ಹಾದಿ–ಬೀದಿಯಲ್ಲಿ ರಾರಾಜಿಸುವ ಅಪ್ಪು ನೆನಪಿನ ಬ್ಯಾನರ್–ಭಾವಚಿತ್ರ, ವೃತ್ತ ವೃತ್ತಗಳಿಗೂ ಅವರ ಹೆಸರಿನದೇ ನಾಮಕರಣ, ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲೂ ಅವರ ಚಿತ್ರದ ‘ಬೊಂಬೆ ಹೇಳುತೈತೆ...’ ಹಾಡು!
ದಿವಂಗತ ಪುನೀತ್ ರಾಜ್‌ಕುಮಾರ್ ಅವರು ಜನರ ಮಧ್ಯೆ ಈಗಲೂ ಬದುಕಿರುವ ರೀತಿ ಇದು. ನಟನೊಬ್ಬ ಭೌತಿಕವಾಗಿ ಇಲ್ಲವಾದ ಮೇಲೂ ಸಿಕ್ಕ ಗೌರವ ಇದು.ನಗರ ಪ್ರದೇಶಗಳಲ್ಲಿ ಅಪ್ಪು ಈ ರೀತಿಯ ಟ್ರೆಂಡ್ ಸೃಷ್ಟಿಸಿದರು. ಟಿ–ಶರ್ಟ್, ಡೈರಿ, ನೋಟ್‌ಬುಕ್ ಕವರ್, ಮೊಬೈಲ್ ಕವರ್‌ಗಳಲ್ಲೂ ಪುನೀತ್ ಅಚ್ಚಾದರು.
ಗ್ರಾಮೀಣ ಪ್ರದೇಶಗಳಲ್ಲಿ ಬೀದಿ, ವೃತ್ತಕ್ಕೆ ಅಪ್ಪು ಹೆಸರಿಟ್ಟಿದ್ದೂ ಆಯಿತು. ಪುನೀತ್ ನೆನಪಿನ ಆಡಿಯೊ, ವಿಡಿಯೊಗಳಿಗಂತೂ ಲೆಕ್ಕವೇ ಇಲ್ಲ.
ಕತ್ತಲಾವರಿಸುವ ಚಿತ್ರಮಂದಿರದ ಪರದೆಗಳಲ್ಲಿ ಕನ್ನಡ ಚಿತ್ರ ಆರಂಭಕ್ಕೂ ಮುನ್ನ ಅಪ್ಪು ಬಿಂಬದ ಬೆಳಕು ಸಿಗ್ನೇಚರ್ ಎಂಬಂತೆ ಬಂದು ಹಾದು ಹೋಗುತ್ತದೆ.ಪ್ರತೀ ಕನ್ನಡ ಚಿತ್ರದ ಟ್ರೇಲರ್, ಟೀಸರ್, ಟೈಟಲ್ ಕಾರ್ಡ್‌ಗಳಲ್ಲಿ ಅಪ್ಪು ಇದ್ದಾರೆ.
ಜನ್ಮದಿನದ ಸಂದರ್ಭದಲ್ಲಿ ಅಪ್ಪು ನೆನಪನ್ನು ಇನ್ನಷ್ಟು ವರ್ಣಮಯವಾಗಿಸುವ ಪ್ರಯತ್ನ ಸಾಗಿದೆ. ಅದಕ್ಕಾಗಿ ಅಭಿಮಾನಿಗಳು ಮತ್ತೆ ಸಿದ್ಧರಾಗಿದ್ದಾರೆ. ಅವರ ಅಭಿನಯದ ‘ಜೇಮ್ಸ್’ಗೆ ಭರ್ಜರಿ ಸ್ವಾಗತ ನೀಡುತ್ತಿದ್ದಾರೆ. ಅವರ ನೆನಪಲ್ಲಿ ದಾಸೋಹಗಳು ಸಹ ನಡೆಯುತ್ತಿವೆ.
