ADVERTISEMENT

ಪಾತ್ರ ಸಾಕೆನಿಸುವುದು ಉಂಟೇ: ನಟಿ ಸಂಯುಕ್ತ ಹೊರನಾಡು

​ಪ್ರಜಾವಾಣಿ ವಾರ್ತೆ
Published 1 ಮೇ 2020, 3:24 IST
Last Updated 1 ಮೇ 2020, 3:24 IST
ಸಂಯುಕ್ತಾ ಹೊರನಾಡು
ಸಂಯುಕ್ತಾ ಹೊರನಾಡು   
""

ಸಂಯುಕ್ತಾ ಹೊರನಾಡು ಅವರು ಅಭಿನಯಿಸಿರುವ ಹೊಸ ಚಿತ್ರ ‘ಮೈಸೂರು ಮಸಾಲಾ’. ಇದರ ಪೋಸ್ಟರ್‌ ಮೇಲೆ ಅನ್ಯಗ್ರಹ ವಾಸಿಯ ಚಿತ್ರವಿದೆ. ಹಾಗೆಯೇ, ಹೆಸರಿನ ಜೊತೆ ಹಾರುವ ತಟ್ಟೆ (ಯುಎಫ್‌ಒ) ಕುರಿತ ಉಲ್ಲೇಖವಿದೆ. ಇದರ ಚಿತ್ರೀಕರಣ ಪೂರ್ಣಗೊಂಡಿದ್ದು, ಗ್ರಾಫಿಕ್ಸ್‌ ಕೆಲಸಗಳು ನಡೆಯುತ್ತಿವೆಯಂತೆ.

ಈ ಸಿನಿಮಾ ಸೇರಿದಂತೆ ತಮ್ಮ ವೃತ್ತಿಬದುಕಿನ ಹತ್ತು ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ ಸಂಯುಕ್ತಾ. ‘ಮೈಸೂರು ಮಸಾಲಾ ಚಿತ್ರದಲ್ಲಿ ನಾನು ಅನಂತ್ ನಾಗ್ ಅವರ ಜೊತೆ ನಟಿಸಿದ್ದೇನೆ. ಅಜಯ್ ಸರ್ಪೇಶ್ಕರ್ ಇದರ ನಿರ್ದೇಶಕ. ಶರ್ಮಿಳಾ ಮಾಂಡ್ರೆ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ. ಇದು ನಮ್ಮ ಪರಂಪರೆಯನ್ನು ಉಳಿಸುವುದು ಹೇಗೆ ಎಂಬ ಬಗೆಗಿನ ಸಿನಿಮಾ. ಯುಎಫ್ಒಗಳ ಬಗ್ಗೆಯೂ ಇದರಲ್ಲಿ ಪ್ರಸ್ತಾಪ ಬರುತ್ತದೆ. ಯುಎಫ್‌ಒ ಬಗ್ಗೆ ಈಗ ಹೆಚ್ಚು ಹೇಳುವುದಿಲ್ಲ. ನಾನು ಇದರಲ್ಲಿ ಇನ್‌ಸ್ಪೆಕ್ಟರ್‌ ರಾಧಿಕಾ ಎನ್ನುವ ಪೊಲೀಸ್ ಅಧಿಕಾರಿಯ ಪಾತ್ರ ನಿಭಾಯಿಸಿದ್ದೇನೆ’ ಎಂದು ಈ ಸಿನಿಮಾ ಕುರಿತು ಪ್ರಶ್ನಿಸಿದಾಗ ಪಟಪಟನೆ ಹೇಳಿದರು ಸಂಯುಕ್ತಾ.

ಈ ಚಿತ್ರದಲ್ಲಿ ಸಿಕ್ಕಿರುವ ಪೊಲೀಸ್ ಪಾತ್ರ ಸಂಯುಕ್ತಾರಿಗೆ ಬಹಳ ಇಷ್ಟವಾಯಿತಂತೆ. ‘ನಾನು ಪೊಲೀಸ್ ಆಗಿ ಅಭಿನಯಿಸಿದ್ದು, ಅನಂತ್ ಸರ್ ಜೊತೆ ಅಭಿನಯಿಸಿದ್ದು ಇದೇ ಮೊದಲು’ ಎಂದರು ಅವರು.

