ADVERTISEMENT

ಇಲ್ಲಿಂದಲೇ ಹೋದವರು!

ಪದ್ಮನಾಭ ಭಟ್ಟ‌
Published 20 ಜೂನ್ 2019, 19:30 IST
Last Updated 20 ಜೂನ್ 2019, 19:30 IST
   

‘ಪರಭಾಷಾ ನಟಿಯರಿಗೆ ಮಣೆ ಹಾಕುವುದು’ – ಇದೊಂದು ಈಡಿಯಂ ತೀರಾ ಇತ್ತೀಚೆಗಿನವರೆಗೂ ಗಾಂಧಿನಗರದಲ್ಲಿ ಬಳಕೆಯಲ್ಲಿತ್ತು. ಇಲ್ಲಿನ ನಟಿಯರು ಇದನ್ನುಆರೋಪದ ಧ್ವನಿಯಲ್ಲಿ ಬಳಸಿದರೆ, ಬಹಳ ನಿರ್ದೇಶಕ–ನಿರ್ಮಾಪಕರು ಇದನ್ನು ಹೆಮ್ಮೆಯೆಂಬಂತೆ ಸ್ವೀಕರಿಸುತ್ತಿದ್ದರು.

ನೆರೆಭಾಷೆಯಿಂದ ಬಂದು ಇಲ್ಲಿ ಕನ್ನಡ ಕಲಿತು ಕನ್ನಡತಿಯರೇ ಆಗಿ ಹಲವು ಅನನ್ಯ ಪಾತ್ರಗಳಿಗೆ ಜೀವತುಂಬಿದ ನಟೀಮಣಿಯರದು ಬೇರೆಯೇ ಪರಂಪರೆ. ಲಕ್ಷ್ಮೀ, ಸರಿತಾ, ಸುಮಲತಾ ಇವರೆಲ್ಲ ಈ ಪರಂಪರೆಗೆ ಸೇರಿದವರು.

ಆದರೆ ಅವರ ನಂತರ ಕನ್ನಡ ಚಿತ್ರರಂಗದಲ್ಲಿ ಬರಿಯ ಬೆಡಗಿನ ಕಾರಣಕ್ಕಾಗಿ ಪರಭಾಷಾ ನಟಿಯರನ್ನು ಕರೆತರುವ ಹೊಸ ಟ್ರೆಂಡ್‌ ಶುರುವಾಯ್ತು. ಅವರದು ‘ಬಂದು ಕುಣಿದು ಹೋಗುವ’ ಕೆಲಸ. ನಾಯಕಪ್ರಧಾನ ಸಿನಿಮಾದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪಾತ್ರಗಳಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಳ್ಳುತ್ತಾರೆ ಎಂಬುದೂ ಈ ಆಮದು ಕಾರ್ಯಾಚರಣೆಗೆ ಮುಖ್ಯ ಕಾರಣವಾಗಿತ್ತು. ಹೀಗೆ ಬಂದು ಹೋದವರಲ್ಲಿ ಹೆಚ್ಚಿನವರು ಕನ್ನಡ ಸಿನಿರಸಿಕರ ಮನಸಲ್ಲಿ ಜಾಗ ಪಡೆದುಕೊಳ್ಳಲಿಲ್ಲ. ಈಗಲೂ ಈ ‘ಮಣೆ ಹಾಕುವ’ ಟ್ರೆಂಡ್ ಪೂರ್ತಿ ಮುಗಿದಿಲ್ಲ ಎಂಬುದಕ್ಕೆ ಕಳೆದ ವರ್ಷವಷ್ಟೇ ಬಿಡುಗಡೆಯಾದ ಪ್ರೇಮ್‌ ನಿರ್ದೇಶನದ ‘ದಿ ವಿಲನ್‌’ ಸಿನಿಮಾದಲ್ಲಿ ನಿರ್ಭಾವುಕವಾಗಿ ಕುಣಿದು ಹೋದ ಆ್ಯಮಿ ಜಾಕ್ಸನ್‌ ಅವರೇ ಪುರಾವೆ.

