ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಮಾಡಿರುವ ನಟ ಪ್ರಮೋದ್ ಶೆಟ್ಟಿ, ನಾಯಕನಾಗಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಒಂದಕ್ಕಿಂತ ಒಂದು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ‘ಶಭಾಷ್ ಬಡ್ಡಿಮಗ್ನೆ’ ಚಿತ್ರದ ಫಸ್ಟ್ ಲುಕ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಬಿ.ಎಸ್.ರಾಜಶೇಖರ್ ಕಥೆ ಬರೆದು, ನಿರ್ದೇಶಿಸಿರುವ ಈ ಚಿತ್ರದ ಮೋಷನ್ ಪೋಸ್ಟರ್ ಅನ್ನು ನಟ ರಕ್ಷಿತ್ ಶೆಟ್ಟಿ ಬಿಡುಗಡೆಗೊಳಿಸಿ ಗೆಳೆಯನಿಗೆ ಶುಭ ಕೋರಿದರು. ಕಿಶನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರಕಾಶ್ ನಿರ್ಮಾಣ ಮಾಡುತ್ತಿರುವ ಚಿತ್ರದಲ್ಲಿ ಆದ್ಯಪ್ರಿಯಾ ನಾಯಕಿ.
‘ವಡ್ಡಾರಾಧಕ’, ‘ಶಬರಿ’ ಕಿರುಚಿತ್ರಗಳಿಂದ ಭರವಸೆ ಮೂಡಿಸಿರುವ ಯುವ ನಿರ್ದೇಶಕ ಅನೀಶ್ ಶರ್ಮಾ ನಿರ್ದೇಶಿಸಿ, ಪ್ರಮೋದ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ‘ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ’ ಚಿತ್ರದ ಶೀರ್ಷಿಕೆ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಮಲೆನಾಡಿನ ಹಾಸ್ಯಮಯ ಕಥೆಯನ್ನು ಹೊಂದಿರುವ ಚಿತ್ರದಲ್ಲಿ ಶೆಟ್ಟರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ತರಂಜನ್ ಕಶ್ಯಪ್, ವಲ್ಲಭ್ ಸೂರಿ, ಸುನಿತ್ ಹಲಗೇರಿ ಈ ಚಿತ್ರದ ನಿರ್ಮಾಪಕರು. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಮಗ್ನವಾಗಿದೆ. ರಾಘು ಶಿವಮೊಗ್ಗ, ಕಿರಣ್ ನಾಯಕ್, ಮಂಜುನಾಥ್ ಹೆಗಡೆ ಮೊದಲಾದವರು ಚಿತ್ರದಲ್ಲಿದ್ದು, ಜೋಗದ ಬಳಿಯ ಇಡುವಾಣಿಯಲ್ಲಿ ಚಿತ್ರೀಕರಣ ಮಾಡಲಾಗಿದೆ.
ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸಿರುವ ‘ಜಲಂಧರ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಮುಂದಿನ ಕೆಲಸಗಳು ಬಿರುಸಿನಿಂದ ಸಾಗಿವೆ. ವಿಷ್ಣು ವಿ. ಪ್ರಸನ್ನ ಚೊಚ್ಚಲ ನಿರ್ದೇಶನದ ಈ ಚಿತ್ರ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಕಾವೇರಿ ನದಿ ದಡದ ಮಧುವತ್ತಿ ಎಂಬ ಊರಿನಲ್ಲಿ ನಡೆಯುವ ಕಥೆಯನ್ನು ಹೊಂದಿರುವ ಚಿತ್ರವನ್ನು ಸ್ಟೆಪ್ ಅಪ್ ಪಿಕ್ಚರ್ಸ್ ಲಾಂಛನದಲ್ಲಿ ಮದನ್ ಎಸ್ ನಿರ್ಮಾಣ ಮಾಡುತ್ತಿದ್ದಾರೆ. ಲೋಕೇಶ್ ಗೌಡ, ರಘು ರಮಣಕೊಪ್ಪ, ಬಾಲ ರಾಜವಾಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.