ADVERTISEMENT

ಈ ಚಿತ್ರವಲ್ಲದೆ ‘ಹೊಂದಿಸಿ ಬರೆಯಿರಿ’, ‘ಅರಿಷಡ್ವರ್ಗ’, ‘ಗ್ಯಾಂಗ್‌ಸ್ಟರ್‌’, ‘ಆಮ್ಲೆಟ್‌’, ‘ರೆಡ್‌ರಮ್‌’ ಸಿನಿಮಾಗಳಲ್ಲಿ ಈಗ ಸಂಯುಕ್ತಾ ನಟಿಸಿದ್ದಾರೆ. ಇವೆಲ್ಲ ತೆರೆಗೆ ಬರಬೇಕಿವೆ. ‘ತೆಲುಗಿನ ವೆಬ್‌ ಸರಣಿಯಲ್ಲಿ ಕೂಡ ನಟಿಸಿದ್ದೇನೆ. ಲಾಕ್‌ಡೌನ್‌ ಅವಧಿಯಲ್ಲಿ ಅದು ತೆರೆಗೆ ಬಂದಿದೆ’ ಎಂದು ಅವರು ತಿಳಿಸಿದರು.

‘ಎಷ್ಟು ಒಳ್ಳೆಯ ಪಾತ್ರ ಸಿಕ್ಕಿದರೂ ಸಾಕು ಅಂತ ಅನ್ನಿಸುವ ಕ್ಷೇತ್ರ ನಮ್ಮದಲ್ಲ. ಯಾವುದೇ ಪಾತ್ರ ಸಿಕ್ಕರೂ ಅದರಿಂದ ಕಲಿಯುವುದು ಬಹಳಷ್ಟು ಇರುತ್ತದೆ. ನಾನು ಎಷ್ಟು ಸಾಧ್ಯವೋ ಅಷ್ಟು ಬಗೆಯ ಪಾತ್ರಗಳನ್ನು ನಿಭಾಯಿಸಲು ಬಯಸುವವಳು. ಸಾಕು ಎಂದು ನನಗೆ ಯಾವತ್ತೂ ಅನ್ನಿಸುವುದಿಲ್ಲ’ ಎಂದು ತಮ್ಮ ಪಾತ್ರಪ್ರೇಮದ ಬಗ್ಗೆ ಹೇಳಿದರು.

ವೆಬ್‌ ಮತ್ತು ಸಿನಿಮಾ: ‘ವೆಬ್‌ಗೆ ಹೋಲಿಸಿದರೆ ಸಿನಿಮಾ ಹೆಚ್ಚು ಶಕ್ತಿಶಾಲಿ ಮಾಧ್ಯಮ. ಇಲ್ಲಿ ಎರಡು ಗಂಟೆಯಲ್ಲಿ ಒಂದು ಕಥೆ ಹೇಳಬೇಕು. ವೆಬ್ ಮಾಧ್ಯಮವೂ ಒಳ್ಳೆಯದೇ. ಇಲ್ಲಿ ಒಂದು ಪಾತ್ರವನ್ನು ಕಟ್ಟಲು ಇನ್ನಷ್ಟು ಸಮಯ ಸಿಗುತ್ತದೆ, ಕಥೆಯನ್ನು ವಿವರಿಸಲು ಹೆಚ್ಚಿನ ಅವಕಾಶ ಇದೆ’ ಎಂದು ಹೇಳಿದ ಸಂಯುಕ್ತಾ, ‘ಕಲಾವಿದೆಯಾಗಿ ನನಗೆ ಎರಡೂ ಬೇಕು. ಪಾತ್ರಕ್ಕೆ ನ್ಯಾಯ ಒದಗಿಸುವುದು
ನನ್ನ ಕರ್ತವ್ಯವೇ ವಿನಾ ಮಾಧ್ಯಮ ಯಾವುದು ಎಂಬುದು ನನಗೆ ಮುಖ್ಯವಲ್ಲ. ಆದರೆ, ಎಲ್ಲ ಮಾಧ್ಯಮಗಳಲ್ಲೂ (ರಂಗಭೂಮಿ, ಸಿನಿಮಾ, ವೆಬ್) ಅನುಭವ ಪಡೆದುಕೊಳ್ಳಬೇಕು ಎಂಬುದು ನನ್ನ ಬಯಕೆ’ ಎಂದರು.

