ADVERTISEMENT

ಚಂದನವನ | ಆ್ಯನಿಮೇಷನ್‌ನಲ್ಲಿ ಬಂದ ‘ಭಾಗ್ಯಲಕ್ಷ್ಮೀ’

​ಪ್ರಜಾವಾಣಿ ವಾರ್ತೆ
Published 30 ಮೇ 2024, 23:30 IST
Last Updated 30 ಮೇ 2024, 23:30 IST
ಬೃಂದಾ ಆಚಾರ್ಯ 
ಬೃಂದಾ ಆಚಾರ್ಯ    

ಸಿನಿಮಾದ ತುಣುಕುಗಳನ್ನು ಇರಿಸಿಕೊಂಡೇ ಟೀಸರ್‌ ನಿರ್ಮಾಣ ಸಾಮಾನ್ಯ. ಆದರೆ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ’ ಚಿತ್ರತಂಡವು ಆ್ಯನಿಮೇಷನ್‌ನಲ್ಲಿ ಟೀಸರ್‌ ಸಿದ್ಧಪಡಿಸಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. 

ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಗೊಳ್ಳಲಿರುವ ಈ ಚಿತ್ರದ ಕಥೆಯ ಸಾರಾಂಶವನ್ನು ಆ್ಯನಿಮೇಷನ್‌ ರೂಪದಲ್ಲಿ ಚಿತ್ರತಂಡ ಕಟ್ಟಿಕೊಟ್ಟಿದೆ. ‘ರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ಚಿತ್ರಗಳ ನಿರ್ಮಾಪಕ ಎಚ್.ಕೆ ಪ್ರಕಾಶ್ ನಿರ್ಮಾಣದ, ‘ದಿಯಾ’, ‘ದಸರಾ’, ‘ಕೆಟಿಎಂ’ ಮೂಲಕ ಗುರುತಿಸಿಕೊಂಡಿರುವ ದೀಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ ಚಿತ್ರ ಇದಾಗಿದೆ. ಆ್ಯನಿಮೇಟೆಡ್‌ ಟೀಸರ್‌ಗೆ ದೀಕ್ಷಿತ್‌ ಧ್ವನಿ ನೀಡಿದ್ದಾರೆ. ‘ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಹೊಸ ಪ್ರಯೋಗ. ಈ ವಿಡಿಯೊ ಸಿದ್ಧಪಡಿಸಲು ಏಳೆಂಟು ಜನ ನುರಿತ ತಂತ್ರಜ್ಞರು ತಿಂಗಳ ಕಾಲ ಶ್ರಮ ಪಟ್ಟಿದ್ದಾರೆ’‌ ಎಂದಿದೆ ಚಿತ್ರತಂಡ. ರಕ್ಷಿತ್ ಶೆಟ್ಟಿ, ಸಚಿನ್ ಹಾಗೂ ಅಭಿಷೇಕ್ ಸಾರಥ್ಯದ ‘ಪಿನಾಕ’ ವಿಎಫ್‌ಎಕ್ಸ್ ಸ್ಟುಡಿಯೊದಲ್ಲೇ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಚಿತ್ರದ ಟೀಸರ್‌ನ ಆ್ಯನಿಮೇಷನ್‌ ಕೆಲಸ ನಡೆದಿದೆ.

ಚಿತ್ರಕ್ಕೆ ಅಭಿಷೇಕ್ ಎಂ. ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಬೆಂಗಳೂರು, ತುಮಕೂರು ಹಾಗೂ ಚಿತ್ರದುರ್ಗದಲ್ಲಿ ಚಿತ್ರೀಕರಣ ನಡೆದಿದೆ. ಕೆಲವು ದಿನಗಳ ಚಿತ್ರೀಕರಣವಷ್ಟೇ ಬಾಕಿಯಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ದೀಕ್ಷಿತ್ ಶೆಟ್ಟಿಗೆ ಜೋಡಿಯಾಗಿ ‘ಪ್ರೇಮಂ ಪೂಜ್ಯಂ’ ಹಾಗೂ ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರಗಳಲ್ಲಿ ನಟಿಸಿರುವ ಬೃಂದಾ ಆಚಾರ್ಯ ಇದ್ದಾರೆ. ಸಾಧು ಕೋಕಿಲ, ಗೋಪಾಲಕೃಷ್ಣ ದೇಶಪಾಂಡೆ, ಉಷಾ ಭಂಡಾರಿ, ಭರತ್, ವಿಶ್ವನಾಥ್, ಹರೀಶ್ ಸಮಷ್ಟಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.