ಚಂದ್ರಜಿತ್ ಬೆಳ್ಯಪ್ಪ ನಿರ್ದೇಶನದ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಸೇರಿದಂತೆ ಇಂದು(ಸೆ.6) ಮೂರು ಸಿನಿಮಾಗಳು ತೆರೆಕಾಣಲಿವೆ.
ಇಬ್ಬನಿ ತಬ್ಬಿದ ಇಳೆಯಲಿ
ನಟ ರಕ್ಷಿತ್ ಶೆಟ್ಟಿ ಸಾರಥ್ಯದ ಪರಂವಃ ಸ್ಟುಡಿಯೋಸ್ ನಿರ್ಮಾಣ ಮಾಡಿರುವ, ಚಂದ್ರಜಿತ್ ಬೆಳ್ಯಪ್ಪ ನಿರ್ದೇಶದ ಸಿನಿಮಾ ಇದಾಗಿದೆ. ರಕ್ಷಿತ್ ಶೆಟ್ಟಿ ಅವರ ‘ಸೆವೆನ್ ಆಡ್ಸ್’ ಚಿತ್ರದ ಭಾಗವಾಗಿರುವ ಚಂದ್ರಜಿತ್ 9 ವರ್ಷಗಳ ಹಿಂದೆ ತಮ್ಮ ಬ್ಲಾಗ್‌ನಲ್ಲಿ ಬರೆದ ಕಥೆ ಇಂದು ಸಿನಿಮಾವಾಗಿದೆ. ‘ಕಿರಿಕ್ ಪಾರ್ಟಿ’ ಮತ್ತು ‘ಅವನೇ ಶ್ರೀಮನ್ನಾರಾಯಣ’ ಚಿತ್ರಗಳ ಚಿತ್ರಕಥೆಯಲ್ಲಿ ತೊಡಗಿಸಿಕೊಂಡಿದ್ದ ಚಂದ್ರಜಿತ್ ‘ಕಥಾಸಂಗಮ’ ಚಿತ್ರದಲ್ಲಿ ‘ರೇನ್ಬೋ ಲ್ಯಾಂಡ್’ ಕಥೆಯನ್ನು ನಿರ್ದೇಶಿಸಿದ್ದಾರೆ. ‘ಪ್ರೀತಿ ಎಂದರೆ ಏನು? ಹಳೆಯ ನೆನಪುಗಳಾ? ನಾಳೆ ಜೊತೆಯಾಗಿರಬೇಕು ಎಂಬ ಕನಸುಗಳಾ? ದೂರವಾದ ನಂತರದ ಚಡಪಡಿಕೆಯಾ? ಇದೆಲ್ಲದರ ಸಂಗಮವೇ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ.
ಇದೊಂದು ಕಾವ್ಯಾತ್ಮಕ ಪ್ರೇಮಕಥೆ. ಬೇಷರತ್ತಾಗಿ ಪ್ರೀತಿಸುವುದನ್ನು ಸಂಭ್ರಮಿಸುವ ಚಿತ್ರವಿದು. ನಿನ್ನೆ, ಇಂದು ಮತ್ತು ನಾಳೆಯ ಪ್ರೀತಿಯನ್ನು ತೋರಿಸುವ ಚಿತ್ರ. ಕಾಲೇಜಿನಿಂದ ಪ್ರಾರಂಭವಾಗುವ ಈ ಕಥೆಯು ಪ್ರೌಢಾವಸ್ಥೆಯಲ್ಲಿ ಅಂತ್ಯವಾಗುತ್ತದೆ. ಹೀಗೆ ಒಂದು ದಶಕದ ವಿವಿಧ ಕಾಲಘಟ್ಟವನ್ನು ಈ ಚಿತ್ರವು ಸೂಕ್ಷ್ಮವಾಗಿ ತೋರಿಸಲಿದೆ’ ಎಂದಿದ್ದಾರೆ ಚಂದ್ರಜಿತ್. ಸಿನಿಮಾದಲ್ಲಿ ‘ಪಂಚತಂತ್ರ’ ಖ್ಯಾತಿಯ ವಿಹಾನ್ ಹಾಗೂ ‘ನಮ್ಮನೆ ಯುವರಾಣಿ’ ಖ್ಯಾತಿಯ ಅಂಕಿತಾ ಅಮರ್ ಹಾಗೂ ಮಯೂರಿ ನಟರಾಜ್ ನಟಿಸಿದ್ದಾರೆ. ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಮತ್ತು ಶ್ರೀವತ್ಸನ್ ಸೆಲ್ವರಾಜನ್ ಅವರ ಛಾಯಾಚಿತ್ರಗ್ರಹಣವಿದೆ.
