ಕನ್ನಡದ ಬೆಳ್ಳಿ ತೆರೆಯಲ್ಲಿ ಕಪ್ಪು ಬಿಳುಪು ಯುಗದಲ್ಲೇ ಹತ್ತಾರು ಹೊಸ ಪ್ರಯೋಗಗಳನ್ನು ಮಾಡಿದ ಹರಿಕಾರ, ನಾಡಿನ ನಗೆಗಾರ, ದಿಗ್ಗಜರಿಂದ ಹಿಡಿದು ಹೊಸ ತಲೆಮಾರಿನವರ ಜತೆಗೂ ಸಿನಿರಂಗದಲ್ಲಿ ಹೆಜ್ಜೆ ಹಾಕಿದ ನಟ, ನಿರ್ಮಾಪಕ ದ್ವಾರಕೀಶ್ ಅವರು 81ನೇ ವರ್ಷದಲ್ಲಿ ನಿಧನರಾದರು.
ದ್ವಾರಕೀಶ್ ಅವರ ಬದುಕಿನ ಪುಟಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ...
ದ್ವಾರಕೀಶ್ 1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದರು. ಇವರ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ಪ್ರಾಥಮಿಕ, ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದರು. ನಂತರ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದರು. 1963ರಲ್ಲಿ ಆಟೋ ಸ್ಪೇರ್ ಸ್ಟೋರ್ ವ್ಯಾಪಾರ ತೊರೆದು ನಟನೆಯತ್ತ ಮುಖ ಮಾಡಿದರು.
ಸಿನಿಮಾ ಜೀವನ...
1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ದ್ವಾರಕೀಶ್ ಪದಾರ್ಪಣೆ ಮಾಡಿದರು. 1966ರಲ್ಲಿ ಮಮತೆಯ ಬಂಧನ ಸಿನಿಮಾವನ್ನು ನಿರ್ಮಾಣ ಮಾಡಿದರು. 1969ರಲ್ಲಿ ರಾಜ್‌ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಸಿನಿಮಾ ನಿರ್ಮಿಸುವ ಮೂಲಕ ಸ್ವತಂತ್ರ ನಿರ್ಮಾಪಕರಾದರು.
ಈ ಸಿನಿಮಾದ ಬಳಿಕ ಹಲವು ಸಿನಿಮಾಗಳನ್ನು ನಿರ್ಮಿಸಿ, ಅದರಲ್ಲಿ ಯಶಸ್ಸು ಪಡೆದ ದ್ವಾರಕೀಶ್ ಈವರೆಗೂ 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.
1985ರಲ್ಲಿ ಸಿನಿಮಾ ನಿರ್ದೇಶನಕ್ಕಿಳಿದ ದ್ವಾರಕೀಶ್, ಮೊದಲ ಬಾರಿ ‘ನೀ ಬರೆದ ಕಾದಂಬರಿ‘ ಎಂಬ ಚಿತ್ರವನ್ನು ನಿರ್ದೇಶಿಸಿದರು. ನಂತರ ಡ್ಯಾನ್ಸ್ ರಾಜ ಡ್ಯಾನ್ಸ್, ಶ್ರುತಿ, ರಾಯರು ಬಂದರು ಮಾವನ ಮನೆಗೆ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ.
ರಾಜ್‌ಕುಮಾರ್, ವಿಷ್ಣುವರ್ಧನ್‌ರಂತಹ ದಿಗ್ಗಜರ ಸಿನಿಮಾಗಳನ್ನು ನಿರ್ಮಿಸಿದ ಹೆಗ್ಗಳಿಕೆ ಹೊಂದಿದ್ದ ಅವರು 'ದ್ವಾರಕೀಶ್ ಚಿತ್ರ' ನಿರ್ಮಾಣ ಸಂಸ್ಥೆ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಇವರು ಕನ್ನಡ ಮಾತ್ರವಲ್ಲದೇ, ತಮಿಳು, ಹಿಂದಿ ಸಿನಿಮಾಗಳನ್ನು ಕೂಡ ನಿರ್ಮಾಣ ಮಾಡಿದ್ದಾರೆ.
2024ರ ಏಪ್ರಿಲ್ 16ರಂದು ದ್ವಾರಕೀಶ್ ನಿಧನರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.