ಎಲ್ಲರೂ ನೋಡುವುದಕ್ಕೆ ಪರಿಪೂರ್ಣರಾಗಿರುವುದಿಲ್ಲ. ದೈಹಿಕ ಭಿನ್ನತೆಗಳನ್ನು ಆಡಿಕೊಳ್ಳುವುದು ಸುಲಭ. ‘ಅಯ್ಯೋ ಕೋಲುಮುಖದವಳು, ಸಣ್ಣ ಕಣ್ಣೋಳು, ಕುದುರೆ ನಡಿಗೆಯೋಳು...‘ ಹೀಗಳೆಯುವುದು, ಜರೆಯುವುದೆಲ್ಲ ಸಾಮಾನ್ಯ.
ಕೆಲವರು ಇಂಥವುಗಳಿಂದ ಕುಗ್ಗಿ ಹೋಗುತ್ತಾರೆ. ಇನ್ನೂ ಕೆಲವರು ಇರುವುದರಲ್ಲಿಯೇ ವಿಶೇಷವಾಗಿ ಕಾಣಿಸುತ್ತಾರೆ. ಇಂತಹ ಟೀಕೆಗಳನ್ನು ನಿಭಾಯಿಸಿ ಮನರಂಜನಾ ಕ್ಷೇತ್ರವಾದ ಸಿನಿಮಾ ರಂಗದಲ್ಲಿ ಯಶಸ್ವಿಯಾಗಿರುವ ನಟಿಯರಿದ್ದಾರೆ.
ಐಶ್ವರ್ಯ ರಾಜೇಶ:
ತಮಿಳಿನ ಕೃಷ್ಣ ಸುಂದರಿ ಐಶ್ವರ್ಯ ರಾಜೇಶ. ಟಾಲಿವುಡ್, ಬಾಲಿವುಡನ್‌ಲ್ಲಿಯೂ ನಟಿಸಿ ಸೈ ಅನಿಸಿಕೊಂಡರು.
ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ಇಬ್ಬರು ಅಣ್ಣಂದಿರ ಸಾವಿನ ನಂತರ ಮನೆಯ ಜವಾಬ್ದಾರಿ ಅಮ್ಮನ ತಲೆಯ ಮೇಲೆ ಬಿತ್ತು. ಆ ಜವಾಬ್ದಾರಿ ಹಂಚಿಕೊಳ್ಳಲು ಶಾಲಾ ದಿನಗಳಲ್ಲಿಯೇ ದುಡಿಮೆ ಆರಂಭಿಸಿದರು.
ಧಾರಾವಾಹಿಗಳಲ್ಲಿ ನಟಿಸಿ ಹೆಸರಾದರು. ದೊಡ್ಡ ಪರದೆಯ ಮೇಲೆ ಬಂದರು. ಆರಂಭದಲ್ಲಿ ಅವರ ಮೈಬಣ್ಣ ಕಪ್ಪಾಗಿರುವುದರಿಂದ ಹಲವು ಟೀಕೆಗಳು ಕೇಳಿಬಂದವು. ಟೀಕೆಗಳಿಗೆ ಕುಗ್ಗದೆ ಇಂದು ತಮಿಳಿನ ಹಲವಾರು ಚಿತ್ರಗಳಲ್ಲಿ ಮುಖ್ಯಭೂಮಿಕೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಸಾಯಿಪಲ್ಲವಿ:
ನೃತ್ಯ ಹಾಗೂ ತಮ್ಮ ಸರಳ ವ್ಯಕ್ತಿತ್ವದಿಂದ ಭಾರತದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ದಕ್ಷಿಣ ಭಾರತದ. ತ್ರಿಭಾಷಾ ನಟಿ. ಆರಂಭದಲ್ಲಿ ಮೊಡವೆಗಳಿಂದಾಗಿ ಬಹುತೇಕ ಜನರು ಅವರನ್ನು ಆಡಿಕೊಂಡಿದ್ದರು. ಧ್ವನಿ ಹಾಗೂ ಮೊಡವೆಗಳ ಕಾರಣಕ್ಕಾಗಿ ಮೊದಲ ಚಿತ್ರದಲ್ಲಿ ಸೋಲಬಹುದು ಎಂದು ಆತಂಕ ಪಟ್ಟಿದ್ದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅವರ ಮೊದಲ ಚಿತ್ರ ಪ್ರೇಮಂನಲ್ಲಿ ಯಾವುದೇ ಮೇಕಪ್ ಇಲ್ಲದೆ ನಟಿಸಿದ್ದರು. ಮೇಕಪ್ ಇಲ್ಲದ ನಟನೆ ಸದಾ ಆತ್ಮವಿಶ್ವಾಸ ತಂದುಕೊಡುತ್ತದೆ ಎನ್ನುವುದು ಪಲ್ಲವಿ ಅವರ ಅಭಿಪ್ರಾಯ. ಇವರು ದಕ್ಷಿಣ ಭಾರತದ ಬಹುಬೇಡಿಕೆಯ ನಟಿಗಳಲ್ಲಿ ಒಬ್ಬರಾಗಿದ್ದಾರೆ.
ಮಹೀರಾ ಖಾನ್:
ಪಾಕಿಸ್ತಾನ ಮೂಲದ ನಟಿ ಮಹೀರಾ ಖಾನ್, ರಯೀಸ್ ಚಿತ್ರದಿಂದ ಭಾರತ ಸಿನಿರಂಗವನ್ನು ಪ್ರವೇಶಿಸಿದವರು. ನೀಡಿದ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಚಾಕಚಕ್ಯತೆ ಹೊಂದಿದ್ದಾರೆ.
ಹಲವರು ಇವರ ಮೂಗಿಗೆ ‘ಏ ನಾಕ್ ನಹಿ ಹೈ, ಖತರ್ನಾಕ್ ಹೈ’ ಎಂದು ಜರಿದ ಬಗೆಯನ್ನು ಮಹೀರಾ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಶಾರುಖ್ ಖಾನ್ ಮಾತ್ರ ‘ಈ ಮೂಗಿನ ಕಾರಣದಿಂದಾಗಿ ಇನ್ನೂ ಸುಂದರವಾಗಿ ಕಾಣುತ್ತಿದ್ದೀಯಾ’ ಎಂದು ಹೊಗಳಿದ್ದನ್ನು ಮಹೀರಾ ಖಾನ್ ಸ್ಮರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.