ADVERTISEMENT

ರುಸ್ತುಂ: ಆಕ್ರೋಶದ ಸೂಜಿಗಲ್ಲು

ವಿಜಯ್ ಜೋಷಿ
Published 28 ಜೂನ್ 2019, 13:52 IST
Last Updated 28 ಜೂನ್ 2019, 13:52 IST
ರುಸ್ತುಂ ಚಿತ್ರದಲ್ಲಿ ಶಿವರಾಜ್ ಕುಮಾರ್
ರುಸ್ತುಂ ಚಿತ್ರದಲ್ಲಿ ಶಿವರಾಜ್ ಕುಮಾರ್   

ಚಿತ್ರ: ರುಸ್ತುಂ
ನಿರ್ದೇಶನ: ಕೆ. ರವಿವರ್ಮ
ನಿರ್ಮಾಣ: ಜಯಣ್ಣ, ಭೋಗೇಂದ್ರ
ತಾರಾಗಣ: ಶಿವರಾಜ್ ಕುಮಾರ್, ವಿವೇಕ್ ಒಬೆರಾಯ್‌, ಶ್ರದ್ಧಾ ಶ್ರೀನಾಥ್, ರಚಿತಾ ರಾಮ್
ಸಂಗೀತ: ಅನೂಪ್ ಸೀಳಿನ್

ಕಳ್ಳ ಮತ್ತು ಪೊಲೀಸ್‌ ಕಥೆಗಳು ಸಿನಿಮಾ ಮಾಡುವವರಿಗೂ ನೋಡುವವರಿಗೂ ಹೊಸದಲ್ಲ. ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬ ವ್ಯವಸ್ಥೆಯನ್ನು ಎದುರುಹಾಕಿಕೊಳ್ಳುವುದು, ಅದರ ವಿರುದ್ಧ ಸೆಣೆಸುವುದು, ಮಧ್ಯದಲ್ಲಿ ಒಂದಿಷ್ಟು ಹಿನ್ನಡೆ ಅನುಭವಿಸಿದರೂ ಕೊನೆಯಲ್ಲಿ ಗುರಿ ಸಾಧಿಸುವುದು... ಇವೆಲ್ಲ ರುಚಿಗಳನ್ನು ಹೊಂದಿರುವ ಸಿನಿಮಾಗಳು ಸಾಕಷ್ಟಿವೆ.

ಶಿವರಾಜ್ ಕುಮಾರ್ ಅಭಿನಯದ, ಕೆ. ರವಿವರ್ಮ ನಿರ್ದೇಶನದ ‘ರುಸ್ತುಂ’ ಚಿತ್ರದಲ್ಲಿ ಇರುವುವೂ ಇವೇ ರುಚಿಗಳು.ಹೀಗಿದ್ದರೂ, ಈ ಚಿತ್ರದಲ್ಲಿ ಸಾಕಷ್ಟು ಜೋಶ್‌ ಅಂಶಗಳು ಇವೆ. ಆರಾಮವಾಗಿ ಕುಳಿತ ನೋಡುಗರನ್ನು ಕುರ್ಚಿಯ ಅಂಚಿಗೆ ತಂದು ಕೂರಿಸುವ ನಿರೂಪಣೆ ಇದೆ. ಹಾಗೆ ಅಂಚಿಗೆ ಬಂದ ವೀಕ್ಷಕನಲ್ಲಿ ಕೊಂಚವೇ ನಿರಾಸೆ ಮೂಡಿಸಿ, ಅವನು ಪುನಃ ಆರಾಮವಾಗಿ ಕುಳಿತುಕೊಳ್ಳುವಂತೆ ಮಾಡುವ ದೃಶ್ಯಗಳೂ ಇವೆ.

ADVERTISEMENT

ಅಭಿಷೇಕ್ ಭಾರ್ಗವ್ (ಶಿವರಾಜ್ ಕುಮಾರ್) ಒಬ್ಬ ದಕ್ಷ ಐಪಿಎಸ್‌ ಅಧಿಕಾರಿ. ಅಷ್ಟು ಮಾತ್ರವೇ ಅಲ್ಲ, ಆಕ್ರೋಶವನ್ನು ಅದುಮಿಟ್ಟುಕೊಳ್ಳಲು ಸಾಧ್ಯವೇ ಇಲ್ಲದ ವ್ಯಕ್ತಿತ್ವ ಅವನದು. ಕಾನೂನು ಭಂಜಕರನ್ನು ಎನ್‌ಕೌಂಟರ್‌ನಲ್ಲಿ ಕೊಂದುಹಾಕುವುದು ಅವನಿಗೆ ಖುಷಿಯನ್ನೂ ತೃಪ್ತಿಯನ್ನೂ ಕೊಡುವ ಕೆಲಸ. ಭರತ್‌ ರಾಜ್‌ (ವಿವೇಕ್‌ ಒಬೆರಾಯ್‌) ಇನ್ನೊಬ್ಬ ದಕ್ಷ ಐಪಿಎಸ್ ಅಧಿಕಾರಿ. ಆದರೆ ಈತ ಎನ್‌ಕೌಂಟರ್‌ಗಳಲ್ಲಿ ನಂಬಿಕೆ ಇಟ್ಟವನಲ್ಲ. ದುಷ್ಟರಿಗೆ ಕಾನೂನಿನ ಮೂಲಕವೇ ಶಿಕ್ಷೆ ಕೊಡಿಸಬೇಕು ಎನ್ನುವ ವ್ಯಕ್ತಿತ್ವ ಇವನದು.

