ADVERTISEMENT

ಸುದ್ದಿಯಲ್ಲಿರಲು ಸೆಲೆಬ್ರಿಟಿಗಳನ್ನು ಅವಮಾನಿಸುವುದು ನಾಚಿಕೆಗೇಡು: ನಾಗ ಚೈತನ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2024, 12:38 IST
Last Updated 3 ಅಕ್ಟೋಬರ್ 2024, 12:38 IST
<div class="paragraphs"><p>ನಟ ಅಕ್ಕಿನೇನಿ ನಾಗ ಚೈತನ್ಯ</p></div>

ನಟ ಅಕ್ಕಿನೇನಿ ನಾಗ ಚೈತನ್ಯ

   

ಹೈದರಾಬಾದ್: ಮಾಧ್ಯಮಗಳ ಗಮನ ಸೆಳೆಯುವುದಕ್ಕಾಗಿ ಸೆಲೆಬ್ರಿಟಿಗಳ ಜೀವನದ ವೈಯಕ್ತಿಕ ನಿರ್ಧಾರಗಳನ್ನು ಅವಮಾನಿಸುವುದು ನಾಚಿಕೆಗೇಡು ಎಂದು ನಟ ಅಕ್ಕಿನೇನಿ ನಾಗ ಚೈತನ್ಯ ಹೇಳಿದ್ದಾರೆ. ಆ ಮೂಲಕ, ತಮ್ಮ ಬಗ್ಗೆ ಮಾತನಾಡಿದ್ದ ತೆಲಂಗಾಣ ಸಚಿವೆ ಕೊಂಡಾ ಸುರೇಖಾ ಅವರಿಗೆ ತಿರುಗೇಟು ನೀಡಿದ್ದಾರೆ.

ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ರುತ್‌ ಪ್ರಭು ಅವರ ವಿಚ್ಛೇದನಕ್ಕೆ ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ.ರಾಮ ರಾವ್‌ (ಕೆಟಿಆರ್‌) ಕಾರಣ ಎಂದು ಸುರೇಖಾ ಹೇಳಿದ್ದರು. ಇದಕ್ಕೆ ಎಕ್ಸ್‌/ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ನಾಗ ಚೈತನ್ಯ, ಸಚಿವೆ ನೀಡಿರುವ ಹೇಳಿಕೆಯು ಸುಳ್ಳು ಮತ್ತು ಆಕ್ಷೇಪಾರ್ಹವಾದದ್ದು ಎಂದಿದ್ದಾರೆ.

ADVERTISEMENT

'ವಿಚ್ಛೇದನವು ಜೀವನದ ಅತ್ಯಂತ ನೋವಿನ ಮತ್ತು ದುರದೃಷ್ಟಕರವಾದ ನಿರ್ಧಾರವಾಗಿದೆ. ನಾನು ಮತ್ತು ನನ್ನ ಮಾಜಿ ಪತ್ನಿ, ಸಾಕಷ್ಟು ಯೋಚನೆ ಮಾಡಿದ ನಂತರ ವಿಭಿನ್ನ ಹಾದಿಯಲ್ಲಿ ಮುನ್ನಡೆಯುವ ತೀರ್ಮಾನ ಮಾಡಿದ್ದೆವು. ನಮ್ಮ ಜೀವನದ ಗುರಿ ಸಾಧಿಸುವ ನಿಟ್ಟಿನಲ್ಲಿ ಪರಸ್ಪರ ಗೌರವ ಮತ್ತು ಘನತೆಯಿಂದ ಮುಂದುವರಿಯುವ ಸಲುವಾಗಿ ಇಬ್ಬರು ವಯಸ್ಕರು ಶಾಂತಿಯುತವಾಗಿ ತೆಗೆದುಕೊಂಡ ನಿರ್ಧಾರ ಅದಾಗಿತ್ತು' ಎಂದಿದ್ದಾರೆ.

