ನಟ ಶ್ರೀಮುರಳಿ ಹಾಗೂ ನಟಿ ಆಶಿಕಾ ರಂಗನಾಥ್ ನಟಿಸಿರುವ ‘ಮದಗಜ’ ಚಿತ್ರ ಡಿ.3ಕ್ಕೆ ರಾಜ್ಯದಾದ್ಯಂತ ತೆರೆಕಾಣಲಿದೆ. ಗುರುವಾರ ಚಿತ್ರದ ಹೀರೊ ಇಂಟ್ರೊಡಕ್ಷನ್ ಹಾಡು ‘ಯುದ್ಧ ಸಾರಿದ ಚಂಡಮಾರುತ’ ಬಿಡುಗಡೆಯಾಗಿದ್ದು, ಇದನ್ನು ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರೀಮುರಳಿ ಅರ್ಪಿಸಿದ್ದಾರೆ.
‘ಅಪ್ಪು ಮಾಮನ ನೆನಪಿನಲ್ಲಿ, ಅವರಿಗೆ ಈ ವಿಡಿಯೊ ಹಾಡನ್ನು ಅರ್ಪಿಸುತ್ತೇನೆ. ಅಪ್ಪು ಮಾಮನನ್ನು ಮರೆಯಲು ಸಾಧ್ಯವಿಲ್ಲ. ಮಾಮ ಈ ಹಾಡನ್ನು ನೋಡಿದ್ದರು. ಅವರ ನೆನಪಿನಲ್ಲಿ ಈ ಹಾಡು ರಿಲೀಸ್ ಮಾಡಿದ್ದೇವೆ’ ಎಂದರು ಶ್ರೀಮುರಳಿ.
‘ಅ.28ರಂದು ನಾನು, ಮಾಮ ಒಟ್ಟಿಗೆ ಜಿಮ್‌ಗೆ ಹೋಗಿ ವರ್ಕ್‌ಔಟ್ ಮಾಡಿದ್ದೆವು. ಅವರ ಫಿಟ್ನೆಸ್ ಸೂಪರ್. ಹಲವು ವಿಚಾರಗಳನ್ನು ಮಾತನಾಡಿದೆವು. ಅಂದೇ ‘ಗಂಧದ ಗುಡಿ’ ಟೀಸರ್ ತೋರಿಸಿದ್ದರು. ನಾನು ‘ಮದಗಜ’ದ ಟೀಸರ್ ತೋರಿಸಿದೆ. ನಮಗೆ ಹೀರೊ ಪಟ್ಟ ಬರುವ ಮುನ್ನ ನಾವು ಸಹೋದರರಾಗಿದ್ದೆವು. ನಾವು ಜೊತೆಯಾಗಿದ್ದಾಗ ನಮ್ಮಂಥ ಸಹೋದರರು ಇದ್ದಾರ ಎನ್ನುವಂತೆ ಇದ್ದೆವು. ಮಾಮನನ್ನು ಮರೆಯಲು ಸಾಧ್ಯವಿಲ್ಲ’ ಎಂದು ನೆನಪಿಸಿಕೊಂಡರು ಶ್ರೀಮುರಳಿ.
‘ಮದಗಜ’ದಲ್ಲಿ ತುಂಬಾ ಇಷ್ಟಪಟ್ಟು ಮಾಡಿರುವ ಪಾತ್ರ ಮಾಡಿದ್ದೇನೆ. ಈ ಶೇಡ್‌ನಲ್ಲಿ ಸಿನಿಮಾ ನೋಡಿ ಅಥವಾ ಪಾತ್ರ ಮಾಡಿ ಬಹಳ ದಿನಗಳಾಗಿತ್ತು. ಹೀಗಾಗಿ ಈ ಪಾತ್ರಕ್ಕೆ ತುಂಬಾ ವರ್ಕ್ ಮಾಡಿದ್ದೇನೆ. ಕನ್ನಡ ಚಿತ್ರರಂಗದಿಂದ ಅದ್ಭುತವಾದ ಗುಣಮಟ್ಟದ ಸಿನಿಮಾ ನೀಡಿದ್ದೇವೆ’ ಎಂದರು.
ನಿರ್ದೇಶಕ ಎಸ್. ಮಹೇಶ್ ಕುಮಾರ್ ಮಾತನಾಡಿ, ‘ನ.1ಕ್ಕೆ ಅಪ್ಪು ಅವರು ಈ ಸಿನಿಮಾದ ಹಾಡನ್ನು ರಿಲೀಸ್ ಮಾಡಬೇಕಿತ್ತು. ಆದರೆ ಅವರು ಭೌತಿಕವಾಗಿ ನಮ್ಮ ಜೊತೆ ಈಗಿಲ್ಲ. ಅವರ ಆಶೀರ್ವಾದದೊಂದಿಗೆ ಮುಂದುವರಿಯುತ್ತಿದ್ದೇವೆ’ ಎಂದರು.
‘ಎಲ್ಲ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರ ಬಿಡುಗಡೆಗೆ ನಿರ್ಧರಿಸಿದ್ದೇವೆ. ಕರ್ನಾಟಕದಲ್ಲಿ ಡಿ.3ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು, ಉಳಿದ ಭಾಷೆಗಳಲ್ಲಿ ಅಲ್ಲಿನ ಚಿತ್ರ ಬಿಡುಗಡೆಯನ್ನು ನೋಡಿಕೊಂಡು ಬಿಡುಗಡೆ ಮಾಡುತ್ತೇವೆ. ತೆಲುಗು, ತಮಿಳಿನಲ್ಲಿ ಬಿಗ್‌ಬಜೆಟ್ ಚಿತ್ರಗಳ ಜೊತೆ ನಮಗೆ ಗುದ್ದಾಡಲು ಸಾಧ್ಯವಿಲ್ಲ’ ಎಂದರು ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ.
ತೆಲುಗಿನ ಖ್ಯಾತ ನಟ ಜಗಪತಿ ಬಾಬು ಖಳನಾಯಕನಾಗಿ, ಹಾಸ್ಯ ನಟರಾದ ರಂಗಾಯಣ ರಘು, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.