ಪಿಟಿಐ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಕಡೆಯವರಿಂದ ಮತ್ತೊಂದು ಬೆದರಿಕೆ ಸಂದೇಶ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ನಟನಿಗೆ ಬೆದರಿಕೆ ಹಾಕಿರುವ ವ್ಯಕ್ತಿಯು ₹5 ಕೋಟಿ ಬೇಡಿಕೆ ಇರಿಸಿ, ಮುಂಬೈ ಟ್ರಾಫಿಕ್ ಪೊಲೀಸ್ ಸಹಾಯವಾಣಿಗೆ ಬೆದರಿಕೆ ಸಂದೇಶ ಕಳುಹಿಸಿದ್ದು, ಮಧ್ಯರಾತ್ರಿಯ ಸುಮಾರಿಗೆ ಬಂದಿರುವ ಆ ಸಂದೇಶವನ್ನು ಅಧಿಕಾರಿಯೊಬ್ಬರು ಸ್ವೀಕರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
‘ಬೆದರಿಕೆ ಸಂದೇಶ ಕಳುಹಿಸಿದ ವ್ಯಕ್ತಿ ತಾನು ಲಾರೆನ್ಸ್ ಬಿಷ್ಣೋಯಿ ಅವರ ಸಹೋದರನೆಂದು ಹೇಳಿಕೊಂಡಿದ್ದಾನೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
‘ಸಲ್ಮಾನ್ ಖಾನ್ ಜೀವಂತವಾಗಿರಲು ಬಯಸಿದರೆ, ಅವರು ನಮ್ಮ (ಬಿಷ್ಣೋಯಿ ಸಮುದಾಯ) ದೇವಸ್ಥಾನಕ್ಕೆ ಹೋಗಿ ಕ್ಷಮೆಯಾಚಿಸಬೇಕು ಅಥವಾ ₹5 ಕೋಟಿ ಹಣ ನೀಡಬೇಕು. ಹಾಗೆ ಮಾಡದಿದ್ದರೆ, ನಾವು ಅವನನ್ನು ಕೊಲ್ಲುತ್ತೇವೆ; ನಮ್ಮ ಗ್ಯಾಂಗ್ ಇನ್ನೂ ಸಕ್ರಿಯವಾಗಿದೆ’ ಎಂದು ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ.
ಬೆದರಿಕೆ ಸಂದೇಶದ ಮೂಲವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಲ್ಮಾನ್ ಖಾನ್‌ಗೆ ಭದ್ರತೆ ಹೆಚ್ಚಿಸಲಾಗಿದೆ. ಈ ಸಂದೇಶಕ್ಕೂ ಕೊಲೆ ಯತ್ನ ಮತ್ತು ಸುಲಿಗೆ ಸೇರಿ ವಿವಿಧ ಆರೋಪಗಳ ಪ್ರಕರಣಗಳಲ್ಲಿ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿಗೆ ನಂಟು ಇದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.