ADVERTISEMENT

ಮತ್ತೆ ಸಿನಿಮೋತ್ಸವ; ಫೆಬ್ರುವರಿ ಎರಡನೇ ವಾರದಿಂದ ಸಾಲು ಸಾಲು ಸಿನಿಮಾಗಳ ಹಬ್ಬ

ಅಭಿಲಾಷ್ ಪಿ.ಎಸ್‌.
Published 3 ಫೆಬ್ರುವರಿ 2022, 20:30 IST
Last Updated 3 ಫೆಬ್ರುವರಿ 2022, 20:30 IST
ರಾಣಾ ಹಾಗೂ ರೀಷ್ಮಾ
ರಾಣಾ ಹಾಗೂ ರೀಷ್ಮಾ   

ಏರಿಕೆಯಾಗುತ್ತಿದ್ದ ಕೋವಿಡ್‌ ಪ್ರಕರಣಗಳ ನಿಯಂತ್ರಣಕ್ಕಾಗಿ ಹೇರಿದ್ದ ನಿರ್ಬಂಧಗಳನ್ನು ಸರ್ಕಾರ ಕ್ರಮೇಣವಾಗಿ ಸಡಿಲಗೊಳಿಸುತ್ತಿದೆ. ಪ್ರಸ್ತುತ ಚಿತ್ರಮಂದಿರಗಳಲ್ಲಿ, ಮಲ್ಟಿಪ್ಲೆಕ್ಸ್‌ಗಳಲ್ಲಿರುವ ಪ್ರೇಕ್ಷಕರ ಸಂಖ್ಯೆ ನಿರ್ಬಂಧವನ್ನೂ ತಜ್ಞರ ಸಲಹೆ ಪಡೆದು ತೆರವುಗೊಳಿಸುವ ಭರವಸೆಯನ್ನೂ ಚಿತ್ರರಂಗಕ್ಕೆ ಸರ್ಕಾರ ನೀಡಿದೆ. ಶೀಘ್ರದಲ್ಲೇ ಈ ಆದೇಶವೂ ಹೊರಬೀಳುವ ನಿರೀಕ್ಷೆಯಲ್ಲಿ ಚಿತ್ರರಂಗವಿದೆ. ಈ ಹಿನ್ನೆಲೆಯಲ್ಲಿ ಸಾಲು ಸಾಲು ಚಿತ್ರಗಳ ಬಿಡುಗಡೆ ದಿನಾಂಕ ಘೋಷಣೆಯಾಗಿವೆ. ಸುಮಾರು ಒಂದು ತಿಂಗಳ ಬಳಿಕ ಚಿತ್ರಮಂದಿರಗಳಲ್ಲಿ ಮತ್ತೆ ಸಿನಿಮೋತ್ಸವಕ್ಕೆ ಸಿದ್ಧತೆ ಆರಂಭವಾಗಿದೆ.

ಫೆ.11ಕ್ಕೆ ಮೂರು ಸಿನಿಮಾ:
ಡಾರ್ಲಿಂಗ್‌ ಕೃಷ್ಣ, ರಾಚೆಲ್‌ ಡೇವಿಡ್‌, ಮಿಲನ ನಾಗರಾಜ್‌ ಅಭಿನಯದ ಬಹುನಿರೀಕ್ಷಿತ ‘ಲವ್‌ ಮಾಕ್ಟೇಲ್‌–2’ ಈಗಾಗಲೇ ಘೋಷಣೆಯಾದಂತೆ ಫೆ.11ಕ್ಕೇ ಬಿಡುಗಡೆಯಾಗಲಿದೆ. ಈ ಕುರಿತು ಗುರುವಾರ ಟ್ವಿಟರ್‌ನಲ್ಲಿ ಡಾರ್ಲಿಂಗ್‌ ಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಡಾರ್ಲಿಂಗ್‌ ಕೃಷ್ಣ ಹಾಗೂ ಅವರ ಪತ್ನಿ, ನಟಿ ಮಿಲನಾ ನಾಗರಾಜ್‌ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಂಗಳವಾರ ಎರಡನೇ ಭಾಗದ ಟ್ರೇಲರ್‌ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ‘ನಿಧಿ’ಯನ್ನು ಕಳೆದುಕೊಂಡ ‘ಆದಿ’ಯ ಕಥೆ ಎರಡನೇ ಭಾಗದಲ್ಲಿ ಸಾಗುತ್ತದೆ. ‘ಎರಡನೇ ಭಾಗದಲ್ಲಿ ನಿಧಿ ಪಾತ್ರ ಇರುತ್ತದೆ. ಆದಿ ನೆನಪುಗಳಲ್ಲಿ ನಿಧಿ ಜೀವಂತವಾಗಿರುತ್ತಾಳೆ. ಮೊದಲ ಭಾಗದಲ್ಲಿ ಹೇಳದೇ ಇರುವ ವಿಷಯಗಳು, ಪಾತ್ರಗಳು ಎರಡನೇ ಭಾಗದಲ್ಲಿ ಬರುತ್ತವೆ. ಪೋಸ್ಟರ್‌ ಅಲ್ಲಿ ಇರೋ ಹುಡುಗಿ ಯಾರು ಎನ್ನುವುದೇ ಸಸ್ಪೆನ್ಸ್‌’ ಎಂದರು ಡಾರ್ಲಿಂಗ್‌ ಕೃಷ್ಣ.

