ಹನ್ನೆರಡನೆ ಶತಮಾನದ ಶರಣರು, ಅನುಭವ ಮಂಟಪ ಮತ್ತು ಬಸವಣ್ಣನ ಕುರಿತಾದ ಕಥೆಯನ್ನು ಹೊಂದಿರುವ ‘ಶರಣರ ಶಕ್ತಿ’ ಚಿತ್ರದ ಪೋಸ್ಟರ್ ಹಾಗೂ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿತು.
ಶ್ರೀಷ ಫಿಲ್ಮ್ಸ್ ಅಡಿಯಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡಿರುವ ಆರಾಧನಾ ಕುಲಕರ್ಣಿ, ಅಕ್ಕ ನಾಗಮ್ಮನ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ವಜ್ರೇಶ್ವರಿ ಕಂಬೈನ್ಸ್‌ದಲ್ಲಿ ಕೆಲಸ ಮಾಡಿರುವ ದಿಲೀಪ್ ಶರ್ಮ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ ಅನುಭವ ಮಂಟಪದ ಅಧ್ಯಕ್ಷ ಗೊ.ರು.ಚನ್ನಬಸಪ್ಪ, ‘ಬಸವಣ್ಣ ಇಂದಿಗೂ ಏಕೆ ಪ್ರಸ್ತುತ ಎಂಬುದನ್ನು ಈ ಚಿತ್ರದಲ್ಲಿ ನಿರೂಪಣೆ ಮಾಡಿದ್ದಾರೆ. ಅವರು ಧಾರ್ಮಿಕ, ಶೈಕ್ಷಣಿಕ, ಸಾಂಸ್ಕ್ರತಿಕ, ಸಾಮಾಜಿಕ ಎಲ್ಲಾ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. ಬಸವಣ್ಣನವರು ಸಾರ್ವಕಾಲಿಕವಾದವರು’ ಎಂದರು.
‘ಬಸವಣ್ಣನವರು ಕಲ್ಯಾಣ ಕ್ರಾಂತಿ, ವಚನ ಸಾಹಿತ್ಯ ರಕ್ಷಣೆ ಮಾಡಲು ಹೇಗೆ ಹೋರಾಡಿದರು? ಎಲ್ಲೆಲ್ಲಿ ವಚನಗಳನ್ನು ಬಚ್ಚಿಟ್ಟರು? ಅದನ್ನು ಜನರಿಗೆ ಯಾವ ರೀತಿ ಹರಡಿದರು. ವೇಶ್ಯೆ ಸಂಕವ್ವನ ಕಥೆ ಏನು? ತಳವಾರು ಕಾಮಿದೇವ ಶರಣರು ಯಾಕೆ ಕಲ್ಯಾಣಕ್ಕೆ ಬಂದರು ಎಂಬಿತ್ಯಾದಿ ವಿಷಯಗಳ ಕುರಿತು ಚಿತ್ರದಲ್ಲಿ ಮಾಹಿತಿ ಇದೆ’ ಎಂದು ನಿರ್ದೇಶಕರು ತಿಳಿಸಿದರು.
ಬಸವಣ್ಣನಾಗಿ ಮಂಜುನಾಥಗೌಡ ಪಾಟೀಲ್, ನೀಲಾಂಬಿಕೆಯಾಗಿ ಸಂಗೀತ ಮಡ್ಲೂರು, ಶೀಲವಂತನಾಗಿ ವಿಶ್ವರಾಜ ರಾಜಗುರು, ಚನ್ನಬಸವಣ್ಣನಾಗಿ ಧ್ರುವಶರ್ಮ ನಟಿಸಿದ್ದಾರೆ.
ವಿನುಮನಸು ಸಂಗೀತ, ಮುಂಜಾನೆ ಮಂಜು ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.