ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೊಯ್ ಸಹಚರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ಬಾಂದ್ರಾ ಪೊಲೀಸರು ಹಾಗೂ ರಾಜಸ್ಥಾನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ದಾಖಢ್‌ರಾಮ್ ಬಿಷ್ಣೋಯ್ ಎಂಬುವನನ್ನು ಭಾನುವಾರ ಜೋಧಪುರದಲ್ಲಿ ಬಂಧಿಸಿದ್ದಾರೆ. ಈ ಕುರಿತು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ದಾಖಢ್‌ರಾಮ್ ಬಿಷ್ಣೋಯ್ ಸಲ್ಮಾನ್ ಖಾನ್ ಕೊಲ್ಲುವುದಾಗಿ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಸಲ್ಮಾನ್ ಖಾನ್ ಕಚೇರಿಗೆ ಬೆದರಿಕೆ ಪತ್ರ ರವಾನಿಸಿದ್ದ. ಬೆದರಿಕೆ ಪತ್ರದ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ದಾಖಢ್‌ರಾಮ್‌ನನ್ನು ಬಂಧಿಸಿ ಮುಂಬೈಗೆ ಕರೆದೋಯ್ದಿದ್ದಾರೆ.
ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಪಾತಕಿ ಲಾರೆನ್ಸ್ ಬಿಷ್ಣೊಯ್‌ನಿಂದ ಹಾಗೂ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ನಿಂದ ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಪತ್ರ ಹಾಗೂ ಕರೆ ಬಂದಿವೆ.
ಮುಂಬೈ ಪೊಲೀಸರು ಬಾಂದ್ರಾದ ಸಲ್ಮಾನ್ ನಿವಾಸಕ್ಕೆ ಪೊಲೀಸ್ ಭದ್ರತೆಯನ್ನು ಆರಂಭಿಸಿದ್ದಾರೆ. ಸಲ್ಮಾನ್ ಖಾನ್ ನನ್ನ ಹಾಗೂ ನನ್ನ ಗುಂಪಿನ ಕ್ಷಮೆ ಕೇಳಬೇಕು. ಇಲ್ಲದಿದ್ದರೇ ಸಲ್ಮಾನ್ ಖಾನ್ ಅವರನ್ನು ಶೀಘ್ರದಲ್ಲೇ ಕೊಲ್ಲುತ್ತೇವೆ, ಅವರ ಇಲ್ಲವೇ ಅಹಂ ಇಳಿಸುತ್ತೇವೆ ಎಂದು ಲಾರೆನ್ಸ್ ಬಿಷ್ಣೋಯ್ ಬೆದರಿಕೆ ಹಾಕಿದ್ದ.
ಲಾರೆನ್ಸ್ ಬಿಷ್ಣೋಯ್ ಶುಕ್ರವಾರ ಸಲ್ಮಾನ್ ಖಾನ್‌ಗೆ ಬೆದರಿಕೆ ಸಂದೇಶ ಕಳಿಸಿದ್ದ ನಂತರ ಮತ್ತೊಂದು ಬೆದರಿಕೆ ಪತ್ರ ಸಲ್ಮಾನ್ ಖಾನ್ ಕಚೇರಿಗೆ ಈ ಮೇಲ್ ಮೂಲಕ ಬಂದಿದೆ.
ಅದರಲ್ಲಿ ‘ಸಲ್ಮಾನ್ ನೀನು ಗೋಲ್ಡಿ ಬ್ರಾರ್‌ನ್ನು ಮುಖಾಮುಖಿಯಾಗಿ ಭೇಟಿಯಾಗಬೇಕು. ಇಲ್ಲದಿದ್ದರೇ ಮುಂದಾಗುವ ಅನಾಹುತಕ್ಕೆ ನೀನೆ ಹೊಣೆ.. ಮುಂದಿನ ಸಾರಿ ಖಂಡಿತ’ ಎಂದು ಹೇಳಲಾಗಿದೆ.
ಬೆದರಿಕೆ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಕಚೇರಿಯ ಸಿಬ್ಬಂದಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಿಧು ಮೂಸೆವಾಲಾ ಹತ್ಯೆ ಪ್ರಕಣದಲ್ಲಿ ಪ್ರಮುಖ ಆರೋಪಿಯೂ ಆಗಿರುವ ಗೋಲ್ಡಿ ಬ್ರಾರ್ ಕೆನಡಾದಲ್ಲಿರುವ ಭಾರತ ಮೂಲದ ಗ್ಯಾಂಗ್‌ಸ್ಟರ್ ಆಗಿದ್ದಾನೆ. ಸದ್ಯ ಪಂಜಾಬ್ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಲಾರೆನ್ಸ್ ಬಿಷ್ಣೊಯ್ ಪಂಜಾಬ್‌ನ ಬತಿಂಡಾದ ಜೈಲಿನಲ್ಲಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.