‘ಗಾಡ್‌’ ವೆಬ್ ಸರಣಿ ಹಿಂದಿನ ವರ್ಷ ಬಿಡುಗಡೆ ಆಯಿತು. ಅದರಲ್ಲಿ ನಾನು ಪತ್ರಕರ್ತೆಯ ಪಾತ್ರ ನಿಭಾಯಿಸಿದ್ದೇನೆ. ಈ ವೆಬ್ ಸರಣಿಯ ಕಾರಣದಿಂದಾಗಿ ನನಗೆ ತೆಲುಗಿನಲ್ಲಿ ಹೆಚ್ಚೆಚ್ಚು ಅವಕಾಶಗಳು ಸಿಗುತ್ತಿವೆ. ಇದು ಹಿಂದಿಗೆ ಡಬ್ ಆಗಿದೆ. ಮುಂದೆ ನಾನು ಹಿಂದಿಯಲ್ಲೂ ಒಂದು ವೆಬ್ ಸರಣಿಯಲ್ಲಿ ಅಭಿನಯಿಸಲಿದ್ದೇನೆ’ ಎಂದು ತಿಳಿಸಿದರು. ಸಂಯುಕ್ತಾ ಅವರಿಗೆ ತಾವು ವೃತ್ತಿಬದುಕಿನಲ್ಲಿ ನಿಭಾಯಿಸಿದ ಎಲ್ಲ ಪಾತ್ರಗಳೂ ಇಷ್ಟ. ಆದರೆ ತಮಿಳಿನ ‘ರೆಡ್‌ ರಮ್‌’ ಚಿತ್ರದಲ್ಲಿ ಸಿಕ್ಕ ಪಾತ್ರ ಬಹಳ ಇಷ್ಟವಾಗಿದೆ. ಅಂಥದ್ದೊಂದು ಪಾತ್ರವನ್ನು ಯಾವತ್ತೂ ಮಾಡಿರಲಿಲ್ಲ. ಪ್ರೀತಿಯನ್ನು ಆ ಪಾತ್ರದ ರೀತಿಯಲ್ಲಿ ಅರ್ಥ ಮಾಡಿಕೊಂಡಿರಲಿಲ್ಲ ಎಂದು ಅವರು ಹೇಳುತ್ತಾರೆ.

35 ವರ್ಷ ದಾಟಿದ ಮಹಿಳೆಗೆ ಒಳ್ಳೆಯ ಪಾತ್ರ ಸಿಗುತ್ತಾ?!

‘ಒಟಿಟಿ ವೇದಿಕೆಗಳು ಇರುವ ಕಾರಣ ಈಗ ವ್ಯಕ್ತಿ ಹೇಗೆ ಕಾಣಿಸಿದರೂ, ಒಳ್ಳೆಯ ಫಿಗರ್ ಹೊಂದಿರದೆ ಇದ್ದರೂ ಒಂದಲ್ಲ ಒಂದು ಪಾತ್ರ ಖಂಡಿತ ಸಿಗುತ್ತದೆ ಇದೆ. ನಟನೆಯ ಕೌಶಲ ಇದ್ದರೆ ಸಾಯುವವರೆಗೂ ಪಾತ್ರಗಳು ಸಿಗುತ್ತವೆ. ಮನೀಶಾ ಕೊಯಿರಾಲಾ ಅವರಂಥವರು ವೆಬ್‌ನಲ್ಲಿ ಒಳ್ಳೊಳ್ಳೆಯ ಪಾತ್ರ ನಿಭಾಯಿಸುತ್ತಿದ್ದಾರೆ...’

‘ಸಿನಿಮಾಗಳಲ್ಲಿ ಕೂಡ ಅಂತಹ ಪಾತ್ರಗಳು ಸಿಗುವ ಸ್ಥಿತಿ ಬರುತ್ತದೆ. ವಿದ್ಯಾ ಬಾಲನ್ ಅವರು ಕಹಾನಿ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಮಾಡಿಲ್ಲವೇ? ನಾನು 40 ವರ್ಷ ತಲುಪುವ ಹೊತ್ತಿಗೆ ಆ ರೀತಿಯ ಸ್ಥಿತಿ ಬರಬಹುದು!’ ಎಂದರು ಸಂಯುಕ್ತಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.