ADVERTISEMENT

ಒಳ್ಳೆಯ ಅವಕಾಶಗಳು ಬರುತ್ತಿವೆ: ನಟ ಅಭಿಮನ್ಯು ಕಾಶಿನಾಥ್‌ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 22:10 IST
Last Updated 17 ಅಕ್ಟೋಬರ್ 2024, 22:10 IST
film
film   

ಅಭಿಮನ್ಯು ಕಾಶಿನಾಥ್‌ ಅಭಿನಯದ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರ ಅ.25ರಂದು ತೆರೆ ಕಾಣುತ್ತಿದೆ. ‘ಅಭಿಮನ್ಯು S/O ಕಾಶಿನಾಥ್‌’ ಇತ್ತೀಚೆಗಷ್ಟೇ ಸೆಟ್ಟೇರಿದೆ. ನಿಧಾನವಾಗಿ ಚಿತ್ರೋದ್ಯಮದಲ್ಲಿ ಒಳ್ಳೆಯ ಅವಕಾಶಗಳನ್ನು ಪಡೆಯುತ್ತಿರುವ ಅವರು ತಮ್ಮ ಸಿನಿಪಯಣದ ಕುರಿತು ಮಾತನಾಡಿದ್ದಾರೆ.

––

‘ಎಲ್ಲಿಗೆ ಪಯಣ ಯಾವುದೋ ದಾರಿ’ ಡಾ.ರಾಜ್‌ಕುಮಾರ್‌ ಅಭಿನಯದ ‘ಸಿಪಾಯಿ ರಾಮು’ ಚಿತ್ರದ ಹಾಡಿನ ಸಾಲಿದು. ನಿರ್ದೇಶಕರು ಶೀರ್ಷಿಕೆ ಹೇಳಿದಾಗಲೇ ಬಹಳ ಅರ್ಥಪೂರ್ಣ ಎನ್ನಿಸಿತು. ಎಲ್ಲರಿಗೂ ಬೇಗ ಕನೆಕ್ಟ್‌ ಆಗುವ ಶೀರ್ಷಿಕೆ. ನಾವು ಬದುಕಿನಲ್ಲಿ ಒಂದು ದಾರಿಯಲ್ಲಿ ಹೋಗುತ್ತ ಇರುತ್ತೇವೆ. ಅಚಾನಕ್ಕಾಗಿ ತಿರುವು ಸಿಕ್ಕಿ ಎಲ್ಲಿಗೋ ತಲುಪುತ್ತೇವೆ. ಒಂದು ಗಂಭೀರ ವಿಷಯದೊಂದಿಗೆ ಪ್ರೇಮಕಥೆ ಹೊಂದಿರುವ ಚಿತ್ರ. ಸಸ್ಪೆನ್ಸ್‌, ಥ್ರಿಲ್ಲರ್‌ ಅಂಶಗಳೊಂದಿಗೆ ನಿರ್ದೇಶಕರು ಸಿನಿಮಾವನ್ನು ನಿರೂಪಣೆ ಮಾಡಿದ್ದಾರೆ’ ಎನ್ನುತ್ತ ಸಿನಿಮಾ ಬಗ್ಗೆ ಮಾಹಿತಿ ನೀಡಿದರು ಅಭಿಮನ್ಯು.