ADVERTISEMENT

ಇದೇ ಮೊದಲ ಬಾರಿಗೆ ನಟ ಅಚ್ಯುತ್ ಕುಮಾರ್ ನಾಯಕರಾಗಿ ನಟಿಸಿರುವ ‘ಫೋರ್ ವಾಲ್ಸ್’ ಕೂಡಾ ಫೆ.11ಕ್ಕೆ ತೆರೆ ಕಾಣಲಿದೆ. ‘ಮಂತ್ರಂ’ ಸಿನಿಮಾ ಮೂಲಕ ಚಂದನವನಕ್ಕೆ ನಿರ್ದೇಶಕರಾಗಿ ಪ್ರವೇಶಿಸಿದ್ದ ಎಸ್.ಎಸ್ ಸಜ್ಜನ್, ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಚ್ಯುತ್ ಕುಮಾರ್, ಮೂರು ಶೇಡ್‌ಗಳಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫೆ.11ರಂದೇ ಎಸ್.ಎಸ್. ರವಿಗೌಡ ಹಾಗೂ ‘ಬಿಗ್‌ಬಾಸ್‌’ ಖ್ಯಾತಿಯ ದಿವ್ಯ ಸುರೇಶ್ ಅಭಿನಯಿಸಿರುವ ‘ರೌಡಿ ಬೇಬಿ’ ತೆರೆ ಕಾಣಲಿದೆ.

ಫೆ.18ಕ್ಕೆ ‘ವರದ’:
‘ರಾಬರ್ಟ್‌’ ಸಿನಿಮಾದ ಮುಖಾಂತರ ಸಿನಿ ಪಯಣದ ಹೊಸ ಇನಿಂಗ್ಸ್‌ ಆರಂಭಿಸಿರುವ ವಿನೋದ್‌ ಪ್ರಭಾಕರ್‌ ನಟನೆಯ ‘ವರದ’ ಸಿನಿಮಾ ಫೆ.18ಕ್ಕೆ ತೆರೆಕಾಣುತ್ತಿದೆ. ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯು ಯು/ಎ ಪ್ರಮಾಣಪತ್ರ ನೀಡಿದ್ದು, ಉದಯ ಪ್ರಕಾಶ್ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದ ಸಹ ನಿರ್ಮಾಪಕರು ಸುನಿತಾ ಪ್ರಕಾಶ್. ಆ್ಯಕ್ಷನ್‌ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರ ತಂದೆ ಪಾತ್ರದಲ್ಲಿ ನಟ ಚರಣ್ ರಾಜ್ ನಟಿಸಿದ್ದಾರೆ. ಅಮಿತ ಈ ಚಿತ್ರದ ನಾಯಕಿ.

