ADVERTISEMENT

‘ಪಂಚತಂತ್ರ’ ಬೆಡಗಿಯ ಪಂಚ ಸಿನಿಮಾಗಳು

ಕೆ.ಎಂ.ಸಂತೋಷಕುಮಾರ್
Published 20 ಆಗಸ್ಟ್ 2020, 19:30 IST
Last Updated 20 ಆಗಸ್ಟ್ 2020, 19:30 IST
ಸೋನಲ್ ಮೊಂತೆರೊ
ಸೋನಲ್ ಮೊಂತೆರೊ   

ಯೋಗರಾಜ್‌ ಭಟ್‌ ನಿರ್ದೇಶನದ ‘ಪಂಚತಂತ್ರ’ ಚಿತ್ರದ ಮೂಲಕ ಕನ್ನಡ ಸಿನಿ ರಸಿಕರಿಗೆ ಪರಿಚಿತರಾದವರು ಸೋನಲ್‌ ಮೊಂತೆರೊ. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ಈ ನಟಿಯ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ.

ಕನ್ನಡ, ತುಳು, ಮರಾಠಿ, ಪಂಜಾಬಿ, ಹಿಂದಿ ಭಾಷೆಗಳಲ್ಲಿ ಸಕ್ರಿಯವಾಗಿರುವ ಬಹುಭಾಷಾ ನಟಿ ಸೋನಲ್‌ ಮೊಂತೆರೊ. ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರೊಂದಿಗೆ ಈ ಸುಂದರಿ ತೆರೆ ಹಂಚಿಕೊಂಡಿದ್ದಾರೆ. ಈಕೆ ಅಭಿನಯಿಸಿರುವ ಬಹುನಿರೀಕ್ಷೆಯ ‘ರಾಬರ್ಟ್‌’ ಮತ್ತು ‘ಬುದ್ಧಿವಂತ 2’ ಚಿತ್ರಗಳು ಬಿಡುಗಡೆಯ ಹೊಸ್ತಿಲಿನಲ್ಲಿವೆ.

2020ರಲ್ಲಿಭರಪೂರ ಫಸಲು ತೆಗೆಯುವ ನಿರೀಕ್ಷೆಯಲ್ಲಿದ್ದರು ನಟಿ ಸೋನಲ್‌ ಮೊಂತೆರೊ. ಇವರು ನಟಿಸಿರುವ ಪಂಚ ಸಿನಿಮಾಗಳು ಈ ವರ್ಷ ತೆರೆ ಕಾಣುವ ನಿರೀಕ್ಷೆಯಲ್ಲಿದ್ದವು. ಆದರೆ, ಕೋವಿಡ್‌ –19 ಆ ನಿರೀಕ್ಷೆಯನ್ನು ಒಂದು ವರ್ಷ ಮುಂದಕ್ಕೆ ತಳ್ಳಿಬಿಟ್ಟಿದೆ.

ADVERTISEMENT

‌ದರ್ಶನ್‌ ನಾಯಕನಾಗಿರುವ ‘ರಾಬರ್ಟ್’, ಉಪೇಂದ್ರ ನಾಯಕನಾಗಿರುವ ‘ಬುದ್ಧಿವಂತ 2’ ಹಾಗೂ ‘ಬನಾರಸ್’, ‌‘ತಲವಾರ್‌ಪೇಟೆ‘, ‘ಮಿಸ್ಟರ್‌ ನಟವಟರಲಾಲ್’ ಚಿತ್ರಗಳಲ್ಲಿ ಸೋನಲ್‌ ಅಭಿನಯಿಸುತ್ತಿದ್ದಾರೆ. ಇದರ ಜತೆಗೆಶಂಕರ್‌ ನಿರ್ದೇಶನದನಾಯಕಿ ಪ್ರಧಾನ ಚಿತ್ರವೊಂದಕ್ಕೆ ಇತ್ತೀಚೆಗಷ್ಟೇ ಸಹಿ ಹಾಕಿದ್ದಾರೆ. ಈ ಚಿತ್ರಕ್ಕೆ ಇನ್ನೂ ಟೈಟಲ್‌ ಅಂತಿಮವಾಗಿಲ್ಲ, ಇದು 2021ರಲ್ಲಿ ಸೆಟ್ಟೇರಲಿದೆ.

