ಟಿ.ವಿ. ನಿರೂಪಕಿಯಾಗಿದ್ದವರು ಸಾಧನೆಯ ಹಂಬಲದಿಂದ ಮುನ್ನುಗ್ಗಿದರು. ಒಂದಿಷ್ಟು ಕಷ್ಟಪಟ್ಟರು. ಮಾಡೆಲಿಂಗ್, ನಟನೆ, ಸಾಕ್ಷ್ಯಚಿತ್ರ ನಿರ್ಮಾಣ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರು. ಈಗ ಪಕ್ಕಾ ಪಳಗಿದ ನಟಿ, ನಿರ್ದೇಶಕಿಯಾಗಿ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ ಶೀತಲ್ ಶೆಟ್ಟಿ. ಅವರ ನಿರ್ದೇಶನದ ‘ವಿಂಡೋ ಸೀಟ್’, ನಟನೆಯ ‘ಚೇಸ್’ ಚಿತ್ರ ತೆರೆ ಕಾಣುತ್ತಿರುವ ಹೊತ್ತಿನಲ್ಲಿ ಒಂದಿಷ್ಟು ಮಾತುಕತೆ.
ಕಥೆ ಹೇಳಬೇಕು ಎಂದು ಅನಿಸಿದ್ದು ಏಕೆ?
ಪ್ರತಿಯೊಬ್ಬರಲ್ಲೂ ಕಥೆ ಇರುತ್ತದೆ. ಹೇಳಿಕೊಳ್ಳದಿರಬಹುದು ಅಷ್ಟೆ. ಆದರೆ ಹೇಳಬೇಕು ಎಂಬ ತುಡಿತ, ಆಶಯ ಇದ್ದೇ ಇರುತ್ತದೆ. ನನಗೂ ಒಂದೊಳ್ಳೆಯ ಕಥೆಯನ್ನು ಹೇಳುವುದು ಇಷ್ಟ. ಪ್ರತಿಯೊಬ್ಬರೂ ಹೇಳುವ ರೀತಿ ಬೇರೆ ಬೇರೆಯೇ ಇರುತ್ತದೆ. ಒಳ್ಳೆಯ ಕಥೆ ಹೇಳಲು ನನ್ನ ಸಿದ್ಧತೆ ಇದ್ದೇ ಇದೆ. ಆ ತುಡಿತದ ಫಲವೇ ಈಗ ನಿರ್ದೇಶನದವರೆಗೆ ಕರೆತಂದಿದೆ.
ಎಂಥ ವಸ್ತು (ಕಂಟೆಂಟ್) ಕೊಡಬೇಕು ಎಂಬುದು ನಿಮ್ಮ ಆಸೆ?
ನಾನು ಇಂಥದ್ದೇ ಶೈಲಿ ಎಂದು ಅನುಸರಿಸುವವಳಲ್ಲ. ಇದುವರೆಗೆ ಮಾಡಿದ ಡಾರ್ಕ್ ಝೋನ್‌ನಿಂದ ಹೊರಬರಬೇಕು. ಲಘು, ಹಾಸ್ಯ, ಕುತೂಹಲಕಾರಿ ವಿಷಯಗಳನ್ನು ಕೊಡಬೇಕು. ನೋಡೋಣ, ಯಾವುದಕ್ಕೂ ಪ್ರೇಕ್ಷಕನ ನಾಡಿಮಿಡಿತ ತಿಳಿಯಬೇಕು. ಅದರ ಮೇಲೆ ನನ್ನದೇ ಆದ ಶೈಲಿಯನ್ನು ರೂಪಿಸಬಹುದು.
ಕಥೆ ಹೇಳುವಲ್ಲಿ ನಿಮ್ಮ ಬಾಲ್ಯದ ಪ್ರಭಾವ?
ಖಂಡಿತವಾಗಿಯೂ ಇದೆ. ಸಾಗರದಲ್ಲಿ ಕಳೆದ ಬಾಲ್ಯ, ಬ್ರಹ್ಮಾವರದಲ್ಲಿ ಕಳೆದ ಹೈಸ್ಕೂಲ್ ದಿನಗಳು, ಇವೆಲ್ಲವೂ ಪ್ರಭಾವ ಬೀರಿವೆ. ಆದರೆ, ಸಿನಿಮಾ ವಿಚಾರಕ್ಕೆ ಬಂದಾಗ ವಸ್ತು ಏನನ್ನು ಕೇಳುತ್ತದೋ ಆ ರೀತಿ ಕಥೆ ಹೊಸೆಯಬೇಕಾಗುತ್ತದೆ.
ಶೂಟಿಂಗ್ ಸಮಯದ ಅನುಭವ?