ವೃತ್ತಿಗಿಂತಲೂ ವ್ಯಕ್ತಿತ್ವ ಮೇಲು. ಬದುಕಿದ ರೀತಿ ಮಹತ್ವದ್ದು ಎಂಬುದನ್ನು ಡಾ.ರಾಜ್‌ಕುಮಾರ್ ಅವರ ಬಳಿಕ ಪುನೀತ್ ರಾಜ್‌ಕುಮಾರ್ ನಿರೂಪಿಸಿದರು.
ಬದಲಾವಣೆಗೊಂದು ಸ್ಫೂರ್ತಿ: ಹೌದಲ್ವಾ, ನಾವೂ ಈ ರೀತಿ ಬದುಕಿ ತೋರಿಸಬಹುದಲ್ವಾ ಎಂದು ಅದೆಷ್ಟೋ ಮನಸ್ಸುಗಳು ಪುನೀತ್ ಹಾದಿಯನ್ನು ತಮ್ಮ ಬದುಕಿನಲ್ಲಿ ಅವರವರ ಮಟ್ಟದಲ್ಲಿ ಅನುಸರಿಸಲು ಯತ್ನಿಸಿದ್ದೂ ಇದೆ. ದಾನದ ಮಹತ್ವವನ್ನು ಹಿರಿಮನಸ್ಸುಗಳು ಅರ್ಥೈಸಿ ಪುನೀತ್ ಉದಾಹರಣೆಯನ್ನು ಕಿರಿಯರಿಗೆ ಕೊಟ್ಟದ್ದೂ ಇದೆ.
ಈ ಬೆಳವಣಿಗೆ ನೋಡಿದ ದಕ್ಷಿಣ ಭಾರತದ ಚಿತ್ರರಂಗದ ಖ್ಯಾತನಾಮರು ಅಪ್ಪು ಕಾರ್ಯಗಳನ್ನು ಮುಂದುವರಿಸಲು ಕೈಜೋಡಿಸಲು ಮುಂದಾದದ್ದು ಮಹತ್ತರ ಬದಲಾವಣೆಯೇ. ಪುನೀತ್ ಬದುಕಿನ ಸರಳತೆಯೂ ಇತರರಿಗೆ ಮಾದರಿಯಾಯಿತು. ಉದಾಹರಣೆಗೆ ಹೆದ್ದಾರಿ ಬದಿಗಳ ಅದೆಷ್ಟೋ ಹೋಟೆಲ್, ಡಾಬಾಗಳು ಪುನೀತ್ ಅವರ ಹೆಸರಿಟ್ಟುಕೊಂಡಿವೆ. ಅದು ಪುಟ್ಟ ಚಹದಂಗಡಿಯೇ ಇರಲಿ, ಹಳ್ಳಿಯೊಂದರ ಮಿಲ್ಟ್ರಿ ಹೋಟೆಲೇ ಆಗಿರಲಿ. ಅಪ್ಪು ಅಲ್ಲಿಗೆ ಹೋಗಿ ರುಚಿ ಸವಿದಿದ್ದಾರೆ. ಆ ಬಳಿಕ ಆ ಹೋಟೆಲ್ ಮಾಲೀಕರ ಅದೃಷ್ಟ ಖುಲಾಯಿಸಿದ್ದೂ ಇದೆ. ಪುಟ್ಟ ಹೋಟೆಲ್ ಮಾಲೀಕನಿಗೆ ದೊಡ್ಡ ನಟರನ್ನು ಕರೆಸಿ ಫೋಟೊ ತೆಗೆಸಿಕೊಳ್ಳುವುದು ಸರಳ ಸಂಗತಿ ಅಲ್ಲ. ಆದರೆ ಪುನೀತ್ ಅದನ್ನು ಸಾಧ್ಯವಾಗಿಸಿಕೊಟ್ಟರು.
ಅಪ್ಪು ಅಗಲಿಕೆಯ ನಂತರ ಇಂಥ ಹೋಟೆಲ್‌ಗಳಿಗೆ ಅಸಂಖ್ಯ ಯುಟ್ಯೂಬರ್‌ಗಳು ಭೇಟಿ ನೀಡಿ ಆಯಾ ಹೋಟೆಲ್‌ನ (ಅದರಲ್ಲೂ ಬಾಡೂಟ) ಖಾದ್ಯಗಳ ಕುರಿತು ವಿಡಿಯೊ ಮಾಡಿದರು. ಮತ್ತೆ ಅಪ್ಪು– ಹೋಟೆಲ್‌ಗಳು ಟ್ರೆಂಡ್ ಆದವು.
