ADVERTISEMENT

ಮತ್ತೆರಡು ಹೊಸ ಸ್ಕ್ರಿಪ್ಟ್‌ ಹೊಸೆದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 7:25 IST
Last Updated 1 ಜುಲೈ 2020, 7:25 IST
ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು –ಪ್ರಜಾವಾಣಿ ಚಿತ್ರ
ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು –ಪ್ರಜಾವಾಣಿ ಚಿತ್ರ   

ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರು ಸದ್ಯ ದರ್ಶನ್‌ ಅಭಿನಯದ ‘ರಾಜವೀರ ಮದಕರಿ ನಾಯಕ’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.ಕೊರೊನಾ ಲಾಕ್‌ಡೌನ್‌ನಿಂದಾಗಿ ಸಿಕ್ಕ ವಿರಾಮವನ್ನು ಅವರು ತುಸು ಹೆಚ್ಚೇ ಸದುಪಯೋಗಪಡಿಸಿಕೊಂಡಿರುವಂತಿದೆ.

ದರ್ಶನ್‌ ಜತೆಗೆ ಮತ್ತೊಂದು ಹೊಸ ಸಿನಿಮಾ ಮಾಡುವ ಯೋಜನೆ ಕುರಿತು ಅವರು ಇತ್ತೀಚೆಗಷ್ಟೇ ಮಾಹಿತಿ ಹಂಚಿಕೊಂಡಿದ್ದರು. ಅವರ ಮುಂದಿನ ಸಿನಿಮಾ ವೈಲ್ಡ್‌ಲೈಫ್‌ ಕುರಿತದ್ದಾಗಿರಲಿದೆ. ‘ಸಿಂಹದ ಮರಿ ಸೈನ್ಯ’ ಮತ್ತು ‘ನಾಗರಹೊಳೆ’ ಚಿತ್ರಗಳನ್ನು ನೆನಪಿಸುವಂತಹ ಚಿತ್ರ ಮಾಡುವ ಹಂಬಲವನ್ನು ಅವರು ವ್ಯಕ್ತಪಡಿಸಿದ್ದರು.ಮತ್ತೊಂದು ಹೊಸ ಸಂಗತಿ ಏನೆಂದರೆ, ಮತ್ತೆರಡುಐತಿಹಾಸಿಕ ಚಿತ್ರಗಳನ್ನು ಮಾಡುವ ಗುರಿ ಇಟ್ಟುಕೊಂಡು ಬಾಬು ಸ್ಕ್ರಿಪ್ಟ್‌ ಕೂಡ ಸಿದ್ಧಪಡಿಸುತ್ತಿದ್ದಾರಂತೆ.

ಸುರಪುರದ ವೆಂಕಟಪ್ಪ ನಾಯಕನ ಜೀವನಗಾಥೆಯನ್ನು ತೆರೆಯ ಮೇಲೆ ತರುವ ಯೋಜನೆಗೂ ಬಾಬು ಸದ್ದಿಲ್ಲದೇ ಕೈಹಾಕಿದ್ದಾರೆ. ಜತೆಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ಒಂದು ಐತಿಹಾಸಿಕ ನಾಟಕವನ್ನು ಚಿತ್ರ ಮಾಡುವ ತಯಾರಿಯನ್ನೂ ಅವರು ಆರಂಭಿಸಿದ್ದಾರೆ.

ADVERTISEMENT

ಸುರಪುರದ ವೆಂಕಟಪ್ಪ ನಾಯಕನ ಜೀವನಗಾಥೆ ತೆರೆ ಮೇಲೆ ತರುವ ಆಲೋಚನೆ ಬಂದದ್ದು ಕಳೆದ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ಒಂದು ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದಾಗಲಂತೆ.

‘ಸುರಪುರಕ್ಕೆ ಸ್ನೇಹಿತರೊಟ್ಟಿಗೆಭೇಟಿ ನೀಡಿ, ಒಂದು ದಿನ ವಾಸ್ತವ್ಯ ಕೂಡ ಮಾಡಿ ಸ್ಥಳ ಮಾಹಿತಿ ಪಡೆದೆ. ಮರಾಠರು ದುರ್ಬಲಗೊಂಡಾಗ ದಕ್ಷಿಣ ಭಾರತದಲ್ಲಿ ನಾಯಕತ್ವ ವಹಿಸುವ ಅವಕಾಶ ವೆಂಕಟಪ್ಪ ನಾಯಕನಿಗೆ ಸಿಗುತ್ತದೆ. ವೆಂಕಟಪ್ಪನ ಕ್ರಾಂತಿಕಾರಿ ನಾಯಕತ್ವ ಮತ್ತು ಆತ ಅನುಸರಿಸುತ್ತಿದ್ದ ವಿಶೇಷ ಗೆರಿಲ್ಲಾ ಯುದ್ಧತಂತ್ರ ತುಂಬಾ ಕುತೂಹಲಕಾರಿ ಹಾಗೂ ರೋಮಾಂಚನಕಾರಿಯೂ ಆಗಿದೆ. ಸ್ಕ್ರಿಪ್ಟ್‌ ಕೆಲಸವನ್ನು ತುಂಬಾ ಗಂಭೀರವಾಗಿ ಮಾಡುತ್ತಿದ್ದೇನೆ’ ಎನ್ನುವ ಮಾತು ಸೇರಿಸಿದರು ಬಾಬು.

‘ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ಒಂದು ಐತಿಹಾಸಿಕ ನಾಟಕ ತುಂಬಾ ಇಷ್ಟವಾಗಿದೆ. ಕೃತಿಕಾರರ ವಾರಸುದಾರರಿಂದ ಅನುಮತಿ ಪಡೆಯುವ ಪ್ರಯತ್ನ ನಡೆದಿದೆ.ಈ ಸ್ಕ್ರಿಪ್ಟ್‌ ಅನ್ನು ಒಮ್ಮೆ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಹೇಳಿದ್ದೇನೆ. ಅವರು ಸ್ಕ್ರಿಪ್ಟ್‌ ಮೆಚ್ಚಿದ್ದಾರೆ. ಆದರೆ, ಶಿವರಾಜ್‌ಕುಮಾರ್‌ ಅವರಿಗೆ ‘ಕುಮಾರ ರಾಮ’ ಚಿತ್ರ ಅಷ್ಟೊಂದು ನಿರೀಕ್ಷಿತ ಯಶಸ್ಸು ನೀಡದ ಕಾರಣಕ್ಕೆ ಪುನೀತ್‌ ರಾಜ್‌ಕುಮಾರ್‌ ಅವರಲ್ಲಿಐತಿಹಾಸಿಕ ಚಿತ್ರಗಳಲ್ಲಿ ನಟಿಸಲು ಹಿಂಜರಿಕೆ ಇದ್ದಂತಿದೆ. ನಮ್ಮ ಕನ್ನಡದ ಸ್ಟಾರ್‌ ನಟರು ಮನಸು ಮಾಡಿದರೆ ಈ ಚಿತ್ರವನ್ನುತೆಲುಗಿನ ‘ಮಗಧೀರ’ ಮತ್ತು ಹಾಲಿವುಡ್‌ನ ‘ಗ್ಲಾಡಿಯೇಟರ್‌’ ಸಿನಿಮಾ ಮಟ್ಟಕ್ಕೆ ಮಾಡಲು ಸಾಧ್ಯವಿದೆ’ ಎನ್ನುತ್ತಾರೆ ಬಾಬು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.