ಮುಂದುವರಿದು, 'ಆದಾಗ್ಯೂ, ಈ ವಿಚಾರವಾಗಿ ಆಧಾರರಹಿತವಾದ ಮತ್ತು ಸಂಪೂರ್ಣ ಅಪಹಾಸ್ಯಕರವಾದ ವದಂತಿಗಳನ್ನು ಹರಡಲಾಗುತ್ತಿದೆ. ಇಷ್ಟಾದರೂ, ನನ್ನ ಮಾಜಿ ಪತ್ನಿ ಮತ್ತು ಕುಟುಂಬದ ಮೇಲಿನ ಅಪಾರವಾದ ಗೌರವದಿಂದ ಮೌನವಾಗಿದ್ದೇನೆ' ಎಂದು ತಿಳಿಸಿದ್ದಾರೆ.

ಹಾಗೆಯೇ, 'ಸಚಿವೆ ಕೊಂಡಾ ಸುರೇಖಾ ಅವರು ಇಂದು ನೀಡಿರುವ ಹೇಳಿಕೆಯು ಸುಳ್ಳಷ್ಟೇ ಅಲ್ಲ. ಅದು ಅಪಹಾಸ್ಯಕರ ಮತ್ತು ಆಕ್ಷೇಪಾರ್ಹವಾದದ್ದು. ಮಹಿಳೆಯರು ಬೆಂಬಲ ಮತ್ತು ಗೌರವಕ್ಕೆ ಅರ್ಹರು. ಮಾಧ್ಯಮಗಳಲ್ಲಿ ಸುದ್ದಿಯಾಗುವ ಸಲುವಾಗಿ ಸೆಲೆಬ್ರಿಟಿಗಳ ಜೀವನದ ವೈಯಕ್ತಿಕ ನಿರ್ಧಾರಗಳನ್ನು ಅವಮಾನಿಸುವುದು, ಲಾಭ ಮಾಡಿಕೊಳ್ಳಲು ನೋಡುವುದು ನಾಚಿಕೆಗೇಡು' ಎಂದು ಕಟುವಾಗಿ ಹೇಳಿದ್ದಾರೆ.

ಸುರೇಖಾ ಹೇಳಿದ್ದೇನು?
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ್ದ ಸುರೇಖಾ, 'ಕೆ.ಟಿ.ರಾಮರಾವ್‌ ಡ್ರಗ್ಸ್‌ ವ್ಯಸನಿ. ಚಿತ್ರರಂಗದ ಖ್ಯಾತನಾಮರಿಗೆ ರೇವ್‌ ಪಾರ್ಟಿ ಆಯೋಜಿಸುತ್ತಿದ್ದರು. ಅವರ ದೌರ್ಜನ್ಯ ಸಹಿಸದೆ ಅನೇಕ ನಟಿಯರು ನಟನೆಯನ್ನೇ ಬಿಟ್ಟಿದ್ದಾರೆ. ಕೆಲವರು ಮದುವೆಯಾಗಿ, ಚಿತ್ರರಂಗದಿಂದ ದೂರ ಉಳಿದಿದ್ದಾರೆ' ಎಂದು ಹೇಳಿದ್ದರು.

'ನಾಗಾರ್ಜುನ ಒಡೆತನದ ಎನ್‌–ಕನ್ವೆನ್ಷನ್‌ ಸೆಂಟರ್‌ ನೆಲಸಮಗೊಳಿಸುವುದು ಬೇಡವೆಂದರೆ, ಸಮಂತಾ ಅವರನ್ನು ತನ್ನ ಬಳಿಗೆ ಕಳುಹಿಸುವಂತೆ ರಾಮರಾವ್‌ ಬೇಡಿಕೆ ಇಟ್ಟಿದ್ದರು. ರಾಮರಾವ್‌ ಬಳಿ ಹೋಗುವಂತೆ ನಾಗಾರ್ಜುನ ಬಲವಂತ ಮಾಡಿದ್ದನ್ನು ಸಮಂತಾ ಒಪ್ಪಿರಲಿಲ್ಲ. ಈ ವಿಚಾರವೇ ವಿಚ್ಛೇದನಕ್ಕೆ ಕಾರಣವಾಯಿತು' ಎಂದಿದ್ದರು.

