ಎಂ.ಡಿ. ಶ್ರೀಧರ್ ನಿರ್ದೇಶನದ ದರ್ಶನ್ ನಟನೆಯ ‘ಒಡೆಯ’ ಚಿತ್ರದ ನಾಯಕಿ ಸನ ತಿಮ್ಮಯ್ಯ. ಅವರು ಹುಟ್ಟಿದ್ದು ಕೊಡಗಿನಲ್ಲಿ. ಮಾಡೆಲಿಂಗ್ ಜಗತ್ತಿನಿಂದ ಬೆಳ್ಳಿತೆರೆಗೆ ಅಡಿ ಇಟ್ಟಿರುವ ಅವರಿಗೆ ಇಲ್ಲಿಯೇ ಬದುಕು ಕಟ್ಟಿಕೊಳ್ಳುವ ಆಸೆ.
‘ಒಡೆಯ’ ಚಿತ್ರದ ವಿರಾಮದ ನಂತರ ಬರುವ ದೃಶ್ಯವದು. ನಾನು ಕೋಪಗೊಂಡಿರುತ್ತೇನೆ. ನನ್ನನ್ನು ಸಮಾಧಾನಪಡಿಸಲು ದರ್ಶನ್ ಬರುತ್ತಾರೆ. ಅವರು ಗಾಂಧಿನಗರದ ಗಲ್ಲಾಪೆಟ್ಟಿಗೆಯ ಯಜಮಾನ. ಮನೆಯಲ್ಲಿ ಸಾಕಷ್ಟು ತಾಲೀಮು ನಡೆಸಿಯೇ ಸೆಟ್‌ಗೆ ಹೋಗಿದ್ದೆ. ಆದರೆ, ಸ್ಟಾರ್ ನಟನ ಎದುರು ಹೇಗೆ ನಟಿಸಬೇಕೆಂಬ ಆತಂಕವಿತ್ತು. ಸಮಯ ಓಡುತ್ತಿತ್ತು. ಟೇಕ್‌ಗಳು ಮುಗಿದರೂ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗಲಿಲ್ಲ. ನನ್ನ ಪರಿಸ್ಥಿತಿ ಅವರಿಗೆ ಅರ್ಥವಾಯಿತು. ನಿನಗೆ ಗೊತ್ತಾಗದಿದ್ದರೆ ಮಾನಿಟರ್ ನೋಡು ಎಂದರು. ಅಲ್ಲಿಗೆ ಹೋಗಿ ನೋಡಿದಾಗಲೇ ನನ್ನ ತಪ್ಪಿನ ಅರಿವಾಯಿತು’
ಇಷ್ಟನ್ನು ಪಟಪಟನೇ ಒಂದೇ ಉಸಿರಿಗೆ ಹೇಳಿ ನಕ್ಕರು ನಟಿ ಸನ ತಿಮ್ಮಯ್ಯ. ‘ಒಡೆಯ’ ಚಿತ್ರದಲ್ಲಿನ ಪಾತ್ರ ತನ್ನ ಅಭಿನಯದ ದಿಕ್ಕು ಬದಲಿಸಲಿದೆ ಎಂಬ ವಿಶ್ವಾಸ ಅವರಲ್ಲಿತ್ತು. ಚಿತ್ರತಂಡದ ಸಹಕಾರ ತಮ್ಮೊಳಗಿನ ನಟಿಯನ್ನು ರೂಪಿಸಲು ವೇದಿಕೆಯಾಯಿತು ಎಂಬ ಕೃತಜ್ಞತಾ ಭಾವವೂ ಇತ್ತು.
ಎಂ.ಡಿ. ಶ್ರೀಧರ್ ನಿರ್ದೇಶನದ ‘ಒಡೆಯ’ ಸನ ನಟನೆಯ ಮೊದಲ ಚಿತ್ರ. ಅವರು ಹುಟ್ಟಿದ್ದು ಕೊಡಗಿನಲ್ಲಿ. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಬಿ.ಕಾಂ ಪದವಿ ಪಡೆದಿದ್ದು ಮೈಸೂರಿನ ವಿದ್ಯಾ ಆಶ್ರಯದಲ್ಲಿ. ಅವರದು ಕೃಷಿ ಕುಟುಂಬ. ಜ್ಯುವೆಲ್ಲರಿ ಉದ್ಯಮದಲ್ಲಿಯೂ ಕುಟುಂಬ ತೊಡಗಿಸಿಕೊಂಡಿದೆ. ಇದೇ ಅವರು ಜ್ಯುವೆಲ್ಲರಿ ಡಿಸೈನ್‌ನಲ್ಲಿ ಡಿಪ್ಲೊಮ ಓದಲು ಪ್ರೇರಣೆ. ಈ ವಿಷಯದಲ್ಲಿ ಬೆಂಗಳೂರಿನ ವೋಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಒಂದು ವರ್ಷದ ಕೋರ್ಸ್ ಕೂಡ ಪೂರೈಸಿದ್ದಾರೆ.ಈ ನಡುವೆಯೇ 2015ರಲ್ಲಿ ಪ್ರಸಾದ್ ಬಿದ್ದಪ್ಪ ಮಾಡೆಲಿಂಗ್ ಏಜೆನ್ಸಿಯಿಂದ ನಡೆದ ಮೆಗಾ ಮಾಡೆಲ್ ಹಂಟ್ ಸ್ಪರ್ಧೆಯಲ್ಲೂ ಅವರು ವಿಜೇತರಾದರು.
ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸನ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಆಗಲೇ, ಅವರಿಗೆ ನಟನೆಯ ಮೇಲೆ ಆಸಕ್ತಿ ಚಿಗುರೊಡೆದಿದ್ದು. ಅವರ ಆ ಆಸೆಗೆ ಬುನಾದಿ ಹಾಕಿದ್ದು ಬೆಂಗಳೂರಿನ ಅವಿನಾಶ್ ಡ್ಯಾನಿಯಲ್ ಫಿಲ್ಮ್ ಸ್ಕೂಲ್. ಅಲ್ಲಿಯೇ ನಟನೆಯ ಪಾಠಗಳನ್ನು ಕಲಿತರು.
‘ಫಿಲ್ಮ್ ಸ್ಕೂಲ್‌ನ ಅನುಭವ ನನ್ನೊಳಗಿನ ನಟಿಗೆ ಭರವಸೆ ತುಂಬಿತು. ಆ ವೇಳೆ ಒಡೆಯ ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿತ್ತು. ನನ್ನಮ್ಮ ಮತ್ತು ದರ್ಶನ್ ಅವರ ತಾಯಿ ಬಹುಕಾಲದ ಸ್ನೇಹಿತೆಯರು. ಈ ಗೆಳೆತನವೇ ನಾನು ಬಣ್ಣದಲೋಕ ಪ್ರವೇಶಿಸಲು ಬೆಸುಗೆ ಹಾಕಿತು. ಅಮ್ಮನ ಒತ್ತಾಸೆಯಿಂದಲೇ ಒಡೆಯ ಕೋಟೆ ಪ್ರವೇಶಿಸಲು ಸುಲಭವಾಯಿತು. ನಟನೆ, ಕನ್ನಡ ಗೊತ್ತಿರುವುದು ಮತ್ತಷ್ಟು ಸಹಕಾರಿಯಾಯಿತು’ ಎಂದು ಕಣ್ಣರಳಿಸುತ್ತಾರೆ.
‘ಚಿಕ್ಕಂದಿನಿಂದಲೂ ದರ್ಶನ್ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಅವರೊಟ್ಟಿಗೆ ನಟಿಸುತ್ತಿರುವುದು ನನ್ನ ಅದೃಷ್ಟ’ ಎಂದು ಖುಷಿ ಹಂಚಿಕೊಳ್ಳುತ್ತಾರೆ.
ಚಿತ್ರದಲ್ಲಿನ ಪಾತ್ರ ಕುರಿತು ಅವರು ಉತ್ಸಾಹದಿಂದಲೇ ಮಾತನಾಡುತ್ತಾರೆ. ‘ಸಿನಿಮಾದಲ್ಲಿ ನನ್ನದು ಪೇಂಟರ್ ಪಾತ್ರ. ಸಂಪ್ರದಾಯಸ್ಥ ಕುಟುಂಬದ ಹುಡುಗಿ. ಸೀರೆಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿರುವೆ. ದರ್ಶನ್ ಮತ್ತು ನನ್ನ ನಡುವೆ ಒಪ್ಪಿತ ಪ್ರೀತಿ ಇರುತ್ತದೆ. ಒಂದು ಹಂತದಲ್ಲಿ ಅದು ಹಳಿ ತಪ್ಪುತ್ತದೆ. ನಮ್ಮಿಬ್ಬರ ಪ್ರೀತಿ ಮತ್ತೆ ಹಳಿಗೆ ಮರಳುತ್ತದೆಯೇ ಎನ್ನುವುದೇ ಚಿತ್ರದ ತಿರುಳು’ ಎಂದು ಸಿನಿಮಾದ ಕಥೆಗೆ ಬಗ್ಗೆ ಕುತೂಹಲ ಹೆಚ್ಚಿಸುತ್ತಾರೆ.
