಹೊಸ ಸೇರ್ಪಡೆ. ಸಿನಿಮಾದಲ್ಲಿ ಅವರದ್ದು ಪೊಲೀಸ್ ಅಧಿಕಾರಿಯ ಪಾತ್ರ. ಬಾಲಿವುಡ್‌ನ ಯಶ್‌ರಾಜ್ ಸ್ಟುಡಿಯೊದಲ್ಲಿ ಜನವರಿ 20ರಿಂದ ಡಬ್ಬಿಂಗ್ ಪ್ರಕ್ರಿಯೆ ಆರಂಭವಾಗಲಿದೆ.

ADVERTISEMENT

ನಟಿಯರಾದ ಶ್ರದ್ಧಾ ಶ್ರೀನಾಥ್, ಮಯೂರಿ, ರಚಿತಾ ರಾಮ್ ತಾರಾಗಣದಲ್ಲಿದ್ದಾರೆ. ಜಯಣ್ಣ- ಭೋಗೇಂದ್ರ ಈ ಚಿತ್ರಕ್ಕೆ ಆರ್ಥಿಕ ಇಂಧನ ಒದಗಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.