ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ನಟಿಸಿರುವ ‘ಫಾರ್ ರಿಜಿಸ್ಟ್ರೇಷನ್’ ಸೆನ್ಸಾರ್ ಪ್ರತಿ ಸಿದ್ಧಗೊಂಡಿದ್ದು, ಶೀಘ್ರದಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿದೆ.
ನವೀನ್ ದ್ವಾರಕಾನಾಥ್ ನಿರ್ದೇಶನದ ಚಿತ್ರ ಹಲವಾರು ವಿಷಯಗಳಿಂದ ಸುದ್ದಿ ಮಾಡಿತ್ತು. ಚಿತ್ರದ ಕೊನೆಯ ದೃಶ್ಯವೊಂದನ್ನು ಈಜುಕೊಳದಲ್ಲಿ ಚಿತ್ರೀಕರಿಸಲಾಗಿತ್ತು. ಚಿತ್ರದ ಒಂದು ಹಾಡನ್ನು ನೀರಿನ ಒಳಗೆ ಕ್ಯಾಮೆರಾ ಇಟ್ಟು ಚಿತ್ರೀಕರಿಸಿದ್ದರು. ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡು ಈ ಹಾಡನ್ನು ಚಿತ್ರೀಕರಿಸಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶಿಸಿದ್ದಾರೆ.
ಚಿತ್ರೀಕರಣ ಸೇರಿದಂತೆ ಚಿತ್ರದ ಬಹುತೇಕ ಕೆಲಸ ಪೂರ್ತಿಗೊಂಡಿದ್ದು, ಹಿನ್ನೆಲೆ ಸಂಗೀತದ ಕೆಲಸ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಸೆನ್ಸಾರ್ ಆಗಲಿದ್ದು, ಒಂದೆರಡು ತಿಂಗಳಲ್ಲಿ ಚಿತ್ರ ಬಿಡುಗಡೆಗೊಳಿಸಲಾಗುವುದು ಎಂದು ನಿರ್ದೇಶಕ ನವೀನ್ ದ್ವಾರಕಾನಾಥ್ ಹೇಳಿದ್ದಾರೆ.
ನಿಶ್ಚಲ್ ಫಿಲಂಸ್ ಮೂಲಕ ಎನ್.ನವೀನ್ ರಾವ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಫೆ.10ರಂದು ಚಿತ್ರ ತೆರೆ ಕಾಣಲಿದೆ ಎಂದು ಈ ಹಿಂದೆ ಚಿತ್ರತಂಡ ಹೇಳಿತ್ತು. ಚಿತ್ರದ ಕೆಲಸ ಮುಗಿಯುವುದು ವಿಳಂಬವಾಗಿ ಚಿತ್ರ ಬಿಡುಗಡೆಯನ್ನೂ ಮುಂದೂಡಲಾಗಿತ್ತು. ಹರೀಶ್ ಸಂಗೀತ ನಿರ್ದೇಶನ, ಅಭಿಷೇಕ್ ಕಲ್ಲತ್ತಿ- ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಅವರ ಸಂಕಲನವಿದೆ. ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.