ಪ್ರೇಕ್ಷಕರಿಗೆ ಇಷ್ಟವಾಗುವಂತಹ ವಿಭಿನ್ನ ಪಾತ್ರಗಳಲ್ಲಿ ನಟಿಸಲು ಅವರಿಗೆ ಇಷ್ಟವಂತೆ. ಒಂದೇ ರೀತಿಯ ಪಾತ್ರಕ್ಕೆ ಅಂಟಿಕೊಳ್ಳುವುದಿಲ್ಲ. ಯಾವುದೇ ರೀತಿಯ ಪಾತ್ರ ಬಂದರೂ ಅಭಿನಯಿಸಲು ಸಿದ್ಧ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ‘ಮೊದಲ ಬಾರಿಗೆಯೇ ಪೂರ್ಣಪ್ರಮಾಣದ ಚಿತ್ರದಲ್ಲಿ ನಟಿಸಿದ ಅನುಭವವಿದೆ. ಹಾಗಾಗಿ, ಯಾವುದೇ ಪಾತ್ರಗಳು ಸಿಕ್ಕಿದರೂ ನಟಿಸಲು ಸಿದ್ಧ’ ಎನ್ನುತ್ತಾರೆ.
ಒಡೆಯನ ಬಳಿಕ ಕನ್ನಡದಲ್ಲಿ ಅವರಿಗೆ ಮೂರು ಸಿನಿಮಾಗಳ ಅವಕಾಶ ಬಂದಿದೆ. ಅದು ಮಾತುಕತೆ ಹಂತದಲ್ಲಿದೆಯಂತೆ. ‘ಹೊಸ ಅವಕಾಶಗಳು ಬರುತ್ತಿರುವುದು ನಿಜ. ಆದರೆ, ಇನ್ನೂ ಅಂತಿಮಗೊಂಡಿಲ್ಲ. ಬೇರೆ ಭಾಷೆಯಿಂದಲೂ ಅವಕಾಶಗಳು ಬರುತ್ತಿವೆ’ ಎಂದು ಮಾಹಿತಿ ನೀಡುತ್ತಾರೆ.
ಮಾಡೆಲಿಂಗ್ ಅವರ ಇಷ್ಟದ ವೃತ್ತಿ. ಈಗ ಪೂರ್ಣಪ್ರಮಾಣದಲ್ಲಿ ನಟನೆಯಲ್ಲಿಯೇ ತೊಡಗಿಸಿಕೊಳ್ಳುವ ಇರಾದೆ ಅವರದು. ‘ಮಾಡೆಲಿಂಗ್ ನನ್ನ ಇಷ್ಟದ ವೃತ್ತಿ. ನಟನೆಗೆ ಅವಕಾಶ ಸಿಕ್ಕಿದಾಗ ಅದನ್ನು ಬಿಟ್ಟುಬಿಡುತ್ತೇನೆ ಎಂದು ಹೇಳುವುದಿಲ್ಲ. ಸಮಯ ಸಿಕ್ಕಿದಾಗಲೆಲ್ಲಾ ಮಾಡೆಲಿಂಗ್ ಮಾಡುತ್ತೇನೆ’ ಎನ್ನುತ್ತಾರೆ.
ನಟನೆ ಮತ್ತು ಮಾಡೆಲಿಂಗ್ ನಡುವೆ ಸಾಕಷ್ಟು ವ್ಯತ್ಯಾಸ ಇರುವುದು ಅವರಿಗೂ ಗೊತ್ತಿದೆ. ಬಣ್ಣದಲೋಕದಲ್ಲಿ ಗಟ್ಟಿಯಾಗಿ ತಳವೂರಲು ಕಠಿಣ ಪರಿಶ್ರಮಪಡಬೇಕು ಎಂಬ ತಿಳಿವಳಿಕೆಯೂ ಅವರಿಗಿದೆ. ‘ಮಾಡೆಲಿಂಗ್‌ನಲ್ಲಿ ಕೆಲಸದ ಅವಧಿ, ನಮ್ಮ ಪ್ರೆಸೆಂಟೇಶನ್ ಬೇರೆಯಾಗಿರುತ್ತದೆ. ಸಿನಿಮಾದಲ್ಲಿನ ಕೆಲಸವೇ ಭಿನ್ನವಾದುದು. ಇಲ್ಲಿ ನಮ್ಮನ್ನು ಗಮನಿಸುವ ಜನಸಮೂಹ ದೊಡ್ಡದು. ನಟನೆಯಿಂದ ಹಿಡಿದು ಎಲ್ಲವನ್ನೂ ಅಳೆದುತೂಗಿ ನೋಡುತ್ತಾರೆ. ಕ್ಯಾಮೆರಾದ ಮುಂದೆ ಪ್ರತಿಭೆಯ ಪ್ರದರ್ಶನಕ್ಕೆ ಸಾಕಷ್ಟು ಅವಕಾಶ ಸಿಗುತ್ತದೆ. ನಟನೆಯ ಕಲಿಕೆಗೂ ಅವಕಾಶ ಹೆಚ್ಚಿರುತ್ತದೆ’ ಎಂದು ವಿವರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.