ADVERTISEMENT

ಆದರೆ ಒಟ್ಟಾರೆ ಚಿತ್ರರಂಗದ ಕ್ಯಾನ್ವಾಸ್ ಗಮನಿಸಿದರೆ ಕನ್ನಡದ ಮಣ್ಣಿನಲ್ಲಿ ಬೆಳೆದ ಪ್ರತಿಭೆಗಳೇ ಪಾರಮ್ಯ ವಹಿಸಿರುವುದು ಕಾಣುತ್ತದೆ. ಇಷ್ಟೇ ಅಲ್ಲ; ಇಲ್ಲಿ ಹಾಕುತ್ತಿದ್ದ ಮಣೆ ಸ್ಥಾನಪಲ್ಲಟ ಮಾಡಿರುವುದೂ ಸೂಕ್ಷ್ಮವಾಗಿ ಗಮನಿಸಿದರೆ ಗೋಚರವಾಗುತ್ತದೆ. ಅಂದರೆ ನೆರೆಯ ಭಾಷೆಗಳಲ್ಲಿ ನಮ್ಮ ನೆಲದ ನಟಿಯರು ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಕೊಡಗಿನ ಹುಡುಗಿ ತಲೆಮೇಲೆ ತೆಲುಗು ಕಿರೀಟ

2016ರಲ್ಲಿ ‘ಕಿರಿಕ್‌ ಪಾರ್ಟಿ’ ಚಿತ್ರ ಬಿಡುಗಡೆಯಾಗುವ ಮುಂಚೆಯೇ ‘ಕರ್ನಾಟಕ ಕ್ರಶ್‌’ ಎಂದು ಕರೆಸಿಕೊಂಡು ಹರೆಯದ ಹುಡುಗರ ಹೃದಯವನ್ನು ವಿರಹರಶ್ಮಿಯಿಂದ ದಾರುಣವಾಗಿ ಸುಟ್ಟವರು ರಶ್ಮಿಕಾ ಮಂದಣ್ಣ. ಆ ಚಿತ್ರದಲ್ಲಿ ಕಾಲೇಜ್‌ ಗರ್ಲ್‌ ಆಗಿ ಬಟ್ಟಲುಗಣ್ಣಿನಲ್ಲೇ ಪಡ್ಡೆಗಳಿಗೆ ಹಸಿಬಿಸಿ ಕನಸುಗಳನ್ನು ಮೊಗೆಮೊಗೆದುಕೊಟ್ಟ ಅವರು ನಂತರ ‘ಅಂಜನೀಪುತ್ರ’ ಮತ್ತು ‘ಚಮಕ್‌’ ಸಿನಿಮಾದಲ್ಲಿ ನಟಿಸಿದರು. ಅಷ್ಟರಲ್ಲಿಯೇ ವಿರಾಜಪೇಟೆಯ ಈ ಗೊಂಬೆಯ ಮೇಲೆ ತೆಲುಗು ಚಿತ್ರರಂಗದ ಕಣ್ಣುಬಿದ್ದಿತ್ತು. ‘ಚಲೋ’ ಎಂಬ ಸಿನಿಮಾ ಮೂಲಕ ತೆಲುಗಿನ ಚಿತ್ರಮಂದಿರದೊಳಕ್ಕೆ ಅಡಿಯಿಟ್ಟ ರಶ್ಮಿಕಾ, ವಿಜಯ ದೇವರಕೊಂಡ ಅವರ ಜೊತೆ ನಟಿಸಿದ ‘ಗೀತಾ ಗೋವಿಂದಂ’ ಸಿನಿಮಾ ಮೂಲಕ ಅಲ್ಲಿನ ಚಿತ್ರರಸಿಕರ ಮನಸೊಳಗೂ ಬೆಚ್ಚನೆಯ ಅಗ್ಗಷ್ಟಿಕೆ ಹೊತ್ತಿಸಿದರು.

