ಹೈದರಾಬಾದ್: ತೆಲುಗು ಖ್ಯಾತ ನಟ ಪ್ರಭಾಸ್ ನಟಿಸಿರುವ ‘ಸಲಾರ್’ ಚಿತ್ರವು ಈ ಬೇಸಿಗೆಯಲ್ಲಿ ಜಪಾನ್ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.
‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ‘ಸಲಾರ್’ ಚಿತ್ರವನ್ನು ಜಪಾನಿನ ಚಲನಚಿತ್ರ ವಿತರಣಾ ಕಂಪನಿ ಟ್ವಿನ್ ಬಿಡುಗಡೆ ಮಾಡಲಿದೆ.
ಈ ಕುರಿತು ಸಲಾರ್‌ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ನಿರ್ಮಾಪಕರು, ‘ಸಲಾರ್’ ಈ ಬೇಸಿಗೆಯಲ್ಲಿ ಜಪಾನ್‌ನಾದ್ಯಂತ ಬರಲಿದೆ. ಚಲನಚಿತ್ರ ವಿತರಣಾ ಕಂಪನಿ ಟ್ವಿನ್, ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಿದೆ. ಅಲ್ಲದೆ, ಮಾರ್ಚ್ 7ರಂದು ಲ್ಯಾಟಿನ್ ಅಮೆರಿಕದಲ್ಲಿ ಸ್ಪ್ಯಾನಿಷ್ ಭಾಷೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
ನಟ ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ‘ಸಲಾರ್’ ಚಿತ್ರವು, ಡಿಸೆಂಬರ್ 22ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಗೊಂಡಿತ್ತು. ಜಾಗತಿಕ ಮಟ್ಟದಲ್ಲಿ ₹650 ಕೋಟಿ ಗಳಿಸಿದೆ.
ಚಿತ್ರದಲ್ಲಿ ನಟಿ ಶ್ರುತಿ ಹಾಸನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದ ಖ್ಯಾತ ಕಲಾವಿದರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.