ADVERTISEMENT

ತೆರೆಯ ಮೇಲೆ ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಕಥೆ?

​ಪ್ರಜಾವಾಣಿ ವಾರ್ತೆ
Published 25 ಜೂನ್ 2023, 10:43 IST
Last Updated 25 ಜೂನ್ 2023, 10:43 IST
ಕೆ.ಎಲ್‌.ರಾಹುಲ್‌
ಕೆ.ಎಲ್‌.ರಾಹುಲ್‌    

ಕ್ರಿಕೆಟ್‌ ಜೊತೆಗೆ ಹೊಂಬಾಳೆ ಫಿಲಂಸ್‌ ನಂಟು ಹೊಸತೇನಲ್ಲ. ಈ ಹಿಂದೆ ಆರ್‌ಸಿಬಿ ಜೊತೆ ಕೈಜೋಡಿಸಿದ್ದ ಹೊಂಬಾಳೆ, ತಂಡದ ಡಿಜಿಟಲ್‌ ಪಾಲುದಾರನಾಗಿತ್ತು. ಆರ್‌ಸಿಬಿ ಪಂದ್ಯಗಳ ವೇಳೆ ಕೆಜಿಎಫ್‌ ಚಾಪ್ಟರ್‌–2 ಪ್ರಚಾರ, ಆಟಗಾರರಿಗೆ ಕೆಜಿಎಫ್‌ ಚಿತ್ರ ತೋರಿಸಿದ್ದೆಲ್ಲ ಗೊತ್ತೇ ಇದೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ನಿರ್ಮಾಪಕ ವಿಜಯ್‌ ಕಿರಗಂದೂರು ಒಡೆತನದ ಸಂಸ್ಥೆ, ಕ್ರಿಕೆಟ್‌ ಕುರಿತಾದ ಚಿತ್ರವೊಂದಕ್ಕೆ ಸಜ್ಜಾಗಿದೆ. ತನ್ನ ಅಂಗಸಂಸ್ಥೆ ಕೆಆರ್‌ಜಿ ಸ್ಟುಡಿಯೋಸ್‌ ಮೂಲಕ ‘ಕಿರಿಕ್‌–ಎಟ್‌’ ಎಂಬ ಶೀರ್ಷಿಕೆಯುಳ್ಳ ಸಿನಿಮಾ ಘೋಷಿಸಿದೆ. ನಟರಾದ ದಾನೀಶ್‌ ಸೇಟ್‌ ಹಾಗೂ ನವೀನ್‌ ಶಂಕರ್‌ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ಕನ್ನಡಿಗ, ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಬದುಕಿನ ಕಥೆಯನ್ನು ಹೇಳಲಿದೆ ಎನ್ನುತ್ತಿವೆ ಮೂಲಗಳು. ಆದರೆ ಚಿತ್ರ ನಿರ್ಮಾಣ ಸಂಸ್ಥೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಈ ಚಿತ್ರ ಹಲವು ವಿಶೇಷಗಳನ್ನು ಹೊಂದಿದೆ. ‘ದಿ ಫ್ಯಾಮಿಲಿ ಮ್ಯಾನ್’, ‘ಫರ್ಜಿ’ಯಂತಹ ಸೂಪರ್‌ ಹಿಟ್‌ ವೆಬ್‌ ಸರಣಿಗಳ ಬರಹಗಾರ ಸುಮನ್‌ ಕುಮಾರ್‌ ಈ ಚಿತ್ರದ ನಿರ್ದೇಶಕರು. ಸ್ಟ್ಯಾಂಡಪ್ ಕಾಮಿಡಿಯನ್‌ ಆಗಿರುವ ಸುಮನ್‌ ಮೂಲತಃ ಬೆಂಗಳೂರಿನವರು. ಕೆಆರ್‌ಜಿಯ ಕಾರ್ತೀಕ್‌ ಗೌಡ ಮತ್ತು ಸಂಗಡಿಗರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಫ್ಯಾಮಿಲಿಮೆನ್‌ನ ಮತ್ತೋರ್ವ ಬರಹಗಾರ ಮನೋಜ್‌ಕುಮಾರ್‌ ಕಲೈವಣ್ಣನ್‌ ಈ ಚಿತ್ರದ ಬರಹಗಾರರು.

ಕ್ರಿಕೆಟ್‌ ಆಟದ ಜೊತೆಗೆ ಹಾಸ್ಯ ಲೇಪನ ಹೊಂದಿರುವ ಕಥೆಯಲ್ಲಿ ಕೆ.ಎಲ್‌.ರಾಹುಲ್‌ ಅವರ ಕ್ರಿಕೆಟ್‌ ಬದುಕಿನ ಕೆಲಷ್ಟು ಅಂಶಗಳು ಬರಲಿವೆ ಎನ್ನುತ್ತಿವೆ ಮೂಲಗಳು. ಈ ಕುರಿತು ಒಂದಷ್ಟು ಪೋಸ್ಟ್‌ಗಳನ್ನು ಪ್ರಚಾರದ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿಬಿಡಲಾಗಿದೆ. ಕ್ರಿಕೆಟ್‌ ಅಂಗಳದಲ್ಲಿ ಕಿರಿಕ್‌ ಮಾಡುತ್ತ, ನಗಿಸುವ ದಾನೀಶ್‌ ಸೇಟ್‌ ಸಾಕಷ್ಟು ವರ್ಷಗಳಿಂದ ಕ್ರಿಕೆಟ್‌ ತಂಡಗಳ ಜೊತೆಗೆ ನಂಟು ಹೊಂದಿದ್ದಾರೆ. ಆರ್‌ಸಿಬಿಯ ಡ್ರೆಸಿಂಗ್‌ ರೂಮಿನ ಹಾಸ್ಯ ವಿಡಿಯೊಗಳು, ಇಂಟರ್‌ವ್ಯೂಗಳಿಂದಲೇ ಇವರು ಸಾಕಷ್ಟು ಜನಪ್ರಿಯ. ಹೀಗಾಗಿ ಈ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಾಗಿದೆ. ವಾಸುಕಿ ವೈಭವ್‌ ಸಂಗೀತ ಈ ಚಿತ್ರಕ್ಕಿದೆ. ಕಥೆ ಅಂತಿಮವಾಗಿದ್ದು ಮುಂದಿನ ಪ್ರಕ್ರಿಯೆಗಳು ಇನ್ನಷ್ಟೇ ಪ್ರಾರಂಭವಾಗಬೇಕಿದೆ ಎನ್ನುತ್ತಿವೆ ಚಿತ್ರತಂಡದ ಮೂಲಗಳು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.