ಈ ನಡುವೆ ಕನ್ನಡದ ‘ಯಜಮಾನ’ ಚಿತ್ರದಲ್ಲಿ ನಟಿಸಿದರು. ಧ್ರುವ ಸರ್ಜಾ ಅವರ ಹೊಸ ಸಿನಿಮಾ ‘ಪೊಗರು’ಗೂ ಅವರೇ ನಾಯಕಿ. ಆದರೆ ರಶ್ಮಿಕಾ ಮನಸ್ಸು ನೆಟ್ಟಿರುವುದು ಮಾತ್ರ ತೆಲುಗಿನಲ್ಲಿಯೇ ಎಂಬುದು ಅವರು ನಟಿಸಿರುವ, ಒಪ್ಪಿಕೊಂಡಿರುವ ಸಿನಿಮಾಗಳ ಪಟ್ಟಿ ನೋಡಿದರೆ ಗೊತ್ತಾಗುತ್ತದೆ. ದೇವದಾಸ್‌, ಡಿಯರ್‌ ಕಾಮ್ರೇಡ್‌, ಭೀಷ್ಮ, ಸರಿಲೇನು ನೀಕೆವ್ವರು ಹೀಗೆ ಪಟ್ಟಿಯಲ್ಲಿರುವ ಸಿನಿಮಾಗಳಲ್ಲೆಲ್ಲ ರಶ್ಮಿಕಾ ಸೂಪರ್‌ಸ್ಟಾರ್‌ಗಳ ಜೊತೆಗೇ ನಟಿಸುತ್ತಿರುವುದು ಅವರ ಭವಿಷ್ಯದ ಉಜ್ವಲತೆಯನ್ನೂ ಸೂಚಿಸುವಂತಿದೆ.

ಶ್ರದ್ಧಾ ಗಡಿ ವಿಸ್ತರಣೆ

ಶ್ರದ್ಧಾ ಶ್ರೀನಾಥ್‌ ಹುಟ್ಟಿದ್ದು ಜಮ್ಮುಕಾಶ್ಮೀರದಲ್ಲಿ. ತಂದೆಯ ವೃತ್ತಿನಿಮಿತ್ತ ಅಸ್ಸಾಂ, ತೆಲಂಗಾಣ, ಉತ್ತಾಖಂಡ, ಮಧ್ಯಪ್ರದೇಶ ಹೀಗೆ ಹಲವು ರಾಜ್ಯಗಳ ನೀರು ಕುಡಿಯುತ್ತಲೇ ಬೆಳದರೂ ಅವರೊಳಗಿನ ಸೃಜನಶೀಲ ಕಲಾವಿದೆ ಚಿಗುರಿಕೊಂಡಿದ್ದು ಬೆಂಗಳೂರಿನಲ್ಲಿ. ಈಗಲೂತಮ್ಮನ್ನು ಕನ್ನಡತಿ ಎಂದೇ ಗುರ್ತಿಸಿಕೊಳ್ಳಲು ಇಷ್ಟಪಡುವ ಅವರು ನಟಿಯಾಗಿ ಪ್ರಸಿದ್ಧಿಗೆ ಬಂದಿದ್ದು ಪವನ್‌ಕುಮಾರ್ ಅವರ ‘ಯೂ ಟರ್ನ್‌’ ಸಿನಿಮಾದಲ್ಲಿ.‌ಈ ಚಿತ್ರದ ಯಶಸ್ಸು ಅವರಿಗೆ ಚಂದನವನದಲ್ಲೇನೂ ಅವಕಾಶಗಳ ಸುರಿಮಳೆಗರೆಯಲಿಲ್ಲ. ಆದರೆ ಪಕ್ಕದ ತಮಿಳು ಚಿತ್ರರಂಗದ ಗಮನಸೆಳೆಯಲು ಕಾರಣವಾಯ್ತು. ನಂತರ ‘ಉರ್ವಿ’, ‘ಮುಂಗಾರುಮಳೆ 2’ ಸಿನಿಮಾಗಳಲ್ಲಿ ನಟಿಸಿದರೂ ಅವರಿಗೆ ಕನ್ನಡದಲ್ಲಿ ಮತ್ತೊಂದು ಗೆಲುವು ಸಿಕ್ಕಿದ್ದು ‘ಆಪರೇಷನ್‌ ಅಲವೇಲಮ್ಮ’ದ ಮೂಲಕ. ಆದರೆ ಇದೇ ಸಮಯದಲ್ಲಿ ತಮಿಳಿನಲ್ಲಿ ಅವರು ‘ಕಾತ್ರು ವೇಲಿಯಿದೈ’ ಮತ್ತು ‘ಇವಾನ್‌ ತಂದಿರನ್‌’ ಸಿನಿಮಾಗಳಲ್ಲಿ ನಟಿಸಿಬಂದಿದ್ದರು.

