ADVERTISEMENT

‘ಸ್ವಪ್ನಮಂಟಪ’ ಕಾದಂಬರಿಗೆ ಸಿನಿಮಾ ರೂಪ ನೀಡಿದ ಬರಗೂರು ರಾಮಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 15 ಮೇ 2024, 14:29 IST
Last Updated 15 ಮೇ 2024, 14:29 IST
ವಿಜಯ ರಾಘವೇಂದ್ರ, ರಂಜಿನಿ ರಾಘವನ್‌ 
ವಿಜಯ ರಾಘವೇಂದ್ರ, ರಂಜಿನಿ ರಾಘವನ್‌    

ನಿರ್ದೇಶಕ ಬರಗೂರು ರಾಮಚಂದ್ರಪ್ಪ ತಮ್ಮ ‘ಸ್ವಪ್ನಮಂಟಪ’ ಕಾದಂಬರಿಗೆ ಸಿನಿಮಾ ರೂಪ ನೀಡಿದ್ದಾರೆ. ವಿಜಯ ರಾಘವೇಂದ್ರ ಹಾಗೂ ರಂಜಿನಿ ರಾಘವನ್‌ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

ಮೈಸೂರಿನ ಬಾಬುನಾಯ್ಕ್ ‘ಸ್ವಪ್ನಮಂಟಪ’ವನ್ನು ನಿರ್ಮಿಸಿದ್ದಾರೆ. ಬರಗೂರು ಅವರೇ ಚಿತ್ರಕಥೆ, ಸಂಭಾಷಣೆ, ಗೀತ ರಚನೆ ಜತೆಗೆ ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡವು ಡಬ್ಬಿಂಗ್ ಕೆಲಸಗಳನ್ನೂ ಮುಗಿಸಿದೆ. ಕನಕಪುರ ರಸ್ತೆಯಲ್ಲಿರುವ  ಹಳ್ಳಿಯೊಂದರಲ್ಲಿ ಹೊಸಮನೆ ಮೂರ್ತಿ ಹಾಕಿದ್ದ ಸೆಟ್‌ನಲ್ಲಿ ಚಿತ್ರೀಕರಣ ನಡೆಸಲಾಗಿದೆ.

‘ಚಿತ್ರವು ಪಾರಂಪರಿಕ ಸ್ಥಳಗಳ ರಕ್ಷಣೆಯನ್ನು ಪ್ರತಿಪಾದಿಸುವ ಕಥಾವಸ್ತುವನ್ನು ಒಳಗೊಂಡಿದೆ. ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ ಸ್ವಪ್ನಮಂಟಪವನ್ನು ಕೆಡವಿ ಹಾಕುವ ಪ್ರಯತ್ನವನ್ನು ಕೆಲವರು ಮಾಡಿದಾಗ, ಕಥಾನಾಯಕ ಮತ್ತು ನಾಯಕಿ ಜನರನ್ನು ಸಂಘಟಿಸಿ ಅದನ್ನು ಉಳಿಸಿ ಸರ್ಕಾರದ ಅಧಿಕೃತ ಸ್ಮಾರಕದ ಪಟ್ಟಿಗೆ ಸೇರಿಸುವ ಮೂಲಕ ಚಾರಿತ್ರಿಕ ಸ್ಮಾರಕಗಳ ಪರಂಪರೆಯನ್ನು ಎತ್ತಿ ಹಿಡಿಯುತ್ತಾರೆ. ಈ ಸಾಮಾಜಿಕ ಚಿತ್ರದಲ್ಲಿ ಸ್ವಪ್ನಮಂಟಪವನ್ನು ನಿರ್ಮಾಣ ಮಾಡಿದ್ದ ರಾಜ-ರಾಣಿಯರ ಕಥನವೂ ಹಿನ್ನೋಟ ತಂತ್ರದಲ್ಲಿ ಸೇರಿಸಿರುವುದು ವಿಶೇಷ’ ಎಂದಿದ್ದಾರೆ ಬರಗೂರು. 

ADVERTISEMENT

ಸುಂದರರಾಜ, ಶೋಭಾ ರಾಘವೇಂದ್ರ, ರಜನಿ, ಮಹಾಲಕ್ಷ್ಮಿ, ಸುಂದರರಾಜ ಅರಸು, ರಾಜಪ್ಪ ದಳವಾಯಿ, ಅಂಬರೀಶ ಸಾರಂಗಿ, ಮೈಸೂರು ಮಂಜುಳ, ಉಮ್ಮತ್ತೂರು ಬಸವರಾಜು, ವೆಂಕಟರಾಜು, ಶಿವಲಿಂಗಪ್ರಸಾದ್, ಭಾರತಿರಮೇಶ್, ಗುಂಡಿ ರಮೇಶ್ ತಾರಾಗಣದಲ್ಲಿ ಇದ್ದಾರೆ.

ಚಿತ್ರಕ್ಕೆ ನಾಗರಾಜ ಆದವಾನಿ ಛಾಯಾಚಿತ್ರಗ್ರಹಣ, ಸುರೇಶ್ ಅರಸು ಸಂಕಲನ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಮತ್ತು ತ್ರಿಭುವನ್ ನೃತ್ಯ ಸಂಯೋಜನೆ ಇದೆ. ನಟ್ರಾಜ್ ಶಿವು ಮತ್ತು ಪ್ರವೀಣ್ ಚಿತ್ರದ ಸಹನಿರ್ದೇಶಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.