ಜಿಮ್‌ಗಳಲ್ಲೂ ಪುನೀತ್ ಮೈಕಟ್ಟು, ಬ್ಯಾಕ್‌ಫ್ಲಿಪ್ ಭಂಗಿಗಳು ಪೋಸ್ಟರ್ ರೂಪ ಪಡೆದು ರಾರಾಜಿಸಿದವು. ಹೀಗೆ ಅಲ್ಲಿಯೂ ಒಂದಿಷ್ಟು ಆರೋಗ್ಯ ಕಾಳಜಿಯ ಬದಲಾವಣೆಗಳು ನಡೆದವು. ಕ್ರೀಡಾಳುಗಳು ಮ್ಯಾರಾಥಾನ್ ನಡೆಸಿದ್ದು, ಕಾಲ್ನಡಿಗೆಯಲ್ಲಿ ಬಂದದ್ದು ಅಪ್ಪು ಮೇಲಿನ ಎಲ್ಲೆ ಮೀರಿದ ಅಭಿಮಾನಕ್ಕೆ ಸಾಕ್ಷಿ.
ಕನ್ನಡದ ಕೋಟ್ಯಧಿಪತಿಯಂತಹ ಕಾರ್ಯಕ್ರಮ ಒಂದು ರಿಯಾಲಿಟಿ ಷೋ ಆಗಿಯಷ್ಟೇ ಸೀಮಿತವಾಗಲಿಲ್ಲ. ಬದಲಾಗಿ ಅದನ್ನು ನಡೆಸಿಕೊಡುತ್ತಿದ್ದ ಅಪ್ಪು ಅವರು ಅರ್ಹರಿಗೆ ಕಾರ್ಯಕ್ರಮದ ಪ್ರತಿಫಲ ಸಿಗುವಂತೆ ನೋಡಿಕೊಂಡರು. ಒಬ್ಬ ನಿರೂಪಕನನ್ನು ಮೀರಿದ ವ್ಯಕ್ತಿಯಾದರು.
ಸಂಚಾರ ಸುರಕ್ಷತೆಯ ಜಾಗೃತಿ ಮೂಡಿಸಿದ್ದ ಅಪ್ಪು ಅವರ ಹೇಳಿಕೆ ಅವರ ಜನ್ಮದಿನದ ಸಂದರ್ಭ ಮತ್ತೆ ಮುನ್ನೆಲೆಗೆ ಬಂದಿದೆ. ‘ದ್ವಿಚಕ್ರ ವಾಹನ ಸವಾರರು ಗುಣಮಟ್ಟದ ಹೆಲ್ಮೆಟ್ ಬಳಸಿ’ ಎಂದು ಹೇಳಿರುವುದನ್ನು ಪುನೀತ್ ಅವರ ವಿಡಿಯೋ ಸಹಿತ ಪೊಲೀಸರು ಮತ್ತು ಬಿಡುಗಡೆ ಮಾಡಿದ್ದಾರೆ.
ಅಚ್ಚಾದ ಅಪ್ಪು: ‘ಅನವರತ ಅಪ್ಪು’ ಕೃತಿ (ಲೇ: ರಾಘವೇಂದ್ರ ಅಡಿಗ ಎಚ್.ಎನ್.) ಈಗಾಗಲೇ ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ ಶರಣ್ ಹುಲ್ಲೂರು ಅವರು ಬರೆದ ‘ನೀನೇ ರಾಜಕುಮಾರ’ ಆತ್ಮಚರಿತ್ರೆಯನ್ನು ನಟ ಕಿಚ್ಚ ಸುದೀಪ್ ಬಿಡುಗಡೆಗೊಳಿಸಿದ್ದಾರೆ. ಜನ್ಮದಿನದ ಹೊತ್ತಿನ ಪುಟ್ಟ ನೆಪದಲ್ಲಿ ಬಗೆದಷ್ಟೂ ಇದೆ ಅಪ್ಪು ಅವರ ನೆನಪು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.