ADVERTISEMENT

ಏನ್ಮಾಡ್ತಿದ್ದಾರೆ ‘ಪಂಡಿತ್‌’: ಸಲಾರ್‌ ಸಿನಿಮಾ ಖ್ಯಾತಿಯ ನವೀನ್‌ ಶಂಕರ್‌ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 21:51 IST
Last Updated 25 ಜನವರಿ 2024, 21:51 IST
ನವೀನ್‌ ಶಂಕರ್‌ 
ನವೀನ್‌ ಶಂಕರ್‌    

ಪ್ರಶಾಂತ್‌ ನೀಲ್‌ ನಿರ್ದೇಶನದ ‘ಸಲಾರ್‌’ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ‘ಪಂಡಿತ್‌’ ಆಗಿ ಗುರುತಿಸಿಕೊಂಡಿರುವ ಚಂದನವನದ ‘ಗುಲ್ಟು’ ಖ್ಯಾತಿಯ ನವೀನ್‌ ಶಂಕರ್‌, ಇದೀಗ ‘ಸಲಾರ್‌–2’ಗೆ ಸಜ್ಜಾಗ್ತಿದ್ದಾರೆ. ಕಳೆದ ವರ್ಷ ನಾಲ್ಕು ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಕಾಣಿಸಿಕೊಂಡ, ಚಿತ್ರೀಕರಣದ ನಡುವಿನ ಕೊಂಚ ಬ್ರೇಕ್‌ನಲ್ಲಿ ತಮ್ಮ ಓದುವ ಹವ್ಯಾಸವನ್ನು ಮತ್ತೆ ಶುರುಮಾಡಿದ್ದಾರೆ. ಈ ನಡುವೆ ‘ಸಿನಿಮಾ ಪುರವಣಿ’ ಜೊತೆಗೆ ಮಾತಿಗೆ ಸಿಕ್ಕರು ನವೀನ್...

ವರ್ಷದ ದ್ವಿತೀಯಾರ್ಧದಲ್ಲಿ ‘ಸಲಾರ್‌–2’ ಸೆಟ್ಟೇರುವ ಸಾಧ್ಯತೆ 

ಯಾವ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದೀರಿ?

ADVERTISEMENT

‘ಸದ್ಯಕ್ಕೆ ಸುಮನ್‌ ಕುಮಾರ್‌ ನಿರ್ದೇಶನದ ‘ಕಿರಿಕೆಟ್‌–11’ ಶೂಟಿಂಗ್‌ ಆರಂಭವಾಗಿದೆ. ಇನ್ನೊಂದು ಸಬ್ಜೆಕ್‌ ಅಂತಿಮವಾಗಿದೆ. ಹೊಸ ತಂಡವಿದು. ಇದರ ಶೀರ್ಷಿಕೆ ಇನ್ನಷ್ಟೇ ನಿಗದಿಯಾಗಬೇಕಿದೆ. ಜೊತೆಗೆ ‘ಗುಲ್ಟು’ ಸಿನಿಮಾ ಖ್ಯಾತಿಯ ನಿರ್ದೇಶಕ ಜನಾರ್ಧನ್‌ ಚಿಕ್ಕಣ್ಣ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡುತ್ತಿದ್ದೇನೆ. ಹೊಂಬಾಳೆ ಫಿಲ್ಮ್ಸ್‌ನ ‘ಸಲಾರ್‌’ ಚಿತ್ರದ ಎರಡನೇ ಭಾಗದ ಚಿತ್ರೀಕರಣ ಇದೇ ವರ್ಷದ ದ್ವಿತೀಯಾರ್ಧದಲ್ಲಿ ನಡೆಯುವ ಸಾಧ್ಯತೆ ಇದೆ. ಸುಮಾರು ಕಥೆಗಳು ಬರುತ್ತಿವೆ. ಇವೆಲ್ಲದರ ನಡುವೆ ಕೊಂಚ ಬ್ರೇಕ್‌ ಸಿಕ್ಕಿದ್ದು, ನನ್ನ ಹವ್ಯಾಸವಾದ ಓದಿನ ಕಡೆಗೆ ಮತ್ತೆ ಗಮನಹರಿಸಿದ್ದೇನೆ. 

ಯಾರೀ ‘ಪಂಡಿತ್‌’?

‘ಸಲಾರ್‌’ ಮೊದಲನೇ ಭಾಗ ನನ್ನ ಪಾತ್ರಕ್ಕೆ ಪ್ರವೇಶಿಕೆಯಷ್ಟೇ. ಇದರ ವಿಸ್ತರಣೆಯನ್ನು ಎರಡನೇ ಭಾಗದಲ್ಲಿ ಕಾಣಬಹುದು. ‘ಪಂಡಿತ್‌’ ಪಾತ್ರದ ಪವರ್‌ ಈ ಭಾಗದಲ್ಲಿ ಕಾಣಿಸಿಕೊಳ್ಳಲಿದೆ. ‘ಪಂಡಿತ್‌’ ಈ ರೀತಿ ಇರುತ್ತಾನೆ ಎನ್ನುವ ಸುಳಿವಷ್ಟೇ ಮೊದಲ ಭಾಗದಲ್ಲಿದ್ದು, ಆತ ಏನು ಮಾಡುತ್ತಾನೆ ಎನ್ನುವುದು ಮುಂದಿನ ಭಾಗದಲ್ಲಿ ತಿಳಿಯಲಿದೆ.

ನಾಯಕನೇ? ಖಳನಾಯಕನೇ? 

‘ಸಲಾರ್‌’ ಆದ ಬಳಿಕ ನೆಗೆಟಿವ್‌ ಶೇಡ್ಸ್‌ ಇರುವ ಪಾತ್ರಗಳು ಹೆಚ್ಚು ಬರುತ್ತಿವೆಯೇ ಎಂಬ ಪ್ರಶ್ನೆಗೆ, ‘ಹೊಯ್ಸಳ ಸಿನಿಮಾ ಬಿಡುಗಡೆಯಾದ ಬಳಿಕ ನನಗೆ ಕೇವಲ ವಿಲನ್‌ ಪಾತ್ರಗಳೇ ಬರಲಿವೆಯೇ ಎನ್ನುವ ಪ್ರಶ್ನೆಗಳಿದ್ದವು. ಆದರೆ ಆ ರೀತಿ ಆಗಲಿಲ್ಲ. ವಿಲನ್‌ ಪಾತ್ರಕ್ಕೆ ಆಫರ್‌ಗಳು ಬಂದಿರುವುದು ಕಮ್ಮಿ. ಬಂದಿರುವುದೆಲ್ಲ ಹೀರೊ ಪಾತ್ರಗಳೇ. ಆದರೆ ಸಮಸ್ಯೆ ಏನಿತ್ತೆಂದರೆ ಆ ಕಥೆಗಳಲ್ಲಿ ಹೀರೊಗೆ ಇರುವ ಗುಣಲಕ್ಷಣಗಳು ವಿಲನ್‌ಗೆ ಇರುವಂತಿದ್ದವು. ತುಂಬಾ ರಗಡ್‌ ಪಾತ್ರಗಳು, ಹಿಂಸಾತ್ಮಕ ಮನಃಸ್ಥಿತಿಯ ಪಾತ್ರಗಳಿದ್ದವು. ನನಗೆ ಇಷ್ಟವಾದ ಕಥೆಗಳನ್ನಷ್ಟೇ ಒಪ್ಪಿಕೊಳ್ಳುತ್ತಿದ್ದೇನೆ’ ಎಂದರು ನವೀನ್‌. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.