ಅದ್ಭುತವಾಗಿತ್ತು. ಸಾಗರ ನನ್ನ ಬಾಲ್ಯ ಕಳೆದ ಊರು. ರೈಲು ಅಂದಾಕ್ಷಣ ನೆನಪಾಗುವುದೇ ತಾಳಗುಪ್ಪ ರೈಲು ನಿಲ್ದಾಣ. ನಾನು ಮೊದಲು ರೈಲು ಯಾನ ಮಾಡಿದ್ದೇ ಅಲ್ಲಿಂದ. ಅಲ್ಲಿನ ಖುಷಿಯ ಕ್ಷಣಗಳು ಸಾಕಷ್ಟಿವೆ. ಶೂಟಿಂಗ್ ಸಮಯದಲ್ಲಿ ಜನ ತಮ್ಮೂರಿನ ಹುಡುಗಿ ಎಂಬ ಪ್ರೀತಿ, ಅಭಿಮಾನದಿಂದ ನೋಡಿದರು. ಅಪ್ಪನ ಹೆಸರೂ ಅಲ್ಲಿ ಚಾಲ್ತಿಯಲ್ಲಿತ್ತಲ್ಲಾ. ಹಾಗಾಗಿ ಎಲ್ಲವೂ ಸುಗಮವಾಯಿತು.
ಕೆಲಕಾಲ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿರಾ?
ಹಾಗೇನಿಲ್ಲ. ಒಂದೆಡೆ ನನ್ನ ಕಂಪನಿಯ (ಮೀಡಿಯಾ ಮನೆ– ಕಿರುಚಿತ್ರ, ಜಾಹೀರಾತು ನಿರ್ಮಾಣ ಸಂಸ್ಥೆ) ಕೆಲಸಗಳೂ ನಡೆಯುತ್ತಿದ್ದವು. ಅದರ ಜೊತೆಗೆ ಸಿನಿಮಾ ಕೆಲಸ ಮಾಡಬೇಕಿತ್ತು. ಎರಡನ್ನೂ ನಿಭಾಯಿಸಬೇಕಲ್ಲಾ? ಇನ್ನೂ ಹೇಳಬೇಕೆಂದರೆ ನನಗೆ ಬರುವ ಪಾತ್ರಗಳೂ ಅಂಥದ್ದೇ ಇದ್ದವು. ಪತ್ರಕರ್ತೆ, ಡಾಕ್ಟರ್, ಐಎಎಸ್ ಅಧಿಕಾರಿ ಇಂಥವು. ಒಂದು ರೀತಿ ಏಕತಾನತೆ ಅನಿಸಿತ್ತು. ಅಫ್‌ಕೋರ್ಸ್, ಅವು ತುಂಬಾ ಗೌರವಯುತವಾಗಿ ಕಾಣಿಸುವ ಪಾತ್ರಗಳೇ ಹೌದು. ಆದರೆ, ನನ್ನೊಳಗಿರುವ ಹೊಸತನದ ತುಡಿತಕ್ಕೆ ಇನ್ನೇನೋ ಬೇಕು ಅನಿಸುತ್ತಿತ್ತು. ಈಗ ನೋಡಿ ನಿರ್ದೇಶನ ಹಾಗೂ ನಟನೆಯ ಅವಕಾಶ ಒಟ್ಟಿಗೇ ಬಂದಿದೆ. ಹಾಗಾಗಿ ನಾನು ತುಂಬಾ ಅದೃಷ್ಟವಂತೆ.
‘ಚೇಸ್’ ಸಿನಿಮಾ ಬಗ್ಗೆ?
‘ಚೇಸ್’ ಸಿನಿಮಾವನ್ನು ನಿರ್ದೇಶಕ ವಿಲೋಕ್ ಶೆಟ್ಟಿ ಅವರು ತುಂಬಾ ಆಸ್ಥೆಯಿಂದ ಮಾಡಿದ್ದಾರೆ. ಹಾಡುಗಳೂ ತುಂಬಾ ಚೆನ್ನಾಗಿವೆ. ಟೀಸರ್‌ಗೆ ತುಂಬಾ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಕುತೂಹಲಕಾರಿ ಕಥಾ ಹಂದರದ ಚಿತ್ರವದು. ನನ್ನ ಪಾತ್ರ ಏನು ಎಂಬುದನ್ನು ತೆರೆಯ ಮೇಲೆ ನೋಡಬೇಕು. ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ಒಂದು ಭಿನ್ನ ಮಾದರಿಯ ಸಿನಿಮಾ ಎಂದು ಹೇಳಬಲ್ಲೆ.
ಏನಿದು ‘ವಿಂಡೋ ಸೀಟ್’?
ಕಥೆಕಾಲ್ಪನಿಕ ಆದರೂ ಅದರಲ್ಲೊಂದು ತರ್ಕವನ್ನು ಕೊಟ್ಟಿದ್ದೇವೆ. ರೈಲಿನ ಕಿಟಕಿ ಸೀಟನ್ನೇ ವಸ್ತುವಾಗಿಟ್ಟುಕೊಂಡು ಒಂದಿಷ್ಟು ಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟರಿ ಕೊಟ್ಟಿದ್ದೇವೆ. ಸಹಜವಾಗಿ ಒಂದಿಷ್ಟು ಕಮರ್ಷಿಯಲ್ ಅಂಶಗಳನ್ನೂ ಸೇರಿಸಿದ್ದೇವೆ. ಮೊದಲ ಪ್ರಯತ್ನ. ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ನನ್ನದು. ನೋಡಿದವರು ಇನ್ನೊಮ್ಮೆ ತಿರುಗಿ ನೋಡಬೇಕು. ಇದರ ಫಲಿತಾಂಶ ನೋಡಿಕೊಂಡು ಪ್ರೇಕ್ಷಕನಿಗೆ ಎಂತಹಕಥೆಬೇಕು ಎನ್ನುವುದನ್ನು ತಿಳಿದುಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.