ADVERTISEMENT

ಸ್ಯಾಂಡಲ್‌ವುಡ್‌ #MeToo: ಶ್ರುತಿ ಹರಿಹರನ್‌ಗೆ ಹಲವೆಡೆಯಿಂದ ಬೆಂಬಲ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 15:17 IST
Last Updated 20 ಅಕ್ಟೋಬರ್ 2018, 15:17 IST
   

ಬೆಂಗಳೂರು: ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಶ್ರುತಿ ಹರಿಹರನ್ ಅವರಿಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌ ಸೇರಿದಂತೆ ಹಲವೆಡೆಯಿಂದ ಬೆಂಬಲ ವ್ಯಕ್ತವಾಗಿದೆ.

ಚಿತ್ರ ನಿರ್ದೇಶಕ ಹಾಗೂ ಪರಿಸರ ತಜ್ಞ ಕೇಸರಿ ಹರವು ಅವರು ಶ್ರುತಿ ಅವರನ್ನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.

‘ಶ್ರುತಿ ಹೇಳುವುದನ್ನಾದರೂ ಹೇಳಲಿ ಬಿಡೀ. ಅಂದು ಧೈರ್ಯವಿಲ್ಲದಿದ್ದಿರಬಹುದು. ಇಂದು ಹೇಳಿದ್ದಕ್ಕೆ ಹೇಗಿದೆ ನೋಡಿ ನಮ್ಮ ಸ್ಯಾಂಡಲ್ ವುಡ್‌ನ ಪುರುಷ ಪ್ರತಿಕ್ರಿಯೆ!! ಅದೇ ಹಿಂದಿ ನಟಿಯರು, ಇಂಗ್ಲಿಷ್ ಪತ್ರಕರ್ತೆಯರು ಹೇಳಿದಾಗ ಹೀಗೇ ಇತ್ತೇ ಇವರ ಪ್ರತಿಕ್ರಿಯೆ?

ಸಿನೆಮಾ ರಂಗದಲ್ಲಿ ಇದೆಲ್ಲಾ ಮಾಮೂಲು, ಅವಕಾಶ ಮತ್ತು ಪ್ರಚಾರಕ್ಕಾಗಿ ಹಲವು ಮಹಿಳೆಯರೇ ಈ ಮಾಮೂಲನ್ನು ಅಪ್ಪಿಕೊಂಡಿದ್ದಾರೆ ಎನ್ನುವಂತೆ ಕೆಲವರು ಮಾತಾಡುತ್ತಿದ್ದಾರೆ. ಈ ಕ್ಷಣಕ್ಕೆ 'ಇರಬಹುದು' ಎಂದರೂ ಕೂಡ, ಅಂಥವರಿಗೆ ಅದನ್ನು ಅನಿವಾರ್ಯವಾಗಿಸಿದ ವ್ಯವಸ್ಥೆ ಎಂತದ್ದು’ ಎಂದು ಕೇಸರಿ ಹರವು ಅವರು ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ.

‘ನೀವು ಧೈರ್ಯವಂತೆ ಶ್ರುತಿ ಅವರೇ. ನಾವು ನಿಮ್ಮನ್ನು ನಂಬುತ್ತೇವೆ’ ಎಂದು ಶ್ರುತಿ ಎಂಬುವವರು ಟ್ವಿಟರ್‌ನಲ್ಲಿ ಶ್ರುತಿಹರಿಹರನ್ ಅವರ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದಾರೆ.

‘ಇದು ಕೇವಲ ಪ್ರಚಾರಕ್ಕಾಗಿ ಅನ್ನುವವರಿಗೆ; ಕೇವಲ ಗಂಡಸರೇ ಆಳುವ ಕನ್ನಡ ಚಿತ್ರರಂಗದಲ್ಲಿ ಒಬ್ಬ ಬಹಳ ವರ್ಷಗಳಿಂದ ಬೆಳೆದಿರುವ ನಟನ ವಿರುದ್ಧ ಮಾತಾಡಿದರೆ ನಟಿಯರಿಗೆ ಪ್ರಚಾರಕ್ಕಿಂತಲೂ ತೊಂದರೆಯೇ ಹೆಚ್ಚು, ಮುಂದೆ ಯಾವುದೇ ಚಿತ್ರದಲ್ಲಿ ಅವಕಾಶ ಸಿಗುವುದೇ ಸಂಶಯವಾಗುತ್ತೆ! ಇದನ್ನು ತಿಳಿದೂ ವಿರುದ್ಧ ಮಾತನಾಡಿದ್ದಾರೆ ಎಂದರೆ ಸತ್ಯವಿರುತ್ತೆ’ ಎಂದು ಮನೋಜ್ ರಮೇಶ್ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

ADVERTISEMENT



‘ತಡವಾಗಿ ಹೇಳಿದ್ದಾರೆ ಎಂದ ಮಾತ್ರಕ್ಕೆ ಅದು ಸುಳ್ಳಾಗಿರಬೇಕು ಎಂದೇನೂ ಇಲ್ಲ. ಕೆಲವೊಮ್ಮೆ ಇಂತಹ ಸೂಕ್ಷ್ಮ ವಿಷಯಗಳನ್ನು ಬಹಿರಂಗಪಡಿಸಲು ಸಮಯ ಬೇಕಾಗುತ್ತದೆ’ ಎಂದು ತೇಜಸ್ ಎಂಬುವವರು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.


