ADVERTISEMENT

‘ಜಾಲಿಲೈಫ್‌’ಗೆ ಸಾಧುಕೋಕಿಲ ಆ್ಯಕ್ಷನ್‌ ಕಟ್‌

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 13:59 IST
Last Updated 26 ಮಾರ್ಚ್ 2021, 13:59 IST
‘ಜಾಲಿಲೈಫ್‌’ ಚಿತ್ರತಂಡ
‘ಜಾಲಿಲೈಫ್‌’ ಚಿತ್ರತಂಡ   

ಬೆಂಗಳೂರು: ನಟ ಸಾಧುಕೋಕಿಲ ಅವರ ನಿರ್ದೇಶನದಲ್ಲಿ ಹೊಸ ಚಿತ್ರವು ಸೆಟ್ಟೇರಿದ್ದು, ಚಿತ್ರದ ಹೆಸರು ಘೋಷಣೆಯಾಗಿದೆ.

ಅಮೃತವಾಣಿ, ಪೆರೋಲ್‌ನಂಥ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ಮಿಸಿದ್ದ ಬಿ.ಆರ್. ರಾಜಶೇಖರ್, ಇದೀಗ ‘ಜಾಲಿಲೈಫ್‌’ ಹೆಸರಿನ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸಾಧುಕೋಕಿಲ ಇದನ್ನು ನಿರ್ದೇಶಿಸಲಿದ್ದಾರೆ.

ಸಾಧುಕೋಕಿಲ ಅವರ ಜನ್ಮದಿನದ ಸಂದರ್ಭದಲ್ಲಿ ಹೊಸ ಚಿತ್ರದ ಘೋಷಣೆಯಾಗಿದ್ದು, ಈ ಸಂದರ್ಭಲ್ಲಿ ಮಾತನಾಡಿದ ರಾಜಶೇಖರ್ ಹೊಸ ಹೊಸ ಪ್ರತಿಭೆಗಳನ್ನು ಹಾಕಿಕೊಂಡು ಜಾಲಿಲೈಫ್ ಚಿತ್ರವನ್ನು ಮಾಡುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭಿಸುವುದಾಗಿ ಹೇಳಿದರು. ಚಿತ್ರದ ಪಾತ್ರಗಳಿಗಾಗಿ ರಂಗಾಯಣ, ನೀನಾಸಂ ಹಾಗೂ ಟೆಂಟ್ ಸಿನಿಮಾದ ಸುಮಾರು 500 ರಿಂದ 600 ಜನರನ್ನು ಆಡಿಷನ್‌ ಮಾಡಿ ಅದರಲ್ಲಿ 18 ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

ADVERTISEMENT

ಸಾಧುಕೋಕಿಲ ಮಾತನಾಡಿ, ‘ನಾವು ಈ ಥರ ಏನೋ ಒಂದು ಹೊಸ ಪ್ರಯತ್ನ ಮಾಡುತ್ತಿದ್ದೇವೆ ಎನ್ನುವುದು ಜನರಿಗೆ ಗೊತ್ತಾಗಲಿ ಎನ್ನುವುದೇ ನಮ್ಮ ಉದ್ದೇಶ. ಕಾಲೇಜು ಜೀವನದಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಕಥಾ ಸಾರಾಂಶ. ಇಲ್ಲಿರುವ ಎಲ್ಲರಿಗೂ ನಟನೆಯ ಅನುಭವವಿಲ್ಲ. ರಾಜಶೇಖರ್ 2 ವರ್ಷದಿಂದ ಈ ಕಥೆ ಮಾಡಿದ್ದಾರೆ. ಇದು ನನ್ನ ನಿರ್ದೇಶನದ 14ನೇ ಸಿನಿಮಾ, ರಾಜಶೇಖರ್‌ ನಿರ್ಮಾಣದ 5ನೇ ಚಿತ್ರ. ಇದು ಯೂಥ್ ಸಬ್ಜೆಕ್ಟ್ ಆಗಿರುವುದರಿಂದ ಈ ಚಿತ್ರಕ್ಕೆ ನನ್ನ ಮಗ ಸುರಾಗ್ ಸಂಗೀತ ಮಾಡುತ್ತಿದ್ದಾನೆ’ ಎಂದು ಪ್ರಕಟಿಸಿದರು. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುಚೇಂದ್ರ ಪ್ರಸಾದ್ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.