ಶಾರುಖ್ ಖಾನ್–ದೀಪಿಕಾ ಪಡುಕೋಣೆ ನಟಿಸಿರುವ ‘ಪಠಾಣ್’ ಚಿತ್ರವೀಗ ವಿವಾದದ ಗೂಡಾಗಿದೆ. ಚಿತ್ರದ ‘ಬೇಷರಂ ರಂಗ್’ ಹಾಡಿನಲ್ಲಿ ಕೇಸರಿ ಬಟ್ಟೆ ಬಳಸಿ ದೀಪಿಕಾ ಪಡುಕೋಣೆ ಅವರನ್ನು ಹಾಟ್ ಆಗಿ ತೋರಿಸಿ, ಕೇಸರಿ ಬಣ್ಣದ ಹಿಂದಿರುವ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಒಂದು ಬಣದವರು ಆರೋಪವೆತ್ತಿದ್ದು, ಇದೀಗ ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ಅದರ ಬೆನ್ನಲ್ಲೇ ಅಕ್ಷಯ್ ಕುಮಾರ್–ಕತ್ರಿನಾ ಕೈಫ್ ನಟಿಸಿ, 2009ರಲ್ಲಿ ತೆರೆಕಂಡ ‘ದೆ ದನಾ ದನ್’ಸಿನಿಮಾದ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಚಿತ್ರದ ‘ಗಲೆ ಲಗ್ ಜ’ ಹಾಡಿನಲ್ಲಿ ಅಕ್ಷಯ್ ಕುಮಾರ್ ಕೂಡ ಕೇಸರಿ ಬಟ್ಟೆ ಧರಿಸಿದ್ದ ಕತ್ರಿನಾ ಕೈಫ್‌ಗೆ ಅದೇ ರೀತಿ ಚುಂಬಿಸುತ್ತಾರೆ. ಹಾಡಿನಲ್ಲಿ ಕತ್ರಿನಾ ಅವರನ್ನು ಕೂಡ ‘ಬೇಷರಂನಲ್ಲಿ’ ತೋರಿಸಿದಷ್ಟೇ ಹಾಟ್, ಹಾಟ್ ಆಗಿ ತೋರಿಸಲಾಗಿದೆ. ಅದನ್ನು ಪ್ರಶ್ನಿಸದವರು, ಈಗ ಶಾರುಖ್ ಚಿತ್ರದ ಹಾಡಿಗೆ ತಗಾದೆ ತೆಗೆದು ಕೇಸರಿಗೆ ಅವಮಾನವಾಗುತ್ತಿದೆ, ಒಂದು ಬಣ್ಣವನ್ನು ಇಷ್ಟಪಡುವವರ ಭಾವನೆಗೆ ಧಕ್ಕೆ ತರುತ್ತಿದ್ದಾರೆ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
‘ಕಾವಿ ತೊಟ್ಟು ಸನ್ಯಾಸಿ ಎನಿಸಿಕೊಂಡವರು ಇನ್ನೊಬ್ಬರ ಮನೆಯ ಮಕ್ಕಳು, ಮಹಿಳೆಯರನ್ನು ಮುಕ್ಕಿ, ತೇಗಿ ಓಡಾಡುತ್ತಿದ್ದಾರೆ. ಅವರ ಬಗ್ಗೆ ಮಾತಾಡೋವಷ್ಟು ನೋವು, ಆತ್ಮಸಾಕ್ಷಿ ಇಲ್ಲದ ಜನಗಳು ಟೈಮ್ ಪಾಸ್‌ಗಾಗಿ ನೋಡುವ ಸಿನಿಮಾಗಳಲ್ಲಿ ನಟ- ನಟಿಯರು ಹಾಕಿದ ಚೆಡ್ಡಿ, ಅಂಗಿ, ಲುಂಗಿ ಎಂದು ಬಣ್ಣಗಳನ್ನು ನೋಡಿ ರೊಚ್ಚಿಗೆದ್ದಿದಾರೆ. ಇವರೆಲ್ಲ ನಾಚಿಕೆ ಬಿಟ್ಟವರು’ ಎಂದು ನೆಟ್ಟಿಗರೊಬ್ಬರು ಅಕ್ಷಯ್ ಕುಮಾರ್ ಚಿತ್ರದ ಫೋಟೊ ಶೇರ್ ಮಾಡಿದ್ದಾರೆ.
ಪರ–ವಿರೋಧ
ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ‘ಪಠಾಣ್’ ಬಿಡುಗಡೆಯಾಗುವುದೇ ಅನುಮಾನ ಎಂಬ ಹೇಳಿಕೆ ಕೊಟ್ಟಿದ್ದರು. ಇಲ್ಲಿಂದ ವಿವಾದ ಆರಂಭವಾಗಿತ್ತು. ಇನ್ನೊಂದೆಡೆ ಹಲವರು ಚಿತ್ರ ‘ಬಾಯ್ಕಾಟ್’ ಮಾಡಿ ಎಂಬ ಕರೆ ನೀಡುತ್ತಿದ್ದಾರೆ. ‘ಹಿಂದೂ ಭಗವಧ್ವಜದ ಸಂಕೇತವಾದ ಕೇಸರಿ ಬಣ್ಣದ ಬಿಕಿನಿ ಧರಿಸಿ ಅದಕ್ಕೆ ಬೇಷರಮ್ ರಂಗ್ ಎಂದು ಹೆಸರಿಟ್ಟಿರುವುದು ಸರಿಯಲ್ಲ. ಈ ಚಿತ್ರವನ್ನು ಬಾಯ್ಕಾಟ್ ಮಾಡಬೇಕು’ ಎಂದು ಟ್ವಿಟರ್‌ನಲ್ಲಿ ಕೆಲವರು ಪೋಸ್ಟ್‌ಗಳನ್ನು ಹಾಕಿದ್ದರು.
ಇದಕ್ಕೆ ಪ್ರತಿಯಾಗಿ, ಹೀಗೆ ಎಲ್ಲವನ್ನೂ ಬಾಯ್ಕಾಟ್ ಮಾಡಿಕೊಂಡು ಕುಳಿತರೆ ಕೊನೆಗೆ ಕೇಸರಿಬಾತ್‌ನಲ್ಲಿ ಕೇಸರಿ ಇದೆ, ವಿಮಲ್‌ನಲ್ಲಿ ಕೇಸರಿ ಇದೆ ಎಂದು ಅವೆಲ್ಲವನ್ನೂ ಬ್ಯಾನ್ ಮಾಡಬೇಕಾಗಿ ಬರಬಹುದು ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಟ ಪ್ರಕಾಶ್ ರಾಜ್ ಕೂಡ ‘ಅಂಧಭಕ್ತರನ್ನು ಎಲ್ಲಿವರೆಗೆ ಸಹಿಸಿಕೊಳ್ಳಬೇಕು’ ಎನ್ನುವ ಮೂಲಕ ಶಾರುಖ್ ಖಾನ್ ಬೆಂಬಲಕ್ಕೆ ನಿಂತಿದ್ದಾರೆ.
‘ದೆ ದನಾ ದನ್’ಸಿನಿಮಾದ ‘ಗಲೆ ಲಗ್ ಜ’ ಹಾಡು:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.