ADVERTISEMENT

‘ಕೋವಿಡ್‌ ನಂತರ, ಒಟಿಟಿಗಳು ಪ್ರಾಬಲ್ಯ ಸಾಧಿಸಿರುವಾಗ ಹೊಸ ಕಥೆ ಮಾಡಿದ್ದೇವೆ. ನಮ್ಮದು ಯಾರೂ ಮಾಡಿರದಂತಹ ಕಥೆ ಎಂದು ಪ್ರಚಾರ ಮಾಡಿಕೊಳ್ಳುವುದು ತಪ್ಪಾಗುತ್ತದೆ. ಬಹುತೇಕ ಕಥೆಗಳು ಎಲ್ಲೋ ಒಂದು ಕಡೆ ಬಂದಿರುತ್ತದೆ. ರಾಮಾಯಣ, ಮಹಾಭಾರತ, ಪುರಾಣಗಳಲ್ಲಿನ ಕಥೆಯ ಎಳೆಯಾಗಿರುತ್ತದೆ. ಹೀಗಾಗಿ ನಾವು ಪ್ರೇಕ್ಷಕರಿಗೆ ಹೊಸತು ನೀಡುತ್ತೇವೆ ಎಂಬುದು ಸುಳ್ಳು. ವೈನು ಹಳತು, ಆದರೆ ಬಾಟಲಿ ಹೊಸತು. ಅದರ ವಿನ್ಯಾಸ ಬೇರೆ. ಶೈಲಿ ಭಿನ್ನ ಎಂಬಂತೆ ಸಿನಿಮಾ ನಿರೂಪಣೆ ಬೇರೆಯಾಗಿದೆ. ಕಥೆ ಹೇಳಿದ ರೀತಿ ಭಿನ್ನವಾಗಿದೆ. ಪಾತ್ರಗಳ ನಡುವಿನ ಗ್ರಾಫ್‌ ನಮ್ಮ ನಿತ್ಯದ ಬದುಕಿನ ಪ್ರತಿಬಿಂಬವಾಗಿದೆ’ ಎಂದರು.

‘ಅಪ್ಪ ಬದುಕಿದ್ದಾಗ ‘ಅನುಭವ–2’, ‘ಅನಂತನ ಅವಾಂತರ–2’ ಇತ್ಯಾದಿ ಸಿನಿಮಾ ಮಾಡಿ ಎಂದು ಸಾಕಷ್ಟು ಜನ ಬಂದರು. ಆ ರೀತಿಯ ಪಾತ್ರಗಳು ನನಗೆ ಒಗ್ಗುವುದಿಲ್ಲ ಎಂದು ಅಪ್ಪನಿಗೆ ಚೆನ್ನಾಗಿ ಗೊತ್ತಿತ್ತು. ಅದಲ್ಲದೇ ‘ಅನುಭವ’ದಂತಹ ಸಿನಿಮಾವನ್ನು ಮತ್ತೆ ಮಾಡಲು ಸಾಧ್ಯವಿಲ್ಲ. ಅದು ಮಾಡಿದ್ದಲ್ಲ, ಆಗಿದ್ದು ಎನ್ನುತ್ತಿದ್ದರು ಅಪ್ಪ. ಆಗ ಅಪ್ಪ ನನ್ನನ್ನು ಇಟ್ಟುಕೊಂಡು ಬೇರೆ ರೀತಿಯ ಸಿನಿಮಾ ಮಾಡಬೇಕೆಂದು ಆಲೋಚಿಸಿದರು. ಆದರೆ ಅವಕಾಶ ಸಿಗಲಿಲ್ಲ. ಈಗ ಅವಕಾಶಗಳು ಬರುತ್ತಿವೆ. ಅಪ್ಪ ಮಾಡಿದ ರೀತಿಯ ಸಿನಿಮಾಗಳು ಈಗ ಬರುತ್ತಿಲ್ಲ ಎಂದು ಹಲವರು ಹೇಳುತ್ತಾರೆ. ‘ಸುರಸುಂದರಾಂಗ’ ರೀತಿಯ ಕಥೆಯನ್ನು ಹೊಂದಿರುವ ಸಿನಿಮಾ ‘ಅಭಿಮನ್ಯು S/O ಕಾಶಿನಾಥ್‌’. ಇದರಲ್ಲಿ ಕಾಶಿನಾಥ್‌ ಬದುಕಿನ ಕಥೆಯಿಲ್ಲ. ನನ್ನ–ಅಪ್ಪನ ನಡುವಿನ ಸಂಬಂಧದ ಕಥೆಯಲ್ಲ. ‘ಒಂದು ಮೊಟ್ಟೆಯ ಕಥೆಯಲ್ಲಿ’ ರಾಜ್‌ಕುಮಾರ್‌ ಬಂದುಹೋಗುವಂತೆ ಈ ಚಿತ್ರದಲ್ಲಿ ಕಾಶಿನಾಥ್‌ ಬಂದು ಹೋಗುತ್ತಾರೆ’ ಎಂದು ವಿವರ ನೀಡಿದರು.

