ADVERTISEMENT

‘ಸಲಾರ್‌’ ವಿಷ್ಣುವಿಗೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 18:49 IST
Last Updated 7 ಜನವರಿ 2024, 18:49 IST
ವಜ್ರಾಂಗ್‌ ಶೆಟ್ಟಿ
ವಜ್ರಾಂಗ್‌ ಶೆಟ್ಟಿ   

ತೆಲುಗು ತಾರೆ ಪ್ರಭಾಸ್‌ ನಟನೆಯ ‘ಸಲಾರ್‌’ ಚಿತ್ರದಲ್ಲಿ ಸಾಕಷ್ಟು ಕನ್ನಡದ ನಟರಿದ್ದರು. ತೆರೆಯಲ್ಲಿ ಕಾಣಿಸಿಕೊಳ್ಳಲು ತೀವ್ರ ಪೈಪೋಟಿಯಿರುವಷ್ಟು ಖಳನಾಯಕರಿದ್ದರು. ಅವರೆಲ್ಲರ ನಡುವೆಯೂ ತೆರೆಯ ಮೇಲೆ ಹೆಚ್ಚು ಕಾಲ ಕಾಣಿಸಿಕೊಂಡು ಗಮನಸೆಳೆದ ಕನ್ನಡದ ನಟರಲ್ಲಿ ಕುಂದಾಪುರ ವಜ್ರಾಂಗ್‌ ಶೆಟ್ಟಿ ಒಬ್ಬರು.

ಚಿತ್ರದಲ್ಲಿ ಒಂದಷ್ಟು ಭಯಂಕರ ಕೊಲೆಗಳು ನಡೆಯುತ್ತವೆ. ‌ಮಹಾರ ಸಾಮ್ರಾಜ್ಯದಲ್ಲಿ ನಡೆಯುವ ಭರ್ಜರಿ ಫೈಟ್‌ನಲ್ಲಿ ‘ವಿಷ್ಣು’ ಪಾತ್ರಧಾರಿಯನ್ನು ಈಟಿಯಿಂದ ಕತ್ತು, ತಲೆ ಸೀಳಿ ಭೀಕರವಾಗಿ ಕೊಲ್ಲಲಾಗುತ್ತದೆ. ವಿಷ್ಣುವಿನ ಪಾತ್ರದಲ್ಲಿ ವಜ್ರಾಂಗ್‌ ಕಾಣಿಸಿಕೊಂಡಿದ್ದಾರೆ.

‘‘2014 ರಲ್ಲಿ ಡಾ.ರಾಜ್‌ಕುಮಾರ್‌ ನಿರ್ಮಾಣ ಸಂಸ್ಥೆಯ ‘ಸಿದ್ದಾರ್ಥ್‌’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟೆ. ‘ಮಂತ್ರಂ’ ಸಿನಿಮಾದಲ್ಲಿಯೂ ನಾಯಕನಾಗಿಯೂ ಕಾಣಿಸಿಕೊಂಡೆ. ಆದರೆ ‘ಸಲಾರ್‌’ ಬಿಡುಗಡೆ ಬಳಿಕ ಎಲ್ಲರೂ ಗುರುತಿಸುತ್ತಿದ್ದಾರೆ. ತೆರೆಯಲ್ಲಿ ಹೆಚ್ಚು ಕಾಲ ಕಾಣಿಸಿಕೊಳ್ಳುವ ಉತ್ತಮ ಕಥೆಗಳನ್ನು ಒಪ್ಪಿಕೊಳ್ಳುತ್ತಿರುವೆ. ‘ಮಾರ್ಟಿನ್‌’ ಚಿತ್ರದಲ್ಲಿ ನಟಿಸಿದ್ದೇನೆ. ‘ಬರ್ಮಾ’ ಚಿತ್ರದಲ್ಲಿ ನಟಿಸುತ್ತಿರುವೆ. ತೆಲುಗಿನಿಂದ ಹೆಚ್ಚು ಅವಕಾಶಗಳು ಬರುತ್ತಿವೆ. ಆದರೆ ಯಾವುದನ್ನೂ ಅಂತಿಮಗೊಳಿಸಿಲ್ಲ’’ ಎನ್ನುತ್ತಾರೆ ವಜ್ರಾಂಗ್‌.

ADVERTISEMENT

‘ಉಗ್ರಂ’ ಸಿನಿಮಾದಲ್ಲಿ ಬರುವ ಅತ್ಯಾಚಾರದ ದೃಶ್ಯವನ್ನೇ ಪ್ರಶಾಂತ್‌ ನೀಲ್‌ ‘ಸಲಾರ್‌’ನಲ್ಲಿ ಇನ್ನೊಂದು ರೀತಿ ಹೆಣೆದಿದ್ದಾರೆ. ಖಾನ್ಸರ್‌ ಸಾಮ್ರಾಜ್ಯದ ರಾಜ ನಾರಂಗ್‌ನ ಮಗನೇ ವಿಷ್ಣು. ‘ರಾಮೋಜಿ ರಾವ್‌ ಫಿಲ್ಮ್‌ಸಿಟಿಯಲ್ಲಿ ಹಾಕಿದ್ದ ಸೆಟ್‌ನಲ್ಲಿ ಈ ದೃಶ್ಯಗಳು ಚಿತ್ರೀಕರಣವಾಗಿದ್ದವು. ನನ್ನ ಭಾಗ 22 ದಿನ ಶೂಟ್‌ ಆಗಿತ್ತು. ಅದರಲ್ಲಿ ಮಹರಾದಲ್ಲಿ ನಡೆಯುವ ದೃಶ್ಯಾವಳಿಗಳನ್ನು 17 ದಿನ ಚಿತ್ರೀಕರಿಸಲಾಗಿತ್ತು’ ಎಂದು ಚಿತ್ರದ ಕುರಿತು ಅನುಭವ ಹಂಚಿಕೊಂಡರು ವಜ್ರಾಂಗ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.