ನಟಿಯೊಬ್ಬರ ಮೇಲಿನ ದೌರ್ಜನ್ಯದ ಆರೋಪ ಹೊತ್ತಿರುವ ನಟ ದಿಲೀಪ್‌ಗೆ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ(ಅಮ್ಮ)ವು ಬೆಂಬಲ ಮುಂದುವರಿಸಿದ್ದನ್ನು ವಿರೋಧಿಸಿ ಮಲಯಾಳಂ ನಾಲ್ವರು ನಟಿಯರು ಸಂಘದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ನಟಿಯರ ನಿರ್ಧಾರಕ್ಕೆ ಬೆಂಬಲಿಸಿರುವ ಕನ್ನಡ ಚಿತ್ರರಂಗ (ಕೆಎಫ್‌ಐ) ಹಾಗೂ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್ ಈಕ್ವಿಲಿಟಿ (ಫೈರ್) ‘ಅಮ್ಮ’ ನಿರ್ಧಾರದ ವಿರುದ್ಧ ಆಕ್ರೋಶ ಹಾಗೂ ಅಸಮಾಧಾನವನ್ನು ಹೊರಹಾಕಿದೆ.
‘ಅಮ್ಮ’ ಸಂಘಟನೆಗೆ ಕೆಎಫ್‌ಐ ಹಾಗೂಫೈರ್ ಪತ್ರ ಬರೆದಿದ್ದು, ಇದಕ್ಕೆ ಕನ್ನಡ ಚಿತ್ರರಂಗದ ನಿರ್ದೇಶಕರಾದ ಯೋಗರಾಜ್ ಭಟ್, ಗಿರಿರಾಜ್ ಬಿ.ಎನ್, ಕವಿತಾ ಲಂಕೇಶ್, ನಟಿ ಶ್ರುತಿ ಹರಿಹರನ್, ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್, ಸೋನು ಗೌಡ, ನಟರಾದ ರಕ್ಷಿತ್ ಶೆಟ್ಟಿ, ದಿಗಂತ್, ಧನಂಜಯ್, ಚೇತನ್ ಸೇರಿದಂತೆ ಸುಮಾರು 50 ಜನ ಸಹಿ ಮಾಡಿದ್ದಾರೆ.
‘ನಟಿಯೊಬ್ಬರನ್ನು ಅಪಹರಿಸಿ, ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ನಟ ದಿಲೀಪ್ ಪ್ರಮುಖ ಆರೋಪಿ. ದಿಲೀಪ್ ಬಂಧನವಾದ ಬಳಿಕ ಸಂಘವು ಅವರ ಸದಸ್ಯತ್ವವನ್ನು ಅಮಾನತು ಮಾಡಿತ್ತು. ಆದರೆ ಈ ಅಮಾನತು ಆದೇಶವನ್ನು ರದ್ದು ಮಾಡಲು ಪ್ರತಿಷ್ಠಿತ ಸಂಘವು ನಿರ್ಧರಿಸಿರುವುದು ಆಘಾತಕಾರಿ ಹಾಗೂ ದುರಾದೃಷ್ಟ’ ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ.
‘ಆರೋಪ ಸಾಬೀತಾಗುವವರೆಗೂ ಆತ ಅಪರಾಧಿಯಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಆರೋಪಿಯು ಸಂಘದ ಸದಸ್ಯನಾಗಿದ್ದು, ಇಲ್ಲಸಲ್ಲದ ಕೆಲಸಗಳನ್ನು ಮಾಡುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ.ರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರ ಸುರಕ್ಷತೆ ಹಾಗೂ ಲಿಂಗ ಸಮಾನತೆ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗ ಸಿನಿಮಾ ಕ್ಷೇತ್ರದವರ ನಾವು ಅದನ್ನು ಅನುಕರಿಸುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. ‘ಅಮ್ಮ’ ತನ್ನ ನಿರ್ಧಾರವನ್ನು ಶೀಘ್ರ ಹಿಂಪಡೆಯಬೇಕು ಮತ್ತು ಆ ಮೂಲಕ ಸುರಕ್ಷಿತ ಹಾಗೂ ಆರೋಗ್ಯಕರ ವಾತಾವರಣವನ್ನು ಕಲ್ಪಿಸಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.
‘ನಟ ದಿಲೀಪ್ ಅಪರಾಧಿ ಅಥವಾ ಮುಗ್ಧನೇ ಎಂದು ನಾವು ಕೇಳುತ್ತಿಲ್ಲ. ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಆರೋಪಿಯ ಅಮಾನತು ಆದೇಶವನ್ನು ರದ್ದು ಮಾಡಲು ಸಂಘವು ಮುಂದಾಗಿರುವುದನ್ನು ನಾವು ಪ್ರಶ್ನಿಸುತ್ತಿದ್ದೇವೆ. ಇದು ತಪ್ಪು ಮಾಹಿತಿ ಕೊಡುತ್ತದೆ. ಎಲ್ಲರಿಗೂ ಗೌರವಯುತವಾಗಿ, ಆರೋಗ್ಯಕರ ವಾತಾವರಣದಲ್ಲಿ ಕೆಲಸ ಮಾಡುವ ಅವಕಾಶ ನೀಡಬೇಕು’ ಎಂದು ಶ್ರುತಿ ಹರಿಹರನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.