ಬೆಂಗಳೂರು: ಪ್ರಭಾಸ್ ಹಾಗೂ ಪೃಥ್ವಿರಾಜ ಸುಕುಮಾರನ್ ಮುಖ್ಯ ಪಾತ್ರದಲ್ಲಿರುವ, ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಲು ಅಣಿಯಾಗಿದೆ. ಇದೇ 22 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗುತ್ತಿದೆ.
ಈ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ‘A’ (ವಯಸ್ಕರಿಗೆ ಮಾತ್ರ) ಪ್ರಮಾಣ ಪತ್ರ ನೀಡಿದೆ.
‘ಎ’ ಪ್ರಮಾಣಪತ್ರ ಸಿಕ್ಕಿರುವುದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಪ್ರಶಾಂತ್ ನೀಲ್, ‘ನಾನು ತೆಲುಗು ಚಿತ್ರಗಳನ್ನು ಅನೇಕ ವರ್ಷಗಳಿಂದ ಗಮನಿಸಿಕೊಂಡು ಬಂದಿದ್ದೇನೆ. ಅಲ್ಲಿನ ಕೆಲ ಚಿತ್ರಗಳಿಗೆ ಹೋಲಿಸಿದರೆ ಹಿಂಸಾತ್ಮಕ ದೃಶ್ಯಗಳು ಸಲಾರ್ ಚಿತ್ರದಲ್ಲಿ ಕಡಿಮೆ ಇವೆ’ ಎಂದು ಪ್ರತಿಪಾದಿಸಿದ್ದಾರೆ.
ತಮ್ಮ ಚಿತ್ರದ ಕುರಿತು ನಿರ್ದೇಶಕ ರಾಜಮೌಳಿ ಅವರೊಂದಿಗೆ ನಡೆದ ಸಂದರ್ಶನದಲ್ಲಿ ನೀಲ್ ಈ ಮಾತುಗಳನ್ನು ಆಡಿದ್ದಾರೆ.
‘ಖಾನ್‌ಸಾರ್ ಎಂಬ ಕಾಲ್ಪನಿಕ ಪ್ರದೇಶದ ಕಥೆ ಹಿಂಸಾತ್ಮಕವಾಗಿ ಕೂಡಿದ್ದರೂ ಇಲ್ಲಿ ದೇವ ಮತ್ತು ವರದ ಎಂಬ ಇಬ್ಬರು ಸ್ನೇಹಿತರ ನಡುವಿನ ಕಥೆಯನ್ನು ಎತ್ತಿ ತೋರಿಸಲಾಗಿದೆ. ಒಂದು ಚಿತ್ರವನ್ನು ಬರೀ ಹಿಂಸಾತ್ಮಕವಾಗಿ ಮಾಡಬೇಕೆಂಬ ಯೋಚನೆ ನನಗೆ ಎಂದಿಗೂ ಇಲ್ಲ. ಆದರೆ, ಸೆನ್ಸಾರ್ ಮಂಡಳಿಯ ನಿಯಮಗಳು ಬದಲಾಗಿವೆ. ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಲು ಮಂಡಳಿ ತಿಳಿಸಿತ್ತು. ನಾನು ಅಸಭ್ಯ ಚಿತ್ರವನ್ನು ಮಾಡದಿದ್ದರಿಂದ ಸುಮ್ಮನಿದ್ದೆ. ನಾನು ನಿರಾಶನಾಗಿದ್ದೇನೆ. ಆದರೆ, ಪ್ರಭಾಸ್ ಒಕೆ ಎಂದರು‘ ಎಂದು ನೀಲ್ ಹೇಳಿದ್ದಾರೆ.
ಈ ಕುರಿತು ದಿ ಹಿಂದೂಸ್ತಾನ್ ಟೈಮ್ಸ್ ವೆಬ್‌ಸೈಟ್ ವರದಿ ಮಾಡಿದೆ.
ದೇವ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದರೆ, ವರದ ಪಾತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. ಶ್ರುತಿ ಹಾಸನ್, ಜಗಪತಿ ಬಾಬು, ಈಶ್ವರಿ ರಾವ್ ಹಾಗೂ ಶ್ರೀಯಾ ರೆಡ್ಡಿ ತಾರಾಗಣದಲ್ಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.