ಫೆ.25ಕ್ಕೆ ‘ಓಲ್ಡ್‌ ಮಾಂಕ್‌’:
ಶ್ರೀನಿ ಹಾಗೂ ಅದಿತಿ ಪ್ರಭುದೇವ ನಟನೆ, ನಿರ್ದೇಶನದ ಚಿತ್ರ ‘ಓಲ್ಡ್‌ ಮಾಂಕ್‌’ ಫೆ.25ಕ್ಕೆ ತೆರೆಕಾಣಲಿದೆ. ‘ವಿಕ್ರಾಂತ್‌ ರೋಣ’ ಬಿಡುಗಡೆ ಮುಂದಕ್ಕೆ ಹೋದಲ್ಲಿ ಫೆಬ್ರುವರಿಯಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಶ್ರೀನಿ ಹೇಳಿದ್ದರು. ‘ವಿಕ್ರಾಂತ್‌ ರೋಣ’ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದ್ದು, ಇದರಿಂದ ‘ಓಲ್ಡ್‌ಮಾಂಕ್‌’ ಹಾದಿ ಸುಗಮವಾಗಿದೆ. ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಜ.11ರಂದು ತೆರೆಕಾಣಬೇಕಿದ್ದ ಪ್ರಭಾಸ್‌ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ‘ರಾಧೆ ಶ್ಯಾಮ್‌’ ಮುಂದೂಡಲ್ಪಟ್ಟಿತ್ತು. ಇದೀಗ ಮಾ.11ಕ್ಕೆ ಚಿತ್ರವು ತೆರೆ ಕಾಣಲಿದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಪ್ರಭಾಸ್‌ ತಿಳಿಸಿದ್ದಾರೆ.

‘ಜೇಮ್ಸ್‌’ಗೆ ಶಿವರಾಜ್‌ಕುಮಾರ್‌ ಕಂಠದಾನ:
ಚೇತನ್‌ ಕುಮಾರ್‌ ನಿರ್ದೇಶನದ, ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಚಿತ್ರ ‘ಜೇಮ್ಸ್‌’, ಪುನೀತ್‌ ಜನ್ಮದಿನವಾದ ಮಾ.17ರಂದೇ ತೆರೆಕಾಣಲಿದೆ. ಬಿಡುಗಡೆ ಕುರಿತು ಅಧಿಕೃತ ಘೋಷಣೆಯನ್ನು ಚಿತ್ರತಂಡ ಇನ್ನಷ್ಟೇ ಮಾಡಬೇಕಿದೆ. ಪ್ಯಾನ್‌ ಇಂಡಿಯಾ ಸಿನಿಮಾವಾಗಿರುವ ‘ಜೇಮ್ಸ್‌’ನ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪುನೀತ್‌ ಅವರ ಪಾತ್ರಕ್ಕೆ ನಟ ಶಿವರಾಜ್‌ಕುಮಾರ್ ಡಬ್ಬಿಂಗ್‌ ಮಾಡಿದ್ದಾರೆ. ಚಿತ್ರ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ಆರಂಭಿಸಿದ್ದು, ಕನ್ನಡ ಸೇರಿದಂತೆ ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಯಲ್ಲಿ ಚಿತ್ರವು ತೆರೆಕಾಣಲಿದೆ.

ಮಾ.25ಕ್ಕೆ ‘ಆರ್‌.ಆರ್‌.ಆರ್‌’:
ಎಸ್‌.ಎಸ್‌. ರಾಜಮೌಳಿ ನಿರ್ದೇಶನದ, ಜ್ಯೂನಿಯರ್‌ ಎನ್‌ಟಿಆರ್‌, ರಾಮ್‌ಚರಣ್‌ ತೇಜ, ಅಜಯ್‌ ದೇವ್‌ಗನ್‌, ಆಲಿಯಾ ಭಟ್‌ ನಟಿಸಿರುವ ಬಿಗ್‌ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ ಆರ್‌ಆರ್‌ಆರ್‌(ರೌದ್ರ–ರಣ–ರುಧಿರ) ಮಾ.25ಕ್ಕೆ ತೆರೆ ಕಾಣಲಿದೆ.

