ಬೆಂಗಳೂರು: ತೆಲುಗಿನ ಪ್ರಭಾಸ್ ನಟಿಸಿ, ‘ಕೆ.ಜಿ.ಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸಿರುವ ‘ಸಲಾರ್’ ಚಿತ್ರ ನಿನ್ನೆ ಬಿಡುಗಡೆಯಾಗಿದ್ದು ಜಾಗತಿಕವಾಗಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.
ಬಾಕ್ಸ್‌ಆಫೀಸ್‌ನಲ್ಲಿ ‘ಸಲಾರ್‘ ದಾಖಲೆಗಳು ಪುಡಿ ಪುಡಿ ಮಾಡಿದ್ದು ಜಾಗತಿಕವಾಗಿ ಈ ಚಿತ್ರದ ಒಂದು ದಿನದ ಗಳಿಕೆ ₹ 178.7 ಕೋಟಿ (ಪ್ರಾಥಮಿಕ ಮಾಹಿತಿ) ಎಂದು ನಟ ಪೃಥ್ವಿರಾಜ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮತ್ತೊಬ್ಬ ಸಿನಿಮಾ ವಹಿವಾಟು ವಿಶ್ಲೇಷಕ ರಮೇಶ್ ಬಾಲಾ ಅವರು ಸಹ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಿನಿಮಾ ವಹಿವಾಟು ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಈ ವರ್ಷಾಂತ್ಯದಲ್ಲಿ ಸಲಾರ್ ಸಿನಿಮಾ ಬಿಡುಗಡೆಯಾಗಿದೆ. ಭಾರತ ಮಾತ್ರವಲ್ಲದೇ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಸೇರಿದಂತೆ ಅರಬ್ ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.
ಭಾರತದಲ್ಲಿ ಈ ಚಿತ್ರ ಮೊದಲ ದಿನ ₹ 95 ಕೋಟಿ ವಹಿವಾಟು ನಡೆಸಿದೆ. ಈ ಪೈಕಿ ತೆಲುಗು ಪ್ರದೇಶಗಳಲ್ಲಿ ಶೇಕಡ 80ರಷ್ಟು ಗಳಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ. ಜಾಗತಿಕವಾಗಿ ಈ ಸಿನಿಮಾ ಒಟ್ಟಾರೆ ₹ 178.7 ಕೋಟಿ ವಹಿವಾಟು ನಡೆಸಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ₹ 70 ಕೋಟಿ, ಕರ್ನಾಟಕದಲ್ಲಿ ₹12 ಕೋಟಿ, ಕೇರಳದಲ್ಲಿ ₹ 5 ಕೋಟಿ ಕಲೆಕ್ಷನ್ ಮಾಡಿದೆ.
ಶಾರುಕ್ ಖಾನ್ ಅಭಿನಯದ ಪಠಾಣ್, ಜವಾನ್ ಮತ್ತು ರಣಬೀರ್ ಕಪೂರ್ ಅವರ ಅನಿಮಲ್ ಸಿನಿಮಾವನ್ನು ಸೋಲಿಸಿ 2023ರಲ್ಲಿ ಅತಿದೊಡ್ಡ ಓಪನಿಂಗ್ ಪಡೆದ ಸಿನಿಮಾ ಎಂಬ ಖ್ಯಾತಿ ಪಡೆದಿದೆ. ಭಾರತದಲ್ಲಿ ಪಠಾಣ್ ಮೊದಲ ದಿನ ₹ 57 ಕೋಟಿ, ಜವಾನ್ ₹ 75 ಕೋಟಿ ಮತ್ತು ಅನಿಮಲ್ ₹ 63 ಕೋಟಿ ವಹಿವಾಟು ನಡೆಸಿದ್ದವು. ಈ ಎಲ್ಲಾ ದಾಖಲೆಗಳನ್ನು ಮುರಿದ ‘ಸಲಾರ್‘ ಮೊದಲ ದಿನ ₹ 95 ಕೋಟಿ ಗಳಿಸಿದೆ.
ಸದ್ಯ ಸಲಾರ್ ಸಿನಿಮಾ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಾರಾಂತ್ಯ ಹಾಗೂ ಕ್ರಿಸ್‌ಮಸ್ ರಜೆಯೂ ಇದಕ್ಕೆ ಕಾರಣ ಎಂದು ಬಾಕ್ಸ್‌ಆಫೀಸ್ ಮೂಲಗಳು ತಿಳಿಸಿವೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದಲ್ಲಿ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಮುಖ್ಯಭೂಮಿಕೆಯಲ್ಲಿದ್ದಾರೆ. ತಾಂತ್ರಿಕವಾಗಿ ‘ಕೆಜಿಎಫ್’ ತಂಡವೇ ಇದೆ. ರವಿ ಬಸ್ರೂರು ಸಂಗೀತ, ಭುವನ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.