ಈ ಸಂದರ್ಭದಲ್ಲಿ ತಮ್ಮ ಸಿನಿಪಯಣದ ಕುರಿತು ಹಲವು ಸಂಗತಿಗಳನ್ನು ಅವರು ‘ಪ್ರಜಾಪ್ಲಸ್‌’ ಜತೆಗೆ ಹಂಚಿಕೊಂಡಿದ್ದಾರೆ.

‘ನೀವು ನಿಭಾಯಿಸುತ್ತಿರುವ ಪಾತ್ರಗಳು ಹೇಗಿವೆ’ ಎಂಬ ಪ್ರಶ್ನೆ ಎದುರಿಗೆ ಇಟ್ಟಾಗ, ‘ನಾನು ಮೊದಲು ಚಿತ್ರಒಪ್ಪಿಕೊಳ್ಳುವುದು ಪಾತ್ರಗಳಲ್ಲಿನ ಮಹತ್ವ ನೋಡಿಯೇ. ಕೈಯಲ್ಲಿರುವ ಚಿತ್ರಗಳಲ್ಲಿನ ಒಂದೊಂದು ಪಾತ್ರವೂ ವಿಭಿನ್ನವಾಗಿವೆ. ‘ಬುದ್ಧಿವಂತ 2’ ಚಿತ್ರದಲ್ಲಿ ಮಾಡರ್ನ್‌ ಮತ್ತು ಬೋಲ್ಡ್‌ ಹುಡುಗಿಯ ಪಾತ್ರ. ‘ಬನಾರಸ್’ ಚಿತ್ರದಲ್ಲಿ ಹಾಡುಗಾರ್ತಿ. ಇದಂತೂ ತುಂಬಾ ಮುದ್ದಾದ ಪಾತ್ರ. ಕಾಸ್ಟ್ಯೂಮ್‌, ಹೇರ್‌ಸ್ಟೈಲ್‌, ಮೇಕಪ್‌ ಎಲ್ಲವೂ ಒಬ್ಬ ಮುಗ್ಧ ಹುಡುಗಿಯ ನೋಟ ಕಟ್ಟಿಕೊಡಲಿದೆ. ‘ತಲವಾರ್‌ ಪೇಟೆ’ಯಲ್ಲಿ ಪಕ್ಕಾ ಹಳ್ಳಿ ಹುಡುಗಿ ಪಾತ್ರ. ಲಂಗ ಮತ್ತು ದಾವಣಿಯಲ್ಲಿ ಕಾಣಿಸಿರುವೆ. ಇನ್ನು ‘ರಾಬರ್ಟ್’‌ ಚಿತ್ರದಲ್ಲಿನ ನನ್ನ ಪಾತ್ರ ಸಸ್ಪೆನ್ಸ್. ಆಶಾಭಟ್‌, ನಾನು, ಐಶ್ವರ್ಯಾ ಪ್ರಸಾದ್‌, ತೇಜಸ್ವಿನಿ ಪ್ರಕಾಶ್‌ ಹೀಗೆ ನಾಲ್ವರು ಹುಡುಗಿಯರು ಇದ್ದೇವೆ. ಈ ಚಿತ್ರದಲ್ಲಿನ ನನ್ನ ಪಾತ್ರದ ಬಗ್ಗೆ ಎಲ್ಲಿಯೂ ರಿವೀಲ್‌ ಮಾಡುವಂತಿಲ್ಲ. ಇದು ನಿರ್ದೇಶಕ ತರುಣ್‌ ಸರ್‌ ಕಟ್ಟಪ್ಪಣೆ ಕೂಡ’ ಎಂದು ಸೋನಲ್‌ ನಗು ಚೆಲ್ಲಿದರು.

