ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ನಟ, ನಿರ್ದೇಶಕ ಶಿವಧ್ವಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಇಂಬು’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಹಾಸ್ಯನಟ ನವೀನ್ ಡಿ ಪಡೀಲ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಕರಾವಳಿ ಭಾಗದಲ್ಲಿ ದೈವ ನರ್ತಕರಾದ ದರ್ಶನ ಪಾದ್ರಿ ಕುರಿತಾದ ವಿಭಿನ್ನ ಕಥೆಯನ್ನು ಹೊಂದಿದೆ.
‘ಇಂಬು’ ಎಂದರೆ ಧೈರ್ಯ, ಸಾಮರ್ಥ್ಯ ಎಂದರ್ಥ. ವಿದ್ಯಾಭ್ಯಾಸ ಇಲ್ಲದ ಮುಗ್ಧರಿಗೆ ಮೊಬೈಲ್ ಫೋನ್ ಸಿಕ್ಕಾಗ ಅದನ್ನು ಕಲಿಯುತ್ತಾರೆ. ಮೊಬೈಲ್‌ನಲ್ಲಿ ಏನೇನೋ ಪ್ರಯೋಗ ಮಾಡಲು ಹೋಗಿ ಹೇಗೆ ಬ್ಲಾಕ್‌ಮೇಲ್ ಮಾಡುವವರ ಬಳಿ ಸಿಲುಕಿಕೊಳ್ಳುತ್ತಾರೆ. ಅದರಿಂದ ಏನೆಲ್ಲ ಆಗುತ್ತದೆ? ತಪ್ಪಿಸಿಕೊಳ್ಳಲು ಹೇಗೆಲ್ಲ ಹೆಣಗಾಡುತ್ತಾರೆ ಎಂಬುದೇ ಚಿತ್ರಕಥೆ. ಬೇರೆಯವರ ಭವಿಷ್ಯ ಹೇಳುವ ದರ್ಶನ ಪಾದ್ರಿಯೊಬ್ಬರ ಭವಿಷ್ಯ ಮೊಬೈಲ್‌ನ ಅಡಕತ್ತರಿಯಲ್ಲಿ ಸಿಲುಕಿಕೊಳ್ಳುತ್ತದೆ. ಮುಂದೇನಾಗುತ್ತದೆ ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕು. ಸದ್ಯ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ’ ಎನ್ನುತ್ತಾರೆ ಶಿವಧ್ವಜ್.
‘ಕಾಂತಾರ’ ಖ್ಯಾತಿಯ ಚಂದ್ರಕಲಾ, ಕಾಸರಗೋಡು ಚಿನ್ನ, ಪ್ರಶಾಂತ್ ಕಲ್ಲಡ್ಕ ಮತ್ತಿತರರು ತಾರಾಗಣದಲ್ಲಿದ್ದಾರೆ. ಮಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದ್ದು, ಸಮುದ್ರ ಕೂಡ ಈ ಚಿತ್ರದ ಪ್ರಮುಖ ಪಾತ್ರವಾಗಿದೆ. ಕಳೆದ ವರ್ಷ ‘ಕೊರಮ್ಮ’ ಚಿತ್ರ ನಿರ್ದೇಶಿಸಿ ಅನೇಕ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿದ್ದ ಶಿವಧ್ವಜ್ ನಿರ್ದೇಶನದ 7ನೇ ಚಿತ್ರ ಇದಾಗಿದೆ.
ಪಿಕ್ಚರ್ಸ್ ಸ್ಟುಡಿಯೊ ಅಡಿಯಲ್ಲಿ ಪ್ರಶಾಂತ್ ರೈ ಚಿತ್ರವನ್ನು ನಿರ್ಮಿಸಿದ್ದು, ಸುರೇಶ್ ಬೈರಸಂದ್ರ ಛಾಯಾಚಿತ್ರಗ್ರಹಣ, ಗಣೇಶ್ ನಿರ್ಜಾಲ್ ಸಂಕಲನ, ಸಿನೋಯ್ ವಿ.ಜೋಸೆಫ್ ಹಿನ್ನೆಲೆ ಸಂಗೀತವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.