ನಾಗಾರ್ಜುನ, ಸಮಂತಾ ಕಿಡಿ
ಸುರೇಖಾ ಹೇಳಿಕೆಗೆ ಎಕ್ಸ್‌/ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ನಾಗ ಚೈತನ್ಯ ತಂದೆ, ನಟ ನಾಗಾರ್ಜುನ, 'ಸಚಿವೆ ಕೊಂಡಾ ಸುರೇಖಾ ಅವರ ಈ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ' ಎಂದಿದ್ದರು.

ಮುಂದುವರಿದು, 'ರಾಜಕೀಯದಿಂದ ದೂರ ಇರುವ ಚಿತ್ರ ತಾರೆಯರನ್ನು ನಿಮ್ಮ ವಿರೋಧಿಗಳನ್ನು ಟೀಕಿಸುವುದಕ್ಕಾಗಿ ಬಳಸಿಕೊಳ್ಳಬೇಡಿ. ಬೇರೆಯವರ ಖಾಸಗಿತನವನ್ನು ಗೌರವಿಸಿ. ಜವಾಬ್ದಾರಿಯುತ ಸ್ಥಾನದಲ್ಲಿ ಒಬ್ಬ ಮಹಿಳೆಯಾಗಿ ನಮ್ಮ ಕುಟುಂಬದ ವಿರುದ್ಧದ ನಿಮ್ಮ ಹೇಳಿಕೆಗಳು ಹಾಗೂ ಆರೋಪಗಳು ಅಸಂಬದ್ಧ ಹಾಗೂ ಸುಳ್ಳು. ಕೂಡಲೇ ಹೇಳಿಕೆಗಳನ್ನು ಹಿಂಪಡೆಯಬೇಕು. ಬೇಷರತ್ ಕ್ಷಮೆ ಯಾಚಿಸಬೇಕು' ಎಂದು ಒತ್ತಾಯಿಸಿದ್ದರು.

ನಟಿ ಸಮಂತಾ ಅವರು, 'ವಿಚ್ಛೇದನ ಎನ್ನುವುದು ವೈಯಕ್ತಿಕ ವಿಚಾರ, ದಯವಿಟ್ಟು ರಾಜಕೀಯದಿಂದ ನನ್ನ ಹೆಸರನ್ನು ದೂರವಿಡಿ. ನಾನು ರಾಜಕೀಯದಿಂದ ದೂರವಿದ್ದೇನೆ. ಹೀಗೆಯೇ ಮುಂದುವರಿಯಲು ಬಯಸುತ್ತೇನೆ. ಸಚಿವೆಯಾಗಿ ನಿಮ್ಮ ಮಾತುಗಳಿಗೆ ಒಂದು ತೂಕವಿದೆ. ಅದನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ಖಾಸಗಿ ವಿಚಾರಗಳನ್ನು ಗೌರವಿಸಿ ಮತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ಳಿ' ಎಂದು ಕಿವಿ ಹಿಂಡಿದ್ದರು.

ಹೇಳಿಕೆ ಹಿಂದಕ್ಕೆ

ಟೀಕೆ ವ್ಯಕ್ತವಾದ ಬೆನ್ನಲ್ಲೇ ಸುರೇಖಾ ಅವರು, 'ನನ್ನ ಹೇಳಿಕೆಗಳು ನಿಮಗೆ ಅಥವಾ ನಿಮ್ಮ ಅಭಿಮಾನಿಗಳಿಗೆ ನೋವುಂಟು ಮಾಡಿದ್ದರೆ, ಹೇಳಿಕೆಗಳನ್ನು ಬೇಷರತ್ತಾಗಿ ಹಿಂಪಡೆದುಕೊಳ್ಳುತ್ತೇನೆ. ಅನ್ಯಥಾ ಭಾವಿಸಬೇಡಿ. ಮಹಿಳೆಯರನ್ನು ಕೀಳಾಗಿ ಕಾಣುವ ರಾಜಕೀಯ ನಾಯಕರನ್ನು ಪ್ರಶ್ನಿಸುವುದು ನನ್ನ ಹೇಳಿಕೆಯ ಉದ್ದೇಶವಾಗಿತ್ತು. ನಿಮ್ಮನ್ನು (ಸಮಂತಾ) ನೋಯಿಸುವುದಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.