‘ಐದೂ ಚಿತ್ರಗಳು ಬಹುತೇಕ ಪೂರ್ಣಗೊಂಡಿವೆ. ‘ಬನಾರಸ್’ ಚಿತ್ರದ ಹಾಡಷ್ಟೇ ಬಾಕಿ ಇದೆ. ‘ತಲವಾರ್ ‌ಪೇಟೆ’ಯ ಮಾತಿನ ಭಾಗದ ಚಿತ್ರೀಕರಣ ಬಾಕಿ ಇದೆ. ‘ಮಿಸ್ಟರ್‌ ನಟವರ ಲಾಲ್’‌ ಚಿತ್ರದಲ್ಲಿ ಒಂದೆರಡು ದಿನಗಳ ಕೆಲಸವಷ್ಟೇ ಬಾಕಿ ಇದೆ’ ಎನ್ನುವ ಮಾತು ಸೇರಿಸಿದರು.

‘ಈವರೆಗಿನ ಸಿನಿಮಾ ಪಯಣ ಹೇಗಿತ್ತು?’ ಎಂದರೆ, ‘ತುಂಬಾ ಅದ್ಭುತವಾಗಿತ್ತು.‘ಎಕ್ಕ ಸಕ’ ತುಳು ಚಿತ್ರ ನನ್ನ ಮೊದಲ ಚಿತ್ರ. ಇದು ತುಳುನಾಡಿನಲ್ಲಿ 125 ದಿನಗಳ ಕಾಲ ಪ್ರದರ್ಶನ ಕಂಡು, ಬ್ಲಾಕ್‌ ಬಸ್ಟರ್‌ ಚಿತ್ರ ಎನಿಸಿಕೊಂಡಿತು. ಈ ಚಿತ್ರದ ಸಹ ನಿರ್ದೇಶಕರು ನನ್ನನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದರು. ಅಭಿಸಾರಿಕೆ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ನಂತರ ‘ಎಂಎಲ್‌ಎ’, ‘ಮದುವೆ ದಿಬ್ಬಣ’ ಚಿತ್ರಗಳಲ್ಲಿ ನಟಿಸಿದೆ’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

‘ಆರಂಭದಲ್ಲಿ ನಾನು ಒಂದು ಸಿನಿಮಾದಲ್ಲಿ ಮಾತ್ರ ನಟಿಸುವುದಾಗಿ ನನ್ನ ತಾಯಿಗೆ ಹೇಳಿದ್ದೇ. ನನ್ನ ತಾಯಿಗೆ ಅವರು ಸಿನಿಮಾ ನಟಿ ಆಗುವ ಕನಸಿತ್ತಂತೆ. ಆದರೆ ಅವರಮ್ಮ ಮಗಳನ್ನು ಚಿತ್ರರಂಗಕ್ಕೆ ಕಳುಹಿಸಲು ಇಷ್ಟವಿಲ್ಲದೆ, ಬೇಗ ಮದುವೆ ಮಾಡಿದರಂತೆ. ಆಗ ನಮ್ಮ ಅಮ್ಮ ಅವರ ಅಮ್ಮನಿಗೆ ‘ನನಗೆ ಮಗ ಅಥವಾ ಮಗಳು ಯಾರೇ ಹುಟ್ಟಿದರೂ ಅವರಲ್ಲಿ ಒಬ್ಬರನ್ನಾದರೂ ಸಿನಿಮಾರಂಗಕ್ಕೆ ಕಳುಹಿಸುವೆ’ ಎಂದಿದ್ದರಂತೆ. ನಾವು ಮೂವರು ಹೆಣ್ಣು ಮಕ್ಕಳು. ಇಬ್ಬರು ಅಕ್ಕಂದಿರು ಇದ್ದಾರೆ. ನಾನು ಅಮ್ಮನ ಒತ್ತಾಸೆಯಂತೆ ಸಿನಿಮಾ ರಂಗಕ್ಕೆ ಬಂದಿರುವೆ’ ಎನ್ನಲು ಮರೆಯಲಿಲ್ಲ.

