ಬೆಂಗಳೂರು: ನಟಿ ಸಾಯಿ ಪಲ್ಲವಿ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ನಟ ಕಿಶೋರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ವಿರಾಟ ಪರ್ವಂ' ಚಿತ್ರದ ಪ್ರಚಾರದ ಪ್ರಯುಕ್ತ ಮಾಧ್ಯಮ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಸಾಯಿ ಪಲ್ಲವಿ, ‘ಕಾಶ್ಮೀರಿ ಪಂಡಿತರ ಹತ್ಯೆ, ಗೋವು ಸಾಗಿಸುವ ಮುಸ್ಲಿಮರ ಮೇಲಿನ ದಾಳಿಗಳು ಒಂದೇ ತೆರನಾದ ಕ್ರೌರ್ಯವನ್ನು ಹೊಂದಿವೆ. ಈ ರೀತಿ ಮಾಡುವುದು ಮನುಷ್ಯತ್ವವಲ್ಲ, ನಾವು ಒಳ್ಳೆಯ ಮನುಷ್ಯರಾಗಬೇಕು’ ಎಂದು ಹೇಳಿದ್ದರು.
ಈ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪರ–ವಿರೋಧದ ಚರ್ಚೆಗಳು ನಡೆಯುತ್ತಿವೆ.
ಸಾಯಿ ಪಲ್ಲವಿ ಪರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ಅವರು, ‘ಸಿನೆಮಾದವರಿಗೆ ಜನಪರ ಕಾಳಜಿ ಇರುವುದು ತಪ್ಪೇ?’ ಎಂದು ಪ‍್ರಶ್ನಿಸಿದ್ದಾರೆ.
‘ಬಾಯಿ ಮುಚ್ಚಿಸುವುದು ಸರ್ಕಾರದ ಕೆಲಸವಲ್ಲವೇ, ಮಾಧ್ಯಮಗಳು ಯಾವಾಗಿಂದ ಈ ಕೆಲಸಕ್ಕೂ ಗುತ್ತಿಗೆ ಪಡೆದವು? ಸಿನಿಮಾದವರಿಗೆ ಜನಪರ ಕಾಳಜಿ ಇರುವುದು ತಪ್ಪೇ? ಕಾರಣ ಏನೇ ಆದರೂ ಕೊಲೆ ಮಾಡುವ ಮನಸ್ಥಿತಿ ಒಂದೇ ಹಾಗೂ ಅದು ತಪ್ಪು ಎಂದರೆ ತಪ್ಪೇ? ನಮ್ಮಲ್ಲಿನ ಅಲ್ಪಸಂಖ್ಯಾತರನ್ನು ನಾವು ಹೇಗೆ ಸಮಾನರಾಗಿ ಬದುಕಲು ಬಿಡುತ್ತೇವೆನ್ನುವುದು ನಮ್ಮ ಸಮಾಜದ ಸ್ವಾಸ್ಥ್ಯದ, ಸಭ್ಯತೆಯ ಅಳತೆಗೋಲು ಎನ್ನುವುದು ತಪ್ಪೇ? ಜೀವಕ್ಕೆ ಜಾತಿ ಧರ್ಮಗಳ ಹಂಗಿಲ್ಲವೆಂದರೆ ತಪ್ಪೇ? ಒಬ್ಬರ ಆಹಾರಕ್ರಮದ ಮೇಲೆ ನಿಷೇಧ ಹೇರಿ ಆಹಾರವನ್ನೂ ದ್ವೇಷದ ಸಾಧನವಾಗಿ ಬಳಸಬಾರದೆಂದರೆ ತಪ್ಪೇ?’ ಎಂದು ಕೇಳಿದ್ದಾರೆ.
‘ಮಾನವೀಯತೆಯ ನಿಲುವಿನ ಸಾಯಿ ಪಲ್ಲವಿಯಿಂದ ಈ ಮಾಧ್ಯಮದವರು ಕಲಿಯುವುದು ಸಾಕಷ್ಟಿದೆ. ಸಾಮಾಜಿಕ ಬದ್ಧತೆಯನ್ನು ಧರ್ಮಾಂಧತೆಯ ಕನ್ನಡಿಯಲ್ಲಿ ನೋಡುವ ಮಾಧ್ಯಮ ಗೋಕಾಕ್ ಚಳುವಳಿಯ ಕಾಲದಲ್ಲಿದ್ದಿದ್ದರೆ ರಾಜಕುಮಾರ್ ರವರ ಬಾಯನ್ನೂ ಮುಚ್ಚಿಸುತ್ತಿತ್ತೇನೊ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.