‘ವಿಕ್ರಮ್‌ ವೇದ’ ಚಿತ್ರದಲ್ಲಿ ಮಾಧವನ್‌ ಮತ್ತು ವಿಜಯ್‌ ಸೇತುಪತಿ ನಟನೆಯ ಜುಗಲ್ಬಂದಿ ನಡುವೆಯೇ ಮಿಂಚಿದ ಶ್ರದ್ಧಾ ವೃತ್ತಿಜೀವನವೂ ಅಲ್ಲಿಯೇ ಯೂ ಟರ್ನ್‌ ತೆಗೆದುಕೊಂಡಿತು. ಈಗ ತಮಿಳಿನಲ್ಲಿ ಅವರಿಗೆ ಕೈತುಂಬ ಅವಕಾಶಗಳು. ಕನ್ನಡದಲ್ಲಿ ನಟಿಸಿದ ‘ರುಸ್ತುಂ’ ಮತ್ತು ‘ಗೋಧ್ರಾ’ ಬಿಡುಗಡೆಗೆ ಸಜ್ಜಾಗಿವೆ. ಈಗಾಗಲೇ ಹಿಂದಿಯ ‘ಮಿಲನ್‌ ಟಾಕೀಜ್‌’ನಲ್ಲಿ ನಟಿಸಿ ತಮ್ಮ ಅಭಿನಯವ್ಯಾಪ್ತಿಯ ಗಡಿಯನ್ನು ಬಾಲಿವುಡ್‌ವರೆಗೂ ವಿಸ್ತರಿಸಿಕೊಂಡಿದ್ದಾರೆ. ತೆಲುಗಿನಲ್ಲಿ ‘ಜೆರ್ಸಿ’ ಚಿತ್ರದ ಮೂಲಕ ಒಳ್ಳೆಯ ಎಂಟ್ರಿಯನ್ನೇ ನೀಡಿದ್ದಾರೆ. ‘ಪಿಂಕ್‌’ ಚಿತ್ರದಲ್ಲಿ ತಾಪ್ಸಿ ಪನ್ನು ಅಭಿನಯಿಸಿದ್ದ ಪಾತ್ರವನ್ನು ತಮಿಳು ರೀಮೇಕ್‌ನಲ್ಲಿ ಶ್ರದ್ಧಾ ಮಾಡುತ್ತಿದ್ದಾರೆ. ತಮಿಳಿನ ಸೂಪರ್‌ಸ್ಟಾರ್‌ ವಿಶಾಲ್ ಜೊತೆ ಇನ್ನೊಂದು ಸಿನಿಮಾಗೂ ನಾಯಕಿಯಾಗಿ ಸಹಿ ಹಾಕಿದ್ದಾರೆ.

