ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಮತ್ತು ರಾಜಕಾರಣಿ ರಮ್ಯಾ ಎಂದರೆ ಜಗ್ಗೇಶ್‌ಗೆ ಬದ್ಧವೈರಿ ಎಂಬಂತೆಯೇ ಬಿಂಬಿತವಾಗಿತ್ತು. ನೀರ್‌ದೋಸೆ ಸಿನಿಮಾದಿಂದ ಹಿಡಿದು ರಾಜಕಾರಣದಲ್ಲಿಯೂ ಇಬ್ಬರು ಪರಸ್ಪರ ಕಿತ್ತಾಡಿಕೊಂಡದ್ದು ಈಗ ಹಳೇ ವಿಚಾರ. ಆದರೆ, ರಮ್ಯಾ ಬಗ್ಗೆ ಜಗ್ಗೇಶ್ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಚಿತ್ರರಂಗಕ್ಕೆ ಮರಳಿ ಬನ್ನಿ ಎಂದು ಕೇಳಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಜಗ್ಗೇಶ್, ರಮ್ಯಾ ಒಳ್ಳೆಯ ನಟಿ. ಆಕೆ ವೈಯಕ್ತಿಕವಾಗಿ ನನಗೆ ಬಲು ಇಷ್ಟ. ರಮ್ಯಾ ಮತ್ತೆ ಸಿನಿಮಾ ಮಾಡಲಿ ಎಂದು ಹಾರೈಸಿದ್ದಾರೆ.
ಜಗ್ಗೇಶ್ ಶೇರ್ ಮಾಡಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಡೆಸಿಕೊಡುತ್ತಿದ್ದ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದ ವಿಡಿಯೊದಲ್ಲಿ, ರಮ್ಯಾ ಹಾಟ್ ಸೀಟ್‍ನಲ್ಲಿ ಕುಳಿತಿರುತ್ತಾರೆ. ಯಾರನ್ನು ಇಮಿಟೇಟ್ ಮಾಡಬೇಕು ಎಂದು ಪುನೀತ್ ಕೇಳಿದ್ದಕ್ಕೆ ಜಗ್ಗೇಶ್ ಅವರನ್ನು ಇಮಿಟೇಟ್ ಮಾಡಿ ಎಂದು ಹೇಳುತ್ತಾರೆ. ಇದಕ್ಕೆ ಸಮ್ಮತಿ ಸೂಚಿಸಿದ ಪುನೀತ್, ಜಗ್ಗೇಶ್ ಅಭಿನಯದ ‘ತರ್ಲೆ ನನ್ ಮಗ’ ಸಿನಿಮಾದ ಡೈಲಾಗ್‍ಹೇಳಿ ಈ ಸಿನಿಮಾ ನನಗೆ ತುಂಬ ಇಷ್ಟ ಎನ್ನುತ್ತಾರೆ.
'ಕಲಾಬಂಧು ಪುನೀತ್ ರಾಜ್‌ಕುಮಾರ್ ಅವರು ನನ್ನ ಇಮಿಟೇಟ್ ಮಾಡಿದ ವಿಡಿಯೊ ಖುಷಿ ಕೊಟ್ಟಿತು. ಕೆಲ ವೈಯಕ್ತಿಕ ಸಿದ್ಧಾಂತಗಳಿಂದ ಮನಸ್ಸು ಒಡೆದ ಹಾಲಾಯಿತು. ವೈಯಕ್ತಿಕವಾಗಿ ನಾನು ಈಕೆಯನ್ನು ಬಹಳ ಇಷ್ಟಪಡುವೆ. ಈಕೆ ಒಳ್ಳೆ ನಟಿ. ಮತ್ತೆ ಈಕೆ ಸಿನಿಮಾಗಳಲ್ಲಿ ನಟಿಸಲಿ ಎಂದು ಹಾರೈಸುವೆ. come back ರಮ್ಯಾ... God bless... ಎಂದು ಬರೆದುಕೊಂಡಿದ್ದಾರೆ.
ಜಗ್ಗೇಶ್ ಅಭಿನಯದ ನೀರುದೋಸೆ ಚಿತ್ರದಲ್ಲಿ ನಟಿ ರಮ್ಯಾ ನಟಿಸಬೇಕಿತ್ತು. ಆದರೆ ಅವರು ಅದರಿಂದ ಹಿಂದೆ ಸರಿದಿದ್ದರು. ಇದಕ್ಕೆ ಕೋಪಗೊಂಡಿದ್ದ ಜಗ್ಗೇಶ್ ಅವರು ರಮ್ಯಾ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಕಿಡಿಕಾರಿದ್ದರು. ನಂತರ ರಮ್ಯಾ ಬದಲಿಗೆ ನಟಿ ಹರಿಪ್ರಿಯಾ ಚಿತ್ರದಲ್ಲಿ ನಟಿಸಿದ್ದರು.
ಅದಾದ ಬಳಿಕ ರಮ್ಯಾ ಉಪಚುನಾವಣೆಯಲ್ಲಿ ಮಂಡ್ಯ ಸಂಸದೆಯಾಗಿ ಆಯ್ಕೆಯಾಗಿ ಸಂಸತ್ತು ಪ್ರವೇಶಿಸಿದರು. ಆಗ ಚಿತ್ರರಂಗದಿಂದ ದೂರವೇ ಉಳಿದ ರಮ್ಯಾ, ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಿಜೆಪಿ ವಿರುದ್ಧ ರಮ್ಯಾ ಏನೇ ಹೇಳಿಕೆ ನೀಡಿದರೂ ಕೂಡ ಹೇಳಿ ಕೇಳಿ ಬಿಜೆಪಿ ಪಕ್ಷದಲ್ಲಿದ್ದ ಜಗ್ಗೇಶ್ ಅವರು ರಮ್ಯಾ ವಿರುದ್ಧ ಪದೇ ಪದೆ ಗರಂ ಆಗುತ್ತಲೇ ಇದ್ದರು.
ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ಆಗಿಯೇ ಮೆರೆದ ರಮ್ಯಾ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಕಳೆದ ಹಲವು ತಿಂಗಳುಗಳಿಂದ ಸುದ್ದಿಯೇ ಇಲ್ಲದಂತಿರುವ ರಮ್ಯಾ ಅವರು, ದಿಲ್ ಕಾ ರಾಜ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್‌ವುಡ್ ಪ್ರವೇಶಿಸಲಿದ್ದಾರೆ ಎನ್ನುವ ಮಾತುಗಳು ಅವರ ಅಭಿಮಾನಿಗಳ ಖುಷಿಗೆ ಕಾರಣವಾಗಿತ್ತು. ಆದರೆ ಅದು ಕೂಡ ಅಷ್ಟಕ್ಕೇ ನಿಂತಿದೆ. ಇದೀಗ ಸ್ವತಃ ಜಗ್ಗೇಶ್ ಅವರೇ ರಮ್ಯಾ ಅವರ ನಟನೆಯನ್ನು ಮೆಚ್ಚಿ, ಕಮ್ ಬ್ಯಾಕ್ ಪದ್ಮಾವತಿ ಎಂದು ಆಹ್ವಾನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.