‘ಯಶಸ್ಸಿಗೆ ಸಿದ್ಧಸೂತ್ರವಿಲ್ಲ. ಇಷ್ಟಪಡುವ ಕೆಲಸವನ್ನು ಕಷ್ಟಪಟ್ಟು ಮಾಡಬೇಕು. ಸಂಪೂರ್ಣವಾಗಿ ಆ ಕೆಲಸಕ್ಕೆ ನಮ್ಮನ್ನು ಒಪ್ಪಿಸಿಕೊಳ್ಳಬೇಕು. ಸಿನಿಮಾರಂಗದಲ್ಲಿ ಚಿತ್ರವನ್ನು ಹಿಟ್‌ ಮಾಡುತ್ತೇವೆ ಎಂಬುದು ಸುಳ್ಳು, ಅದು ಹಿಟ್‌ ಆಗುವುದು. ಜನರ ನಡುವಿನ ಕಥೆಗಳು ಬರಬೇಕು. ಜನರ ಬದುಕಿನಿಂದಲೇ ಕಥೆಗಳನ್ನು ಹೆಕ್ಕಿತರಬೇಕು. ತೀರ ಸಹಜವೆನಿಸುವ ಕಥೆಗಳು ಬೇಕು ಎನ್ನುತ್ತಿದ್ದರು ಅಪ್ಪ. ಜನರ ನಡುವೆ ನಿಂತು ‘ಅಭಿಮನ್ಯು S/O ಕಾಶಿನಾಥ್‌’ ಕಥೆ ಮಾಡಿಕೊಂಡು ಬಂದಿದ್ದಾರೆ ನಿರ್ದೇಶಕ ರಾಜ್‌ಮುರಳಿ. ಇನ್ನಷ್ಟೇ ಚಿತ್ರೀಕರಣ ಪ್ರಾರಂಭವಾಗಬೇಕು’ ಎಂದು ತಮ್ಮ ಮುಂದಿನ ಚಿತ್ರದ ಕುರಿತು ಅವರು ಮಾಹಿತಿ ನೀಡಿದರು.

‘ಸೂರಿ ಲವ್‌ ಸಂಧ್ಯಾ’ ಎನ್ನುವ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಇದು ನನ್ನ ಮೂರನೇ ಸಿನಿಮಾ. ಇದಾದ ಬಳಿಕ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರ ಮಾಡಿದ್ದು. ಇದೇ ಮೊದಲು ಬಿಡುಗಡೆಯಾಗುತ್ತಿದೆ. ಕ್ರಿಕೆಟರ್‌ ಆಗಬೇಕು ಎಂದುಕೊಂಡಿದ್ದವನು. ಅದು ಸಾಧ್ಯವಿಲ್ಲವೆಂದು ಸಿನಿಮಾ ಕಡೆಗೆ ತಿರುಗಿದೆ. ‘ಅಭಿನಯ ತರಂಗ’ದಲ್ಲಿ ನನ್ನೊಳಗಿನ ನಟನನ್ನು ಹುಡುಕಿಕೊಂಡೆ. ಬಹಳ ಜನ ನಿರ್ದೇಶನ ನಿನ್ನ ರಕ್ತದಲ್ಲಿಯೇ ಇದೆ ಎನ್ನುತ್ತಾರೆ. ಆದರೆ ನನಗೆ ನಿರ್ದೇಶನದ ಬಗ್ಗೆ ಹೆಚ್ಚು ಒಲವಿಲ್ಲ. ನಟನಾಗಿಯೇ ಇನ್ನಷ್ಟು ಚಿತ್ರಗಳ ಹುಡುಕಾಟದಲ್ಲಿರುವೆ’ ಎಂದು ತಮ್ಮ ಮುಂದಿನ ಯೋಜನೆಗಳನ್ನು ವಿವರಿಸಿದರು. 

ಅಭಿಮನ್ಯು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.