ADVERTISEMENT

ಸಲ್ಮಾನ್ ಹತ್ಯೆಗೆ ಬಿಷ್ಣೋಯಿ ಮುಂದಾಗಿರುವುದೇಕೆ? ಪರಿಹಾರ ಹೇಳಿದ ರಾಕೇಶ್ ಟಿಕಾಯತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2024, 11:44 IST
Last Updated 27 ಅಕ್ಟೋಬರ್ 2024, 11:44 IST
   

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹತ್ಯೆಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಬೆಂಬಿದ್ದಿದ್ದು, ಸಲ್ಮಾನ್ ಖಾನ್ ಬೆಂಬಲಕ್ಕೆ ನಿಂತಿದ್ದ ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಬಾಬಾ ಸಿದ್ದೀಕಿಯನ್ನೂ ಇತ್ತೀಚೆಗೆ ಹತ್ಯೆ ಮಾಡಿಸಿದ್ದಾನೆ. ಜೈಲಿನಲ್ಲೇ ಇದ್ದುಕೊಂಡು ಸಲ್ಮಾನ್ ಖಾನ್ ಅವರನ್ನು ಕೊಂದೇ ಕೊಲ್ಲುತ್ತೇನೆ ಎಂದು ಪಣ ತೊಟ್ಟಿದ್ದಾನೆ. ಇದಕ್ಕೊಂದು ಪರಿಹಾರ ಸೂಚಿಸಿರುವ ರೈತ ಮುಖಂಡ ರಾಕೇಶ್ ಟಿಕಾಯತ್, ಕೂಡಲೇ ದೇವಸ್ಥಾನಕ್ಕೆ ಹೋಗಿ ಕ್ಷಮೆ ಯಾಚಿಸುವಂತೆ ಸಲ್ಮಾನ್ ಖಾನ್‌ಗೆ ಸೂಚಿಸಿದ್ದಾರೆ.

‘ದೇಗುಲಕ್ಕೆ ಹೋಗಿ ಪ್ರಾಣ ಉಳಿಸಿಕೊ’

ಸಲ್ಮಾನ್ ಖಾನ್‌ಗೆ ಇರುವ ಜೀವ ಬೆದರಿಕೆ ಬಗ್ಗೆ ಹಿಂದೂಸ್ಥಾನ್ ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿರುವ ಟಿಕಾಯತ್, ಇದು ಒಂದು ಸಮಾಜಕ್ಕೆ ಸಂಬಂಧಿಸಿರುವ ವಿಷಯ. ಸಲ್ಮಾನ್ ಖಾನ್ ದೇವಸ್ಥಾನಕ್ಕೆ ಹೋಗಿ, ತನ್ನ ತಪ್ಪುಗಳಿಗೆ ಕ್ಷಮೆಯಾಚನೆ ಮಾಡಬೇಕು. ಇಲ್ಲವಾದರೆ, ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿ, ಸಲ್ಮಾನ್ ಖಾನ್ ಅವರಿಗೆ ಯಾವಾಗ ಏನು ಮಾಡುತ್ತಾನೊ ಹೇಳಲು ಬರುವುದಿಲ್ಲ. ಲಾರೆನ್ಸ್ ಬಹಳ ಕೆಟ್ಟ ಮನುಷ್ಯ ಎಂದು ಹೇಳಿದ್ದಾರೆ.

ADVERTISEMENT

ಸಿದ್ದೀಕಿ ಹತ್ಯೆ ಬಳಿಕ ಸಲ್ಮಾನ್ ಖಾನ್‌ ಅವರ ಮುಂಬೈನಲ್ಲಿರುವ ಮನೆ ಸುತ್ತ 60 ಪೊಲೀಸರ ಭದ್ರತೆ ಒದಗಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿಗಾ ವಹಿಸಲಾಗುತ್ತಿದೆ. ಮನೆಯ ಸಮೀಪಕ್ಕೆ ಬರುವ ಜನರನ್ನು ತಪಾಸಣೆ ನಡೆಸಲಾಗುತ್ತಿದೆ.

ಸಲ್ಮಾನ್‌ ಖಾನ್ ಮೇಲೆ ಬಿಷ್ಣೋಯಿಗೆ ಇರುವ ಸೇಡು ಏನು?

1998ರಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣದ ಸಂದರ್ಭ ರಾಜಸ್ಥಾನದ ಹಳ್ಳಿಯೊಂದರಲ್ಲಿ ಕೃಷ್ಣಮೃಗ ಬೇಟೆಯಾಡಿದ ಆರೋಪ ಸಲ್ಮಾನ್ ಖಾನ್ ಮೇಲಿದೆ. ಕೃಷ್ಣಮೃಗಗಳನ್ನು ಬಿಷ್ಣೋಯಿ ಸಮುದಾಯವು ಅತ್ಯಂತ ಪವಿತ್ರ ಎಂದು ಭಾವಿಸುತ್ತದೆ. ಈ ಆರೋಪ ಬಂದ ಬಳಿಕ ಸಲ್ಮಾನ್ ಖಾನ್ ಬಹುದೊಡ್ಡ ಕಾನೂನು ಸಂಘರ್ಷ ಎದುರಿಸಿದರು. 26 ವರ್ಷ ನಡೆದ ಪ್ರಕರಣದ ವಿಚಾರಣೆಯಲ್ಲಿ ಸಲ್ಮಾನ್ ಖಾನ್ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಬಳಿಕ, ಖುಲಾಸೆಗೊಂಡಿದ್ದ ಸಲ್ಮಾನ್ ಅವರನ್ನು ದೋಷಿ ಎಂದು ಮರುವಿಚಾರಣೆ ವೇಳೆ ತೀರ್ಪು ನೀಡಲಾಗಿತ್ತು. ಈಗ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.

ಪ್ರಕರಣದ ಸಹ ಆರೋಪಿಗಳಾದ ಸೈಫ್ ಅಲಿಖಾನ್, ಸೊನಾಲಿ ಬೇಂದ್ರೆ, ಟಬು ಮತ್ತು ನೀಲಂ ಕೊಠಾರಿ ಅವರನ್ನು ಸಾಕ್ಷ್ಯಧಾರ ಕೊರತೆ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಲಾಗಿತ್ತು.

ಬಿಷ್ಣೋಯಿ ಸಮುದಾಯಕ್ಕೆ ಸೇರಿದ ಲಾರೆನ್ಸ್ ಬಿಷ್ಣೋಯಿ ಕೃಷ್ಣಮೃಗ ಬೇಟೆ ಆರೋಪಕ್ಕೆ ಸಂಬಂಧಿಸಿದಂತೆಯೇ ಸಲ್ಮಾನ್ ಖಾನ್ ಹತ್ಯೆಗೆ ಮುಂದಾಗಿದ್ದಾನೆ. 2022ರಲ್ಲಿ ಹಲವು ಜೀವ ಬೆದರಿಕೆ ಕರೆ ಬಂದಿವೆ. ಅವರ ಮನೆ ಎದುರು ಗುಂಡಿನ ಸದ್ದು ಕೇಳಿಬಂದಿದೆ. ಸಲ್ಮಾನ್ ಖಾನ್ ಹತ್ಯೆಗೆ ಮುಂಬೈಗೆ ಬಂದಿದ್ದ ಲಾರೆನ್ಸ್ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.