ನಭಾ ಹೊಸ ಪ್ರಭೆ

ನಭಾ ನಟೇಶ್ ಎಂದಾಕ್ಷಣ ಎಲ್ಲರ ಮನಸಿಗೆ ಬರುವ ಸಿನಿಮಾ ಹೆಸರು ‘ವಜ್ರಕಾಯ’. ಮೊದಲ ಸಿನಿಮಾದಲ್ಲಿಯೇ ಶಿವಣ್ಣನ ಜೊತೆ ತೆರೆ ಹಂಚಿಕೊಂಡ ಈ ಬೆಡಗಿಗೆ ಕನ್ನಡದ ಜೊತೆಗೆ ತೆಲುಗು ಚಿತ್ರಗಳೂ ಕೈಬೀಸಿ ಕರೆಯುತ್ತಿವೆ. ಮಹೇಶ್‌ ಬಾಬು ಸಂಬಂಧಿ ಸುಧೀರ್ ಬಾಬು ನಾಯಕನಾಗಿ ಲಾಂಚ್ ಆದ ‘ನನ್ನ ದೋಚು ಕುಂದುವಟೆ’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಅವರು ಪೂರಿ ಜಗನ್ನಾಥ್ ನಿರ್ದೇಶನದ ‘ಸಾಮ್ರಾಟ್ ಶಂಕರ್’ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಜೊತೆಗೆ ‘ಅಧುಗೋ’ ಎಂಬ ವಿಶಿಷ್ಟ ಕಥಾಹಂದರ ಚಿತ್ರದಲ್ಲಿಯೂ ಅವರು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಇದರ ಜೊತೆಗೇ ರವಿತೇಜ ನಟನೆಯ ಒಂದು ಸಿನಿಮಾಗೂ ನಭಾ ನಟೇಶ್‌ ನಾಯಕಿಯಾಗಿ ಆಯ್ಕೆಯಾಗಿರುವ ಸುದ್ದಿಯಿದೆ.

ಪ್ರಣೀತಾ ಪ್ರಣತಿ

ಪ್ರಣೀತಾ ಸುಭಾಷ್‌ ನಾಯಕಿಯಾಗಿ ಪರಿಚಿತರಾಗಿದ್ದು ತೆಲುಗಿನ ಪೊಕರಿ ಚಿತ್ರದ ಕನ್ನಡ ಅವತರಣಿಕೆ ‘ಪೋರ್ಕಿ’ ಮೂಲಕ. ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಅವರ ಜೊತೆ ತೆರೆಯ ಮೇಲೆ ಮೋಡಿ ಮಾಡಿದ ಪ್ರಣೀತಾಗೆ ನಂತರ ಕನ್ನಡದಲ್ಲಿ ಸಾಕಷ್ಟು ಅವಕಾಶಗಳು ಬಂದವು. ಆದರೆ ಅವ್ಯಾವವನ್ನೂ ಒಪ್ಪಿಕೊಳ್ಳದೆ ಚ್ಯೂಸಿಯಾದ ಅವರು ತೆಲುಗಿನ ‘ಭಾವ’ ಚಿತ್ರಕ್ಕೆ ಸಿದ್ಧಾರ್ಥ್‌ ಜೊತೆ ನಾಯಕಿಯಾಗಿ ನಟಿಸಲು ಸಹಿ ಹಾಕಿದರು. ಅದೇ ವರ್ಷ ‘ಉದಯನ್‌’ ಚಿತ್ರದ ಮೂಲಕ ತಮಿಳಿಗೂ ಲಗ್ಗೆಯಿಟ್ಟರು. ಹೀಗೆ ವೃತ್ತಿಜೀವನದ ಆರಂಭದಲ್ಲಿಯೇ ಮೂರು ಚಿತ್ರರಂಗಗಳ ಮೆಚ್ಚುಗೆಯ ರುಚಿಯುಂಡ ಪ್ರಣೀತಾ ಇದುವರೆಗೂ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ನಿರಂತರವಾಗಿ ನಟಿಸುತ್ತಲೇ ಬಂದಿದ್ದಾರೆ. ಅತ್ತಾರಿಂಟಿಕಿ ದಾರೇದಿ, ಮಸ್ಸೂ ಎಂಗಿರಾ ಮಸಿಲಾಮಿನಿ, ಏನಕ್ಕು ವೈಥಾ ಅದಿಮೈಗಲ್‌,ಸಾಗುನಿ, ಪಾಂಡವುಲು ಪಾಂಡವುಲು ತುಮ್ಮೇದ, ಮಾಸ್, ಬ್ರಹ್ಮೋತ್ಸವಂ ಹೀಗೆ ಪ್ರಣೀತಾ ನಟಿಸಿದ ಸಿನಿಮಾಳ ಪಟ್ಟಿ ನೋಡಿದರೆ ಸಾಕು; ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅವರಿಗಿರುವ ಬೇಡಿಕೆ ಗೊತ್ತಾಗುತ್ತದೆ.