‘ಪುರುಷರ ಪ್ರಾಬಲ್ಯದ ಬಗ್ಗೆ ಪ್ರಶ್ನೆ ಮಾಡುವ ಮಹಿಳೆಯರನ್ನೇ ಪ್ರಶ್ನಿಸುವುದನ್ನು ನಿಲ್ಲಿಸಿ. ನಮ್ಮವರಿಗೇ ಯಾರಿಗಾದರೂ ಈ ರೀತಿ ಆದರೆ ಆವಾಗ ನೀವು ಪ್ರಶ್ನಿಸುತ್ತೀರಾ... ಇದು ಬೆಂಬಲಿಸಬೇಕಾದ ಸಮಯ. ನೀವು ಈಗಾಗಲೇ ಗುರುತಿಸಿಕೊಂಡಿರುವುದರಿಂದ ಪ್ರಚಾರಕ್ಕಾಗಿ ಇದನ್ನು ಮಾಡಬೇಕಾದ್ದಿಲ್ಲ’ ಎಂದು ಆನಂದನ್ ಎಸ್‌. ಎಂಬುವವರು ಪ್ರತಿಕ್ರಿಯಿಸಿದ್ದಾರೆ.


‘ದನಿಯೆತ್ತಿದ್ದಕ್ಕೆ ಧನ್ಯವಾದಗಳು. ನಿಮಗಾದ ನೋವಿಗೆ ಕ್ಷಮೆಯಿರಲಿ. ಕೆಟ್ಟ ಸಂದೇಶಗಳ ಮೂಲಕ ನಿಮಗೆ ವ್ಯಕ್ತವಾದ ಪ್ರತಿಕ್ರಿಯೆಗಳ ಬಗ್ಗೆಯೂ ಕ್ಷಮೆಯಿರಲಿ. ನಿಮ್ಮಂತೆ ಮಾತನಾಡುವವರು ಈ ಕ್ಷೇತ್ರಕ್ಕೆ ಬೇಕಾಗಿದ್ದಾರೆ’ ಎಂದು ರಂಜಿತಾ ಎಂಬುವವರು ಪ್ರತಿಕ್ರಿಯಿಸಿದ್ದಾರೆ.


‘ಇಂತಹ ಹತ್ತಾರು ಕತೆಗಳನ್ನು ಕಣ್ಣಾರೆ ಕಂಡವರಿಂದ ಕೇಳಿ ದಿಗ್ಮೂಢಳಾಗಿದ್ದಿದೆ. ಬೇರೆ ಬೇರೆ ಪಾನಗೋಷ್ಠಿಗಳಲ್ಲಿ ಹೆಣ್ಣುಮಕ್ಕಳ ಕುರಿತ ಇಂತಹ ಘಟನೆಗಳನ್ನು ಸ್ವಾರಸ್ಯಕರವಾಗಿ ವಿವರಿಸುವ ದೊಡ್ಡದೊಡ್ಡವರ ಬಗ್ಗೆ ಬೇಸರವಾಗಿದ್ದಿದೆ. ಅಂತಹ ಘಟನೆಗಳಿಗೆ ಈಡಾಗಿರುವ ನಟಿಯರ ಕುರಿತು ನೋವಾಗಿದ್ದಿದೆ. ಯಾವ ಜನಪ್ರಿಯ ನಟಿಯರೂ ಈ ಸಂದರ್ಭದಿಂದ ಹೊರತಾಗಿಲ್ಲವೇನೋ ಅನಿಸುತ್ತದೆ. ಸಾಹಿತ್ಯ ಕ್ಷೇತ್ರವೂ ಕೆಲವೊಮ್ಮೆ ಹೀಗೆಯೇ ಇದೆ’ ಎಂದು ಮಮತಾ ಅರಸಿಕೆರೆ ಎಂಬುವವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಶ್ರುತಿ ಹರಿಹರನ್ ಅವರಿಗೆ ‘ಫೈರ್’ ಸಂಘಟನೆ (ಫಿಲಂ ಇಂಡಸ್ಟ್ರಿ ಫಾರ್ ಇಕ್ವಾಲಿಟಿ ಆ್ಯಂಡ್ ರೈಟ್ಸ್‌) ಈಗಾಗಲೇ ಬೆಂಬಲ ಸೂಚಿಸಿದೆ. ಫೈರ್ ಸಂಘಟನೆಯ ಸಂಸ್ಥಾಪಕ ನಟ ಚೇತನ್ ಶ್ರುತಿಗೆ ಬೆಂಬಲ ಸೂಚಿಸಿರುವುದಷ್ಟೇ ಅಲ್ಲದೆ, ‘ಮೀ ಟೂ’ ವಿರುದ್ಧ ಮಾತನಾಡುತ್ತಿರುವವರ ಬಗ್ಗೆ ಅಸಮಧಾನವನ್ನೂ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.