ವೃತ್ತಿ ಬದುಕಿಗೆ ತಿರುವ ಕೊಟ್ಟ ಚಿತ್ರದ ಬಗ್ಗೆ ಮಾತು ಹೊರಳಿದಾಗ, ‘ಎಲ್ಲರ ಬದುಕಿನಲ್ಲಿ ಇರುವಂತೆ ಏರಿಳಿತಗಳು ನನಗೂ ಇದ್ದವು. ಒಂದೇ ಬಾರಿಗೆ ಯಶಸ್ಸು ಕಾಣಲಿಲ್ಲ. ಹಾಗೆ ನೋಡಿದರೆ, ಯೋಗರಾಜ್‌ ಭಟ್‌ ಅವರ ನಿರ್ದೇಶನದ ‘ಪಂಚತಂತ್ರ’ ಚಿತ್ರವೇ ನನಗೆ ನಿಜವಾದ ಬ್ರೇಕ್‌ ನೀಡಿದ್ದು. ಆ ಚಿತ್ರದಲ್ಲಿ ‘ಸಾಹಿತ್ಯ’ ಪಾತ್ರ ಕನ್ನಡ ಸಿನಿ ರಸಿಕರಿಗೆ ಸೋನಲ್‌ ಮೊಂಟೆರೊ ಯಾರೆನ್ನುವುದನ್ನು ಪರಿಚಯಿಸಿತು. ಬಹಳಷ್ಟು ಮಂದಿಗೆ ಸೋನಲ್‌ ಮೊಂತೆರೊ ಹೆಸರಿಗಿಂತ ಸಾಹಿತ್ಯ ಹೆಸರೇ ನೆನಪಿನಲ್ಲಿ ಅಚ್ಚಾಗಿದೆ. ಈ ಚಿತ್ರದ ‘ಶೃಂಗಾರದ ಹೊಂಗೆ ಮರ’ ಹಾಡು ಕೂಡ ಹಿಟ್‌ ಆಯಿತು. ಇವತ್ತಿಗೂ ಅಭಿಮಾನಿಗಳು ಈ ಚಿತ್ರದ ಬಗ್ಗೆ ನನ್ನೊಂದಿಗೆ ಪ್ರಸ್ತಾಪಿಸುತ್ತಾರೆ. ಇದು ನನ್ನ ಚಿತ್ರಬದುಕಿನಲ್ಲಿ ತಿರುವು ನೀಡಿದ ಮಹತ್ವದ ಚಿತ್ರ. ಇದರಿಂದಲೇ ಇಂದು ಕನ್ನಡದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಅವಕಾಶವೂ ಸಿಕ್ಕಿರುವ ಹೆಮ್ಮೆ ಮತ್ತು ಖುಷಿ ಇದೆ’ ಎನ್ನುವುದು ಅವರ ಅಭಿಮಾನದ ನುಡಿ.