ಸೀತೆಯಾಗಿ ತೆಲುಗಿಗೆ ಹೋದ ಸುಕೃತಾ

‘ಜಟ್ಟ’ ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಸುಕೃತಾ ವಾಗ್ಲೆ ಅವರಿಗೆ ಹುಬ್ಬೇರಿಸುವಂಥ ಕಮರ್ಷಿಯಲ್‌ ಗೆಲುವು ಸಿಗಲಿಲ್ಲ. ‘ಕಿರಗೂರಿನ ಗಯ್ಯಾಳಿಗಳು’, ‘ದಯವಿಟ್ಟು ಗಮನಿಸಿ’ಯಂಥ ಸಿನಿಮಾಗಳಲ್ಲಿ ಕೆಲಕಾಲ ನೆನಪಲ್ಲಿ ಉಳಿವಂತ ನಟನೆ ನೀಡಿದ ಈ ಹುಡುಗಿ ಸದ್ದಿಲ್ಲದೇ ತೆಲುಗಿನಲ್ಲಿ ಒಂದು ಚಿತ್ರ ಮಾಡಿ ಮುಗಿಸಿದ್ದಾರೆ. ‘ರಾಮ ಚಕ್ಕನಿ ಸೀತಾ’ ಎಂಬುದು ಆ ಸಿನಿಮಾ ಹೆಸರು. ಈಗಾಗಲೇ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಇನ್ನಷ್ಟು ಅವಕಾಶಗಳೂ ಅವರಿಗೆ ಬರುತ್ತಿವೆಯಂತೆ.

ಇವಿಷ್ಟು ಪ್ರಾತಿನಿಧಿಕ ಹೆಸರುಗಳಷ್ಟೆ. ಇವುಗಳನ್ನು ಹೊರತುಪಡಿಸಿಯೂ ಕನ್ನಡದ ಶ್ರುತಿ ಹರಿಹರನ್, ಸಂಯುಕ್ತಾ ಹೊರನಾಡು ಕೂಡ ನೆರೆಭಾಷೆಯ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಮಾನ್ವಿತಾ ಕಾಮತ್‌ ಅವರಿಗೆ ರಾಮ್‌ಗೋಪಾಲ್‌ ವರ್ಮ ಅಡ್ವಾನ್ಸ್‌ ಕೊಟ್ಟು ಹೋಗಿರುವುದು ಸುದ್ದಿಯಾಗಿತ್ತು. ಯಜ್ಞಾ ಶೆಟ್ಟಿ ಎನ್‌ಟಿಆರ್‌ ಪತ್ನಿ ಲಕ್ಷ್ಮಿಯಾಗಿ ಮಿಂಚಿದ್ದಾರೆ. ಈ ಪಟ್ಟಿಗೆ ಇನ್ನೂ ಹಲವು ನಟಿಯರ ಹೆಸರುಗಳನ್ನು ಸೇರಿಸಬಹುದು. ಒಟ್ಟಾರೆ ಕನ್ನಡದ ನಟೀಮಣಿಯರಿಗೆ ನೆರೆಭಾಷೆಯವರು ಮಣೆ ಹಾಕಲು ಉತ್ಸುಕರಾಗಿರುವುದಂತೂ ಸತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.