ಫೆ.4ರಂದು ಬಿಡುಗಡೆಯಾಗಬೇಕಿದ್ದ ನಟ ಶ್ರೀ ಮಹಾದೇವ್ ಹಾಗೂ ನಟಿ ಅದಿತಿ ಪ್ರಭುದೇವ ನಟಿಸಿರುವ ‘ಗಜಾನನ ಆ್ಯಂಡ್‌ ಗ್ಯಾಂಗ್’ ಸಿನಿಮಾವನ್ನು ಚಿತ್ರತಂಡವು ಮತ್ತಷ್ಟು ಮುಂದೂಡಿದೆ. ಮೇ ತಿಂಗಳಲ್ಲಿ ಚಿತ್ರ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ.

ಶೀಘ್ರದಲ್ಲೇ ತೆರೆಗೆ ‘ಏಕ್‌ ಲವ್‌ ಯಾ’:
ನಟ ಪ್ರೇಮ್‌ ಅವರು ನಿರ್ದೇಶಿಸಿರುವ, ರಾಣಾ, ರಚಿತಾ ರಾಮ್‌, ರೀಷ್ಮಾ ನಟನೆಯ ‘ಏಕ್‌ ಲವ್‌ ಯಾ’ ಸಿನಿಮಾವೂ ಶೀಘ್ರದಲ್ಲೇ ತೆರೆಕಾಣಲಿದೆ. ಶುಕ್ರವಾರ(ಫೆ.4)ರಂದು ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದ್ದೇವೆ ಎಂದು ಪ್ರೇಮ್‌ ತಿಳಿಸಿದ್ದಾರೆ. ಕಳೆದ ಜ.21ರಂದು ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗಿತ್ತು. ಆದರೆ ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಹಾಗೂ ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಆಸನಗಳ ಭರ್ತಿಗಷ್ಟೇ ಅವಕಾಶ ನೀಡಲಾಗಿದ್ದ ಕಾರಣ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿತ್ತು.

‘ಫೆ.24ಕ್ಕೆ ‘ವಿಕ್ರಾಂತ್‌ ರೋಣ’ ಬಿಡುಗಡೆ ಸಾಧ್ಯವಿಲ್ಲ’

ಫೆ.24ರಂದೇ ಬಿಡುಗಡೆಯಾಗಬೇಕಿದ್ದ ನಟ ಕಿಚ್ಚ ಸುದೀಪ್‌ ನಟನೆಯ, ಅನೂಪ್‌ ಭಂಡಾರಿ ನಿರ್ದೇಶನದ ಪ್ಯಾನ್ ಇಂಡಿಯಾ ಬಿಗ್‌ ಬಜೆಟ್‌ ಸಿನಿಮಾ ‘ವಿಕ್ರಾಂತ್‌ ರೋಣ’ ಯಾವಾಗ ತೆರೆಗೆ ಎನ್ನುವುದಕ್ಕೆ ನಿರ್ಮಾಪಕ ಜಾಕ್‌ ಮಂಜು ಉತ್ತರಿಸಿದ್ದಾರೆ. ‘ಸಿನಿಮಾ ಪುರವಣಿ’ಗೆ ಪ್ರತಿಕ್ರಿಯೆ ನೀಡಿರುವ ಚಿತ್ರದ ನಿರ್ಮಾಪಕ ಜಾಕ್‌ ಮಂಜು, ‘ಸರ್ಕಾರ ತಕ್ಷಣದಲ್ಲೇ ಚಿತ್ರಮಂದಿರಗಳಲ್ಲಿ ಶೇ 100 ಆಸನ ಭರ್ತಿಗೆ ಅವಕಾಶ ನೀಡಿದರೂ, ಫೆ.24ಕ್ಕಂತೂ ‘ವಿಕ್ರಾಂತ್‌ ರೋಣ’ ತೆರೆಕಾಣುವುದಿಲ್ಲ. ಇದೊಂದು ಪ್ಯಾನ್‌ ಇಂಡಿಯಾ ಸಿನಿಮಾ. ಪ್ರಚಾರಕ್ಕೆ ಹೆಚ್ಚಿನ ಕಾಲಾವಕಾಶ ಬೇಕು. ಈಗ ದೊರಕಿರುವ ಸಮಯ ಸಾಕಾಗುವುದಿಲ್ಲ. ಶೀಘ್ರದಲ್ಲೇ ಹೊಸ ದಿನಾಂಕವನ್ನು ಘೋಷಿಸುತ್ತೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.