ADVERTISEMENT

94ನೇ ಜನ್ಮದಿನ: ಡಾ.ರಾಜ್‌ ನೆನಪಲ್ಲಿ ಅಭಿಮಾನದ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 9:21 IST
Last Updated 24 ಏಪ್ರಿಲ್ 2022, 9:21 IST
ಡಾ.ರಾಜ್‌ಕುಮಾರ್‌ ಗೀತೆಗಳ ಗಾಯನ
ಡಾ.ರಾಜ್‌ಕುಮಾರ್‌ ಗೀತೆಗಳ ಗಾಯನ   

ಬೆಂಗಳೂರು: ನಟ ಸಾರ್ವಭೌಮ, ವರನಟ ಡಾ.ರಾಜ್‌ಕುಮಾರ್ ಅವರ 94ನೇ ಜನ್ಮದಿನ ಭಾನುವಾರ ನಡೆಯಿತು.

ಡಾ.ರಾಜ್‌ ಕುಟುಂಬದ ಸದಸ್ಯರು ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್‌ ಸಮಾಧಿಗೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಿದರು.

ಕಂಠೀರವ ಸ್ಟುಡಿಯೋದ ಮುಂಭಾಗ ಅಭಿಮಾನಿಗಳು ಡಾ.ರಾಜ್‌ ಅವರು ಬಾಲಕ ಪುನೀತ್‌ರಾಜ್‌ಕುಮಾರ್‌ ಅವರನ್ನು ಎತ್ತಿಕೊಂಡಿರುವ ಕಟೌಟ್‌ ಹಾಕಿದ್ದರು. ಹಂಸದ ಮಾದರಿಯ ಬೃಹತ್‌ ಪಲ್ಲಕ್ಕಿ ರಚಿಸಿ, ಹೂವಿನಿಂದ ಅಲಂಕರಿಸಿ ಅದರಲ್ಲಿ ಡಾ.ರಾಜ್‌ಕುಮಾರ್‌ ಭಾವಚಿತ್ರದ ಮೆರವಣಿಗೆ ಮಾಡಿದರು. ಇದೇ ವೇಳೆ ಅಲಂಕೃತ ಬೆಳ್ಳಿ ರಥದಲ್ಲಿ ಡಾ.ರಾಜ್‌ ಪುತ್ಥಳಿ ಇಟ್ಟು ಅಭಿಮಾನಿಗಳು ರಥ ಎಳೆದರು. ರಥದ ಮೆರವಣಿಗೆ ಲಗ್ಗೆರೆ ಸೇತುವೆವರೆಗೆ ತೆರಳಿ ವಾಪಸಾಯಿತು. ಸಮಾಧಿ ಪ್ರದೇಶದ ಬಳಿ ಅಭಿಮಾನಿಗಳಿಗೆ ಅನ್ನಪ್ರಸಾದ ವಿತರಿಸಲಾಯಿತು.

ADVERTISEMENT

ಕೋವಿಡ್‌ ಕಾರಣದಿಂದಾಗಿ ಸುಮಾರು ಮೂರು ವರ್ಷಗಳಿಂದ ಅಣ್ಣಾವ್ರ ಹುಟ್ಟುಹಬ್ಬ ಆಚರಿಸಲು ಆಗಿರಲಿಲ್ಲ. ಈ ರಥೋತ್ಸವಕ್ಕೆ ಸುಮಾರು 6 ತಿಂಗಳಿನಿಂದ ತಯಾರಿ ನಡೆಸಿದ್ದೆವು. ಕೋವಿಡ್‌ ಆತಂಕ ಕಡಿಮೆಯಾಗಿರುವ ಕಾರಣ ಈ ವರ್ಷ ಅದ್ದೂರಿಯಾಗಿಯೇ ಜನ್ಮದಿನ ಆಚರಿಸಿದ್ದೇವೆ ಎಂದು ಅಭಿಮಾನಿಗಳು ಹೇಳಿದರು.

ಯುವ ರಾಜ್‌ಕುಮಾರ್‌ ರಾಜ್‌ ರಥದಲ್ಲಿ ಪುತ್ಥಳಿಗೆ ಪೂಜೆ ಸಲ್ಲಿಸಿದರು.

ರಾಜ್‌ ಪುತ್ರ ರಾಘವೇಂದ್ರ ರಾಜ್‌ಕುಮಾರ್‌, ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಚಿತ್ರರಂಗದ ಗಣ್ಯರು ಸಮಾಧಿಗೆ ಪೂಜೆ ಸಲ್ಲಿಸುವ ಸಂದರ್ಭ ಇದ್ದರು.

ಡಾ.ರಾಜ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ನೆನಪಿಗೆ ಅಭಿಮಾನಿಗಳೇ ರೂಪಿಸಿದ ಶಕ್ತಿ ನಕ್ಷತ್ರ ಪುಸ್ತಕವನ್ನು ರಾಘವೇಂದ್ರ ರಾಜ್‌ಕುಮಾರ್‌ ಬಿಡುಗಡೆ ಮಾಡಿದರು.

ಅಪ್ಪಾಜಿ ಅವರ ಆದರ್ಶವನ್ನು ನೆನಪಿಸಿಕೊಳ್ಳಬೇಕು. ಆ ಆದರ್ಶಮಯ ಬದುಕು, ದಾನದ ಮೌಲ್ಯ ಇತ್ಯಾದಿಯೇ ನಮ್ಮನ್ನು, ಅಭಿಮಾನಿಗಳನ್ನು ಒಂದಾಗಿಸಿ ಮುನ್ನಡೆಸಿದೆ. ಈ ಬಾಂಧವ್ಯ ನಿರಂತರವಾದದ್ದು ಎಂದು ರಾಘವೇಂದ್ರ ರಾಜ್‌ಕುಮಾರ್‌ ಹೇಳಿದರು.

ರಾಜ್‌ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸ್ಮರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.