ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಮಧ್ಯರಾತ್ರಿ ಶಾರುಕ್ ಖಾನ್ ನಿವಾನ್ ಮನ್ನತ್‌ಗೆ ಭೇಟಿ ನೀಡಿ ಕುಟುಂಬ ಸದಸ್ಯರ ಜೊತೆ ಮಾತುಕತೆ ನಡೆಸಿದ್ದಾರೆ.
ಮುಂಬೈ ಸಮೀಪದ ಕಡಲಿನಲ್ಲಿ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ದಾಳಿ ನಡೆಸಿದ್ದ ಮಾದಕ ಪದಾರ್ಥ ನಿಯಂತ್ರಣ ಬ್ಯೂರೋ(ಎನ್‌ಸಿಬಿ) ಆರ್ಯನ್ ಖಾನ್(23) ಸೇರಿ ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.
ಸಲ್ಮಾನ್ ಖಾನ್ ಭೇಟಿ ಬಳಿಕ ಶಾರುಕ್ ಖಾನ್, ವಕೀಲರನ್ನು ಭೇಟಿ ಮಾಡಿ ಮಗನ ಬಿಡುಗಡೆಗೆ ಪ್ರಯತ್ನ ನಡೆಸಿದ್ದಾರೆ.
ಆರ್ಯನ್ ವಿರುದ್ಧ ನಿಷೇಧಿತ ವಸ್ತುಗಳ ಖರೀದಿ, ದಾಸ್ತಾನು ಮತ್ತು ಬಳಕೆ ಆರೋಪಗಳಿವೆ ಎಂದು ಎನ್‌ಸಿಬಿ ಹೇಳಿದೆ. ಇಂದಿನವರೆಗೆ ಆರ್ಯನ್‌ನನ್ನು ನ್ಯಾಯಾಲಯ ಎನ್‌ಸಿಬಿ ವಶಕ್ಕೆ ನೀಡಿದೆ.
ಚಾಟಿಂಗ್ ಸಂದೇಶಗಳ ಆಧಾರದಲ್ಲಿ ಮಾತ್ರ ಆರ್ಯನ್ ಅವರನ್ನು ಬಂಧಿಸಲಾಗಿದ್ದು, ಜಾಮೀನು ನೀಡುವಂತೆ ಆರ್ಯನ್ ಪರ ವಕೀಲರು ವಾದಿಸಿದ್ದಾರೆ.
‘ಡ್ರಗ್ಸ್ ಪಾರ್ಟಿ ನಡೆದಿದೆ ಎನ್ನಲಾದ ಹಡಗಿನಲ್ಲಿ ಆರ್ಯನ್ ಕ್ಯಾಬಿನ್ ಅಥವಾ ಆಸನಕ್ಕಾಗಿ ಯಾವುದೇ ಟಿಕೆಟ್ ಬುಕ್ ಮಾಡಿಲ್ಲ, ಅವರನ್ನು ಪಾರ್ಟಿಗೆ ಆಹ್ವಾನಿಸಿದ್ದರಿಂದ ಅಲ್ಲಿಗೆ ಬಂದಿದ್ದರು. ಅವರಿಗೆ ಬೋರ್ಡಿಂಗ್ ಪಾಸ್ ಕೂಡ ಇರಲಿಲ್ಲ. ಚಾಟ್ ಆಧಾರದ ಮೇಲೆ ಮಾತ್ರ ಬಂಧಿಸಲಾಗಿದೆ’ಎಂದು ವಕೀಲರು ವಾದಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.