ಎ ಡೇ ಇನ್ ಡಾಲರ್ಸ್‌ಪೇಟೆ
ಬಹುತೇಕ ಹೊಸಬರೇ ಇರುವ ಸಿನಿಮಾ ಇದು. ಮೋಹನ್ ಎನ್.ಮುನಿನಾರಾಯಣಪ್ಪ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ ಸತ್ಯ ಘಟನೆ ಆಧರಿತ ಸಿನಿಮಾವಾಗಿದೆ. ತಮಿಳುನಾಡಿನ ಬ್ಯಾಂಕ್‌ವೊಂದರ ಮ್ಯಾನೇಜರ್ ಆಕಸ್ಮಿಕವಾಗಿ ₹13 ಕೋಟಿಗಳನ್ನು ನೂರು ಜನರ ಖಾತೆಗೆ ಹಾಕಿಬಿಡುತ್ತಾನೆ. ಈ ಘಟನೆಯ ಸುತ್ತ ಈ ಸಿನಿಮಾ ಸಾಗುತ್ತದೆ ಎಂದಿದೆ ಚಿತ್ರತಂಡ. ಹೈಪರ್ ಲಿಂಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ‘ಲೂಸಿಯಾ’ ಖ್ಯಾತಿಯ ಪವನ್ ಪತ್ನಿ ಸೌಮ್ಯ ಜಗನ್‌ಮೂರ್ತಿ, ‘ಮೆಟ್ರೊ ಸಾಗಾ’ದ ಆಕರ್ಷ್ ಕಮಲ, ವೆಂಕಟ್ ರಾಜ್, ಕುಶಾಲ್ಸ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ದತ್ತು ಬಣಕರ್, ಕೌಶಿಕ್, ರಾಘು ರಾಮಕೊಪ್ಪ, ಹೊನ್ನವಳ್ಳಿ ಕೃಷ್ಣ ಮತ್ತಿತರರು ತಾರಾಬಳಗದಲ್ಲಿದ್ದಾರೆ.
ಅನ್ನ
ಇದು ಎನ್.ಎಸ್.ಇಸ್ಲಾಹುದ್ದೀನ್ ನಿರ್ದೇಶನದ ಚಿತ್ರ. ಈ ಚಿತ್ರದ ಕಥೆ ಹನೂರು ಚನ್ನಪ್ಪ ಅವರದು. ಹನೂರು ಅವರ ಕಥಾಸಂಕನದಲ್ಲಿನ ‘ಅನ್ನ’ ಎಂಬ 22 ಪುಟಗಳ ಕಥೆ ಒಂದಾಗಿದೆ. ‘80ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದೆ. ಕೆಲವೊಂದು ಹಳ್ಳಿಗಾಡುಗಳಲ್ಲಿ ಅನ್ನ ಹಬ್ಬದ ದಿನ ಮಾತ್ರ ಮಾಡುವುದು ಎಂದು ತಿಳಿದಿತ್ತು. ಈ ಕಥೆಯು ಇದರ ಸುತ್ತವೇ ತಿರುಗಲಿದ್ದು, ಹಳ್ಳಿಯ ಬಡಕುಟುಂಬದಲ್ಲಿ ಬೆಳೆದ ಹುಡುಗನೊಬ್ಬ ಜಾತ್ರೆಯಲ್ಲಿ ನಾಪತ್ತೆಯಾಗಿ ತದನಂತರ ಅವನ ಹುಡುಕಾಟದಲ್ಲಿ ಎದುರಾಗುವ ಒಂದಷ್ಟು ಸಮಸ್ಯೆಗಳ ನಡುವೆ ಅನ್ನದ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ’ ಎಂದಿದ್ದಾರೆ ನಿರ್ದೇಶಕರು. ಈ ಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಮಾಸ್ಟರ್ ನಂದನ್ ‘ಮಹದೇವ’ ಎಂಬ ಪಾತ್ರದಲ್ಲಿ ನಟಿಸಿದ್ದು, ಪದ್ಮಶ್ರೀ, ಸಿದ್ದು ಪ್ರಸನ್ನ, ಸಂಪತ್, ಬಲ ರಾಜವಾಡಿ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.