ವಿರುದ್ಧವೆನಿಸುವ ವ್ಯಕ್ತಿತ್ವ ಹೊಂದಿರುವ ಅಭಿಷೇಕ್ ಮತ್ತು ಭರತ್ ಜೀವದ ಗೆಳೆಯರು. ಸಿನಿಮಾದ ಕಥೆಯ ಗೆರೆ ಕರ್ನಾಟಕದಿಂದ ಬಿಹಾರದವರೆಗೆ ಚಾಚಿಕೊಂಡಿರುತ್ತದೆ. ಬೆಂಗಳೂರಿನ ಒಬ್ಬ ಐಎಎಸ್‌ ಅಧಿಕಾರಿ ಕಣ್ಮರೆಯಾದ ಸಂದರ್ಭದಲ್ಲೇ, ಬಿಹಾರದಿಂದ ಕರ್ನಾಟಕಕ್ಕೆ ಬರುತ್ತಾನೆ ಅಭಿಷೇಕ್‌. ಕರ್ನಾಟಕದ ದೊಡ್ಡ ರಾಜಕಾರಣಿಯ ಹಿಡಿತದಲ್ಲಿ ಇರುವ ಅಕ್ರಮ ಉದ್ಯಮವೊಂದನ್ನು ಹೇಗೆ ಕೆಡಹುತ್ತಾನೆ ಅಭಿಷೇಕ್ ಎನ್ನುವುದು ಕಥೆಯ ಸಾರ.

ಸಿನಿಮಾ ಶುರು ಆದ ಕೆಲವೇ ನಿಮಿಷಗಳಲ್ಲಿ ವೀಕ್ಷಕನಿಗೆ ಕಥೆಯೊಳಗೆ ಪ್ರವೇಶ ಸಿಗುವುದು ಚಿತ್ರದ ಪ್ರಮುಖ ಅಂಶ. ನಾಯಕ ಶಿವರಾಜ್ ಕುಮಾರ್‌ ನಿಜವಾಗಿಯೂ ಯಾರು ಎಂಬುದು ಆರಂಭದ ಒಂದಿಷ್ಟು ಹೊತ್ತು ಗೊತ್ತಾಗದಿರುವುದು ಇನ್ನೊಂದು ಗಮನಾರ್ಹ ಅಂಶ. ಚಿತ್ರದಲ್ಲಿ ಆ್ಯಕ್ಷನ್‌ ಹಾಗೂ ಧಮ್ ದೃಶ್ಯಗಳ ಜೊತೆಯಲ್ಲೇ ಒಂದಿಷ್ಟು ಭಾವುಕ ದೃಶ್ಯಗಳೂ ಇವೆ. ಆದರೆ, ಆ್ಯಕ್ಷನ್‌ ದೃಶ್ಯಗಳ ನಡುವೆ ಬರುವ ಆ ಭಾವುಕ ಕ್ಷಣಗಳು ಸಿನಿಮಾ ಸ್ಯಾಂಡ್‌ವಿಚ್‌ನ ರುಚಿಯನ್ನು ತುಸು ಕಡಿಮೆ ಮಾಡುವುದು ನಿರಾಸೆ ಮೂಡಿಸುವ ಅಂಶ.

ನೇರ ನಿರೂಪಣಾ ಶೈಲಿ ಅನುಸರಿಸಿರುವ ಈ ಚಿತ್ರ ಇದು. ಕಥೆಗೆ ಅಗತ್ಯವಿಲ್ಲದ ದೃಶ್ಯಗಳು ಇದರಲ್ಲಿ ನಗಣ್ಯ. ಶಿವರಾಜ್‌ ಕುಮಾರ್ ಅವರ ಆ್ಯಕ್ಷನ್ ದೃಶ್ಯಗಳು, ಪೊಲೀಸ್ ಅಧಿಕಾರಿಯಾಗಿ ಅವರು ಬಳಸಿರುವ ಡೈಲಾಗ್‌ಗಳು ಚಿತ್ರದ ಜೋಶ್‌ಗೆ ಇನ್ನಷ್ಟು ಬಲ ತಂದುಕೊಟ್ಟಿವೆ. ಹಿಂದಿನ ಒಂದು ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಒಂದಿಷ್ಟು ಮೌನದ ಮೂಲಕವೇ ಮಾತನಾಡುತ್ತಿದ್ದ ಶಿವರಾಜ್ ಕುಮಾರ್‌, ಈ ಚಿತ್ರದಲ್ಲಿ ಆಕ್ರೋಶದ ಮೂಲಕವೇ ಮಾತನಾಡುತ್ತಾರೆ. ಆ ಆಕ್ರೋಶವೇ ಚಿತ್ರದ ಸ್ಥಾಯಿ ಬಿಂದು, ಶಿವರಾಜ್‌ ಕುಮಾರ್ ಅಭಿಮಾನಿಗಳನ್ನು ಆಕರ್ಷಿಸುವ ಸೂಜಿಗಲ್ಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.