ಬಾಲಿವುಡ್‌ಗೆ ಜಿಗಿಯುತ್ತಿರುವ ಬಗ್ಗೆ ಏನನಿಸುತ್ತದೆ ಎನ್ನುವ ಪ್ರಶ್ನೆಗೂ ಅಷ್ಟೇ ವಿನಮ್ರವಾಗಿ ಕನ್ನಡದ ಮೇಲೆ ಅಭಿಮಾನ ವ್ಯಕ್ತಪಡಿಸುವ ಸೋನಲ್‌, ‘ಗೋವಿಂದ, ಕರೀಷ್ಮಾ ಮತ್ತು ಟಬು ಅಭಿನಯದ ಸೂಪರ್ ಹಿಟ್ ಸಿನಿಮಾ 'ಸಾಜನ್ ಚಲೇ ಸಸುರಾಲ್' ಚಿತ್ರದ ಮುಂದುವರಿದ ಭಾಗ 'ಸಾಜನ್ ಚಲೇ ಸಸುರಾಲ್ 2' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ತುಂಬಾ ಖುಷಿ ನೀಡಿದೆ. ನನ್ನ ಬೇರು ತುಳು ಸಿನಿಮಾ ರಂಗದಲ್ಲಿದೆ. ಅದನ್ನೂ ಮರೆಯುವುದಿಲ್ಲ. ಬಾಲಿವುಡ್‌ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ ತಕ್ಷಣ ಕನ್ನಡ ಸಿನಿಮಾ ರಂಗ ಬಿಟ್ಟು ಹೋಗುವುದಿಲ್ಲ. ‘ರಾಬರ್ಟ್’‌ ಮತ್ತು ‘ಬುದ್ಧಿವಂತ 2’ ಸಿನಿಮಾ ಬಿಡುಗಡೆಯಾದ ನಂತರ ನನಗೂ ನನ್ನ ವೃತ್ತಿಬದುಕಿನಲ್ಲಿ ಉತ್ತುಂಗದ ಕಾಲ ಬರಲಿದೆ’ ಎನ್ನುವ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ತೆಲುಗು ಮತ್ತು ತಮಿಳಿನಿಂದಲೂ ಅವಕಾಶಗಳು ಅರಸಿ ಬರುತ್ತಿವೆ. ನಾನು ಯಾವುದೇ ಭಾಷೆಯ ಚಿತ್ರರಂಗಕ್ಕೆ ಹೋದರೂ ಅಲ್ಲಿ ಅಂಟಿಕೊಳ್ಳುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ನನಗೆ ಸಾಕಷ್ಟು ಅವಕಾಶಗಳಿವೆ. ಕನ್ನಡ ಸಿನಿರಸಿಕರು ನನಗೆ ಅಪಾರ ಪ್ರೀತಿ– ಅಭಿಮಾನ ತೋರಿಸಿದ್ದಾರೆ. ಕನ್ನಡ ಚಿತ್ರರಂಗದ ಮೇಲಷ್ಟೇ ನನ್ನ ಗಮನ ಕೇಂದ್ರೀಕರಿಸಿದ್ದೇನೆ. ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಾಗಲೂ ತುಂಬಾ ಚ್ಯೂಸಿ. ತಲವಾರ್‌ಪೇಟೆ ಚಿತ್ರದಲ್ಲಿ ನನ್ನ ಪಾತ್ರ ಮತ್ತು ಲುಕ್‌, ‘ರಂಗಸ್ಥಳಂ’ ಚಿತ್ರದಲ್ಲಿನ ಸಮಂತಾ ಅಕ್ಕಿನೇನಿಯನ್ನು ನೆನಪಿಸಲಿದೆ. ಬಾಲಿವುಡ್‌ ತಾರೆ ಶ್ರೀದೇವಿಯವರ ಮಟ್ಟಕ್ಕೆ ಏರಲು ಆಗದು. ಆದರೆ, ಅವರು ಮಾಡುತ್ತಿದ್ದಂತಹ ಪಾತ್ರಗಳನ್ನು ಮಾಡುವ ಆಸೆಗಳು ತುಂಬಾ ಇವೆ.ನಾವು ಮಾಡುವ ಪಾತ್ರಗಳು ಪ್ರೇಕ್ಷಕರ ಹೃದಯ ತಟ್ಟುವಂತೆ ಇರಬೇಕು. ‘ಸದ್ಮ’ ಚಿತ್ರದಲ್ಲಿ ಶ್ರೀದೇವಿ ಅವರು ನಿಭಾಯಿಸಿರುವಂತಹ ಪಾತ್ರದಲ್ಲಿಒಮ್ಮೆಯಾದರೂ ನಟಿಸಬೇಕೆನ್ನುವ ಹಂಬಲವಿದೆ. ‌’ ಎನ್ನಲು ಸೋನಲ್‌ ಮರೆಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.