ನಟ ಸತೀಶ್ ನೀನಾಸಂ ನಾಯಕನಾಗಿ ನಟಿಸಿರುವ ‘ಗೋಧ್ರಾ’ ಸಿನಿಮಾದ ಶೀರ್ಷಿಕೆ ಬದಲಾಯಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿರುವುದು ಹಳೆಯ ಸುದ್ದಿ. ಹೊಸ ಸುದ್ದಿ ಏನೆಂದರೆ, ಇದೀಗ ಈ ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ಬದಲಾಯಿಸಿದ್ದು, ‘ಡಿಯರ್ ವಿಕ್ರಂ’ ಹೆಸರಿನಲ್ಲಿ ಒಟಿಟಿ ವೇದಿಕೆ ವೂಟ್ ಸೆಲೆಕ್ಟ್‌ನಲ್ಲಿ ಇದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
‘ಡಿಯರ್ ವಿಕ್ರಂ’ ಕ್ರಾಂತಿ ಮತ್ತು ಪ್ರೀತಿಯ ಸುತ್ತಲೂ ಹೆಣೆದಿರುವ ಸುಂದರವಾದ ಕಥನ. ಸಿನಿಮಾದ ಪ್ರತಿ ಹೆಜ್ಜೆಯಲ್ಲೂ ಸಮಾಜದ ಹುಳುಕನ್ನು ತೀಕ್ಷ್ಣವಾಗಿ ಪ್ರಶ್ನಿಸುವ ಧೈರ್ಯ ಮಾಡಿದೆ. ಈ ಸಿನಿಮಾ ಪ್ರಸ್ತುತ ರಾಜಕೀಯ ಅರಾಜಕತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದಿದೆ ಚಿತ್ರತಂಡ. ‘ಸಿನಿಮಾದ ಟೈಟಲ್ ವಿಚಾರವಾಗಿ ಒಂದಷ್ಟು ಚರ್ಚೆ ಶುರುವಾಗಿತ್ತು. ಗೋಧ್ರಾದಲ್ಲಿ ನಡೆದ ಘಟನೆಗೂ ನಮ್ಮ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ಯಾವುದೇ ನೈಜ ಘಟನೆ, ಪ್ರದೇಶವನ್ನು ಆಧರಿಸಿದ ಸಿನಿಮಾ ಇದಲ್ಲ. ಹೀಗಾಗಿ ಜನರಲ್ಲಿ ಗೊಂದಲ ಮೂಡಿಸಬಾರದು ಎನ್ನುವ ಕಾರಣಕ್ಕೆ ಸಿನಿಮಾ ಶೀರ್ಷಿಕೆಯನ್ನು ಬದಲಾಯಿಸಲಾಗಿದೆ. ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಿಸುತ್ತೇವೆ’ ಎಂದು ಚಿತ್ರತಂಡ ತಿಳಿಸಿದೆ.
ನಂದೀಶ ನಿರ್ದೇಶನದ ಈ ಚಿತ್ರದಲ್ಲಿ ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ನಾಯಕ- ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ರಕ್ಷಾ ಸೋಮಶೇಖರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು, ಕೆ.ಪಿ ಹಿನ್ನೆಲೆ ಸಂಗೀತವಿದೆ. ಶಶಿಕುಮಾರ್ ಮತ್ತು ಜಾಕೆಬ್ ಕೆ. ಗಣೇಶ್ ಛಾಯಾಗ್ರಹಣ ಚಿತ್ರಕ್ಕಿದೆ.
ಸದ್ಯಕ್ಕೆ ‘ಅಶೋಕ ಬ್ಲೇಡ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಸತೀಶ್ ನೀನಾಸಂ, ಹರಿಪ್ರಿಯಾ ಜೋಡಿಯಾಗಿ ನಟಿಸಿರುವ ‘ಪೆಟ್ರೊಮ್ಯಾಕ್ಸ್’, ರಚಿತಾ ರಾಮ್ ಜೋಡಿಯಾಗಿ ನಟಿಸಿರುವ ‘ಮ್ಯಾಟ್ನಿ’ ಹಾಗೂ ‘ದಸರಾ’ ಸಿನಿಮಾದ ಬಿಡುಗಡೆಗೆ ಎದುರುನೋಡುತ್ತಿದ್ದಾರೆ. ‘ದಸರಾ’ ಚಿತ್ರದಲ್ಲಿ ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸತೀಶ್, ‘ಮ್ಯಾಟ್ನಿ’ಯಲ್ಲಿ ಸ್ಟೈಲಿಶ್ ಪಾತ್ರದಲ್ಲಿರಲಿದ್ದಾರೆ. ‘ಪೆಟ್ರೊಮ್ಯಾಕ್ಸ್’ ನಾಲ್ವರು ಅನಾಥ ಹುಡುಗರ ಕಥೆಯಾಗಿದ್ದು, ಇಲ್ಲಿ ಡೆಲಿವರಿ ಬಾಯ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.